

ಸಿದ್ದಾಪುರ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜನ್ಮದಿನದ ಅಂಗವಾಗಿ
ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿ, ಶ್ರೇಯಸ್ ಆಸ್ಪತ್ರೆ ಸಿದ್ದಾಪುರ ಹಾಗೂ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಶ್ರೇಯಸ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ವರ್ಷಗಳು ಉರುಳುತ್ತಲೇ ಇರುತ್ತವೆ. ಹಿಂದಿನದನ್ನು ಸಿಂಹಾವಲೋಕನ ಮಾಡೋಣ. ಮುಂದಿನ ದಿನಗಳಲ್ಲಿ ಒಳ್ಳೆಯದನ್ನು ಮಾಡೋಣ. ಜೀವ ಉಳಿಸುವ ರಕ್ತವನ್ನು ಪ್ರತಿಯೊಬ್ಬರು ದಾನ ಮಾಡಬೇಕು. ಸಮಾಜಮುಖಿ ಚಟುವಟಿಕೆ ನಡೆಸುವ ಮನೋಭಾವ ಎಲ್ಲರಲ್ಲೂ ಬರಲಿ. ಮಾನವೀಯತೆಯ ದೃಷ್ಟಿಕೋನ ನಮ್ಮಲ್ಲಿ ಮೂಡಬೇಕು ಎಂದರು.

ರಾಷ್ಟ್ರೋತ್ಥಾನ ರಕ್ತ ಕೇಂದ್ರದ ದತ್ತಮೂರ್ತಿ ಕುಲಕರ್ಣಿ ಶಿಬಿರ ಉದ್ಘಾಟಿಸಿ ಮಾತನಾಡಿ, ದಾನಗಳಲ್ಲಿ ಅತ್ಯಂತ ಮುಖ್ಯವಾದ ರಕ್ತದಾನ ಜೀವದಾನವಾಗಿದೆ. ರಕ್ತದ ಕೊರತೆಯಿಂದ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಒಬ್ಬರು ನೀಡಿದ ರಕ್ತ ಮೂವರ ಪ್ರಾಣ ಉಳಿಸುತ್ತದೆ. ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಎಂದರು.
ಪಟ್ಟಣ ಪಂಚಾಯತ ಸದಸ್ಯ ಗುರುರಾಜ ಶಾನಭಾಗ ಪ್ರಾಸ್ಥಾ ವಿಕ ಮಾತನಾಡಿ, ಸಂಪೂರ್ಣ ಜೀವನವನ್ನು ರಾಷ್ಟ್ರದ ಹಿತಕ್ಕಾಗಿ ಸಮರ್ಪಿತಗೊಳಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಭಾಧ್ಯಕ್ಷರಾಗಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ ಎಂದರು.


ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ವೀರಭದ್ರ ಪಾಟೀಲ್ ಮಾತನಾಡಿದರು. ಶ್ರೇಯಸ್ ಆಸ್ಪತ್ರೆಯ ಶ್ರೀಧರ ವೈದ್ಯ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಸುಮಂಗಲಾ ವೈದ್ಯ ಉಪಸ್ಥಿತರಿದ್ದರು. ನಿವೃತ್ತ ಯೋಧ ಪಿ.ಡಿ.ನಾಯ್ಕ ಹಲಗೇರಿ ಪ್ರಾರ್ಥಿಸಿದರು. ಪಟ್ಟಣ ಪಂಚಾಯತ ಸದಸ್ಯ ಮಾರುತಿ ನಾಯ್ಕ ಹೊಸೂರ ಸ್ವಾಗತಿಸಿದರು.
ಶಾಸಕ ವಿಶ್ವೇಶ್ವರ ಹೆಗಡೆ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ರಕ್ತದಾನ ಶಿಬಿರದ ಸಭಾ ಕಾರ್ಯಕ್ರಮದಲ್ಲಿ ತಾಲೂಕಿನ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು.

