

ಕಾಂಗ್ರೆಸ್ ರಾಜ್ಯಾದಾದ್ಯಂತ ಆಯೋಜಿಸಿರುವ ಎಕತೆಗಾಗಿ ನಡಿಗೆ ಭಾಗವಾಗಿ ಇಂದು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಕಾಂಗ್ರೆಸ್ ನ ಪಾದಯಾತ್ರೆ ನಡೆಯಿತು. ಜಿಲ್ಲೆಯಲ್ಲಿ ಕಳೆದ ವಾರದಿಂದಲೂ ಮಳೆ ನಿರಂತರವಾಗಿ ಸುರಿಯುತ್ತಿದೆ. ಈ ವಿಪರೀತ ಮಳೆಯ ನಡುವೆ ಇಂದು ಏಕತೆಗಾಗಿ ನಡಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕರೊಂದಿಗೆ ೧೬ ಕಿ.ಮೀ ನಡೆದರು.

ಈ ಪಾದಯಾತ್ರೆಯ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಮಧು ಬಂಗಾರಪ್ಪ ಹಿಂದೆ ಕಾಂಗ್ರೆಸ್ ಹೊರಗಿನ ಶತ್ರುಗಳ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಿತ್ತು. ಈಗ ನಮ್ಮ ದೇಶದೊಳಗಿನ ಶತ್ರುಗಳಾದ ಬಿ.ಜೆ.ಪಿ. ವಿರುದ್ಧ ನಮ್ಮ ಹೋರಾಟ ಪ್ರಾರಂಭವಾಗಿದೆ ಅದಕ್ಕೆ ಜನರ ಸಹಕಾರ ಬೇಕು ಎಂದರು. ಹರ್ ಘರ್ ತಿರಂಗಾ ಕಾರ್ಯಕ್ರಮದ ಜೋಡಿ ತಮ್ಮ ಆಪ್ತ ಉದ್ಯಮಿಗಳನ್ನು ಬೆಳೆಸಲು ಸ್ವಾತಂತ್ರ್ಯ ಹೋರಾಟ ಮತ್ತು ಧ್ವಜಗಳನ್ನು ವ್ಯಾಪಾರ ವ್ಯವಹಾರದ ಸರಕಾಗಿಸಿದ್ದು ಈ ದೇಶದ ದುರಂತ ಎಂದು ದೂರಿದರು.

ಈ ಕಾರ್ಯಕ್ರಮದಲ್ಲಿ ವಿಷಾದದಿಂದ ಮಾತನಾಡಿದ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಬಡವರಿಗೆ ಭೂಮಿ, ಮಹಿಳೆಯರಿಗೆ ಮೀಸಲಾತಿ, ಹಿಂದುಳಿದವರಿಗೆ ಮೀಸಲಾತಿ ಕೊಟ್ಟಿದ್ದ ಕಾಂಗ್ರೆಸ್ ಈಗ ದಯನೀಯ ಸ್ಥಿತಿಯಲ್ಲಿದೆ. ಜನಪರ ಕಾರ್ಯಕ್ರಮ ಕೊಟ್ಟ ಕಾಂಗ್ರೆಸ್ ಉಳಿಸಲು ತನ್ನ ಕೊನೆಯ ಉಸಿರು ಇರುವವರೆಗೆ ಶ್ರಮಿಸುವುದಾಗಿ ತಿಳಿಸಿದರು. ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಏಐಸಿಸಿ ವಕ್ತಾರ ಸುಧೀರ್ ಕುಮಾರ ಮೊರಳ್ಳಿ ಸ್ವಾತಂತ್ರ್ಯ ಹೋರಾಟ ಮಾಡದೆ, ದೇಶ ವಿಭಜನೆಗೆ ಕಾರಣವಾದ ಮುಸ್ಲಿಂ ಲೀಗ್ ಮತ್ತು ಹಿಂದೂ ಮಹಾಸಭಾಗಳಿಗೆ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಿಸುವ ನೈತಿಕತೆ ಇಲ್ಲ ಎಂದರು.

