

ಕಳೆದ ಎರಡು ದಿವಸಗಳ ಹಿಂದೆ ಹಾಡುಹಗಲೇರಾಜಾರೋಷವಾಗಿ ಸಿದ್ಧಾಪುರದ ನಿಸರ್ಗ ಪೆಟ್ರೋಲ್ ಬಂಕ್ ನಲ್ಲಿ ೪೧ ಸಾವಿರ ಎಗರಿಸಿ ಪರಾರಿಯಾದ ಆಗಂತುಕನ ಹಿಂದೆ ದರೋಡೆಕೋರರ ಜಾಲವಿರುವ ಬಗ್ಗೆ ವದಂತಿಗಳು ಹಬ್ಬ ತೊಡಗಿವೆ. ಸಿದ್ಧಾಪುರದ ನಿಸರ್ಗ ಪೆಟ್ರೋಲ್ ಬಂಕ್ ನಲ್ಲಿ ಕಳ್ಳತನ ಮಾಡಿದ ವ್ಯಕ್ತಿ ಕೇರಳದ ನಂಬರ್ ಪ್ಲೇಟ್ ಹೊಂದಿದ್ದ ವಾಹನ ಬಳಸಿದ್ದ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ ಪ್ರಕಾರ ಕಳೆದ ತಿಂಗಳೊಪ್ಪತ್ತಿನ ಅವಧಿಯಲ್ಲಿ ರಾಜ್ಯದ ಅನೇಕ ಕಡೆ ಇದೇ ಮಾದರಿಯ ಕಳ್ಳತನಗಳಾಗಿವೆ. ವಿದ್ಯಾವಂತ ಸುಸಂಸ್ಕೃತರಂತೆ ಬರುವ ಕಳ್ಳ ಹಣಕಾಸಿನ ವ್ವವಹಾರದ ಪ್ರದೇಶದ ಜನರ ಗಮನವನ್ನು ಬೇರೆಡೆ ಸೆಳೆದು ಚಾಲಾಕಿತನದಿಂದ ಹಣ ಎಗರಿಸುವ ಪ್ರಯತ್ನ ಮಾಡುತ್ತಾನೆ. ಇಂಥ ಪ್ರಯತ್ನ ಮಾಡುವ ಯತ್ನದಲ್ಲಿ ನೂರಕ್ಕೆ ೯೯% ಜಯಗಳಿಸುವ ಈ ಕಳ್ಳರು ಹಣ ಎಗರಿಸದೆ ಕಾಲು ಕಿತ್ತದ್ದೇ ಇಲ್ಲ. ಈ ಬಗ್ಗೆ ರಾಜ್ಯದ ಅನೇಕ ಕಡೆ ದೂರುಗಳು ದಾಖಲಾಗಿದ್ದು ಖಚಿತ ಸುಳಿವು,ವಿಶೇಶ ತನಿಖೆಗಳ ಆಧಾರದಲ್ಲಿ ಈ ಕಳ್ಳರ ಹೆಡೆಮುರಿಗೆ ಕಟ್ಟಲು ಪೊಲೀಸ್ ಪ್ರಯತ್ನ ಸಾಗಿದೆ. ಒಂದು ಪ್ರಕರಣದಲ್ಲಿ ಆರೋಪಿ ಸೆರೆಯಾದರೆ ಅನೇಕ ಪ್ರಕರಣಗಳ ಸುಳಿವು ದೊರೆಯಬಹುದೆನ್ನುವ ನಿರೀಕ್ಷೆಯಲ್ಲಿರುವ ಪೊಲೀಸರಿಗೆ ಈ ಕಳ್ಳರು ಎಲ್ಲಿಯವರೆಗೆ ಚಳ್ಳೆಹಣ್ಣು ತಿನ್ನಿಸಬಹುದೆನ್ನುವ ಕುತೂಹಲವಿದೆ.
