
ಈ ವಿವಾಹದಲ್ಲಿ ವಧು-ವರ ಇಲ್ಲ ಬದಲಿಗೆ ವಧು-ವಧು: ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗ ಸಮುದಾಯದಲ್ಲಿ ವಿಶಿಷ್ಟ ಆಚರಣೆ
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಮಳೆದೇವ ಇಂದ್ರನನ್ನು ಸಂತೃಪ್ತಿಗೊಳಿಸಲು ಹಾಲಕ್ಕಿ ಒಕ್ಕಲಿಗ ಸಮುದಾಯದವರು ಇಬ್ಬರು ಮಹಿಳೆಯರ ಮಧ್ಯೆ ಮದುವೆ ಮಾಡಿಸುತ್ತಾರೆ. ಮಳೆ, ಬೆಳೆ ಚೆನ್ನಾಗಿ ಆಗಿ ಸಂತೃಪ್ತಿ, ಸಂತೋಷ ಸಮಾಜದಲ್ಲಿ ನೆಲೆಸಲಿ ಎಂಬುದು ಇದರ ಸಾಂಕೇತಿಕ ಅರ್ಥವಾಗಿದೆ.


ಗೋಕರ್ಣ(ಉತ್ತರ ಕನ್ನಡ): ಮಳೆ ಬರಲೆಂದು ಕಪ್ಪೆಗಳಿಗೆ ಮದುವೆ ಮಾಡಿಸುವುದು ಕೇಳಿದ್ದೇವೆ. ಇನ್ನು ಹಲವು ಕಡೆ ಹಲವು ಸಂಪ್ರದಾಯಗಳಿವೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಮಳೆದೇವ ಇಂದ್ರನನ್ನು ಸಂತೃಪ್ತಿಗೊಳಿಸಲು ಹಾಲಕ್ಕಿ ಒಕ್ಕಲಿಗ ಸಮುದಾಯದವರು ಇಬ್ಬರು ಮಹಿಳೆಯರ ಮಧ್ಯೆ ಮದುವೆ ಮಾಡಿಸುತ್ತಾರೆ. ಮಳೆ, ಬೆಳೆ ಚೆನ್ನಾಗಿ ಆಗಿ ಸಂತೃಪ್ತಿ, ಸಂತೋಷ ಸಮಾಜದಲ್ಲಿ ನೆಲೆಸಲಿ ಎಂಬುದು ಇದರ ಸಾಂಕೇತಿಕ ಅರ್ಥವಾಗಿದೆ.
ಗೋಕರ್ಣದ ಹತ್ತಿರ ತಾರಮಕ್ಕಿ ಗ್ರಾಮದಲ್ಲಿ ಹುಲಸ್ಕೆರೆ ಹಾಲಕ್ಕಿ ಸಮುದಾಯದ ಸದಸ್ಯರು ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ವರ್ಣರಂಜಿತ ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಜಾನಪದ ಸಂಗೀತ ಮತ್ತು ಗಾಯನ ಮಧ್ಯೆ ಈ ಅಪರೂಪದ ಮದುವೆ ಕಾರ್ಯಕ್ರಮ ನಡೆಯಿತು.
ನಿಧಾನವಾಗಿ ಡಿಜೆ ಮ್ಯೂಸಿಕ್ ನೊಂದಿಗೆ ಯುವಕರು ಹಾಡಿಗೆ ನೃತ್ಯಹಾಕಲು ಆರಂಭಿಸಿದರು. ಗ್ರಾಮಸ್ಥರೆಲ್ಲಾ ಸೇರಿ ಕೇತಕಿ ವಿನಾಯಕ ದೇವಸ್ಥಾನ ಬಳಿ ಮೆರವಣಿಗೆ ತಂಗಿ ಮತ್ತೊಂದು ಬುಡಕಟ್ಟು ಸಮುದಾಯದ ದೇವತೆಯಾದ ಕರಿದೇವರು ಜೊತೆಗೂಡಿ ವಿಶಿಷ್ಟ ಮದುವೆ ನೆರವೇರಿಸಿದರು.
ಇಂದ್ರ ದೇವರನ್ನು ಸಂತೋಷಗೊಳಿಸಲು ಇಬ್ಬರು ಮಹಿಳೆಯರ ಮಧ್ಯೆ ನಡೆಯುವ ವಿಶಿಷ್ಟ ವಿವಾಹ ಇದಾಗಿದ್ದು ಮಳೆ ಕೊರತೆಯಿರುವ ಸಮಯದಲ್ಲಿ ಹೀಗೆ ಮಾಡುತ್ತಾರೆ ಎಂದು ಬುಡಕಟ್ಟು ಸಮುದಾಯದ ಹಿರಿಯ ಸದಸ್ಯ ಸೋಮು ಗೌಡ ಹೇಳಿದ್ದಾರೆ.
ಮಹಿಳೆಯರ ವಿವಾಹದಲ್ಲಿ ಪುರುಷರ ಪಾತ್ರ ಕಡಿಮೆ. ಇದು ಯುಗಯುಗಗಳಿಂದಲೂ ಆಚರಣೆಯಲ್ಲಿದೆ. ಕುತೂಹಲಕಾರಿಯಾಗಿ, ಸಮುದಾಯವು ತನ್ನ ಸಂಪ್ರದಾಯವನ್ನು ಜೀವಂತವಾಗಿರಿಸಿಕೊಂಡಿದೆ. ವಧು ಮತ್ತು ಆಕೆಯ ಸಂಗಾತಿಯನ್ನು ಆಯ್ಕೆ ಮಾಡುವ ಮೂಲಕ ಮದುವೆಯನ್ನು ಸಂಪೂರ್ಣವಾಗಿ ಮಹಿಳೆಯರೇ ನಡೆಸುತ್ತಾರೆ. ಮಂಗಳಕರ ದಿನದಂದು, ಮಹಿಳಾ ‘ಸಮಿತಿ’ ವಧು ಮತ್ತು ವರರನ್ನು ಘೋಷಿಸುತ್ತದೆ. ಎಲ್ಲಾ ಮಹಿಳೆಯರು ಭಾಗವಹಿಸುತ್ತಾರೆ ಎಂದು ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಅರ್ಚಕ ವಿನಾಯಕ ಶಾಸ್ತ್ರಿ ಹೇಳುತ್ತಾರೆ.
ಹೇಗೆ ಮದುವೆ ನಡೆಯುತ್ತದೆ?: ಮಹಿಳೆಯರು ಹೂಮಾಲೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಇತರ ವಿವಾಹ ಆಚರಣೆಗಳನ್ನು ನಡೆಸುತ್ತಾರೆ. ಒಂದೇ ವ್ಯತ್ಯಾಸವೆಂದರೆ, ಪವಿತ್ರ ಸಂಸ್ಕೃತ ಪಠಣಗಳ ಬದಲಿಗೆ ಸ್ಥಳೀಯ ಭಾಷೆಯಲ್ಲಿ ಜಾನಪದ ಹಾಡುಗಳು, ಸಂಗೀತ, ಲಾವಣಿ ಹಾಡುಗಳ ಪಠಣಗಳಿವೆ ಎಂದು ಇಲ್ಲಿನ ನಿವಾಸಿ ಸಂದೀಪ್ ಗೌಡ ಹೇಳಿದರು.
ಒಂದೆರಡು ಗಂಟೆಗಳ ಕಾಲ ನಡೆಯುವ ಮದುವೆಯು ಸಮುದಾಯದ ಮುಖ್ಯಸ್ಥರ ಮನೆಗೆ ಮೆರವಣಿಗೆಯೊಂದಿಗೆ ಕೊನೆಗೊಳ್ಳುತ್ತದೆ, ಅವರು ದಂಪತಿಗೆ ಉಡುಗೊರೆಗಳನ್ನು ನೀಡುತ್ತಾರೆ. ಆದರೆ ಈ ಮದುವೆ ಕಾರ್ಯಕ್ರಮ ಮುಗಿದ ನಂತರ ಮಹಿಳೆಯರು ಒಟ್ಟಿಗೆ ವಾಸಿಸುವುದಿಲ್ಲ, ಮಳೆ ದೇವರನ್ನು ಮೆಚ್ಚಿಸುವ ಸಾಂಕೇತಿಕ ಮದುವೆಯಷ್ಟೆ.
ಭಾರಿ ಮುಂಗಾರು ಮಳೆಯ ನಡುವೆಯೂ ಭಟ್ಕಳ ಹೊರತುಪಡಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ಈ ಬಾರಿ ಕಡಿಮೆ ಮಳೆಯಾಗಿದೆ. ಶೇಕಡಾ 50ಕ್ಕಿಂತ ಕಡಿಮೆ ಬಿತ್ತನೆಯಾಗಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
