

ಭಾರತದ ಸ್ವಾತಂತ್ರ್ಯ ಹೋರಾಟ,ಅಸ್ಪ್ರಶ್ಯತೆ ನಿವಾರಣೆ,ಸಾಮಾಜಿಕ ಅನಿಷ್ಟಗಳ ವಿರುದ್ಧದ ಹೋರಾಟದಲ್ಲಿ ಮಹತ್ಮಾಗಾಂಧಿಯವರ ಹೆಸರು ಚಿರಸ್ಥಾಯಿ.ಹಿಂದಿನ ಶತಮಾನದಲ್ಲಿ ಜಾಗತಿಕ ನಾಯಕರಾದ ಭಾರತೀಯ ಯಾರು ಎಂದರೆ ಅದಕ್ಕೆ ಉತ್ತರ ಗಾಂಧಿ ಎನ್ನುವ ನಿಜ ಫಕೀರನ ಹೆಸರು ಬರುವುದು ಪಕ್ಕಾ. ಇಂಥ ಗಾಂಧಿ ಎಲ್ಲೋ ಕೂತು, ಯಾವುದೋ ಊರಿನಲ್ಲಿ ಹೋರಾಟ ಮಾಡುತ್ತಾ ಕರೆ ಕೊಟ್ಟರೆ ಇಡೀ ಭಾರತ ಆ ಕರೆಗೆ ಓಗುಡುತಿತ್ತು. ಇಂಥದ್ದೇ ಒಂದು ಮಹತ್ವದ ಕರೆ ಕ್ವಿಟ್ ಇಂಡಿಯಾ, ೧೯೪೨ ರಲ್ಲಿ ಮಹಾತ್ಮಾಗಾಂಧೀಜಿ ಬ್ರಟೀಷರೇ ಭಾರತ ಬಿಟ್ಟು ತೊಲಗಿ ಎಂದಾಗ ಎದ್ದದ್ದು ಸುನಾಮಿ.
ದೇಶಕ್ಕೆ ದೇಶವೇ ಎದ್ದು ನಿಂತು ಬ್ರಟೀಷರಿಗೆ ಕ್ವಿಟ್ ಇಂಡಿಯಾ ಎಂದಿತು. ಆಗ ಮೈಸೂರು ಸಂಸ್ಥಾನದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಪುಟ್ಟ ಗ್ರಾಮ ಈಸೂರು ೨೦೦ ಜನ ಹೋರಾಟಗಾರರೊಂದಿಗೆ ಬ್ರಿಟೀಷರ ವಿರುದ್ಧ ಹೂಂಕರಿಸಿತು. ಅದು ೧೯೪೨ ರ ಸೆಪ್ಟೆಂಬರ್ ೨೭ ರ ದಿನ ಬ್ರಿಟೀಷ್ ಸರ್ಕಾರದ ಒಬ್ಬ ಅಮಲ್ಧಾರ ಮತ್ತು ಸಬ್ ಇನ್ ಸ್ಪೆಕ್ಟರ್ ದಬ್ಬಾಳಿಕೆ ವಿರುದ್ಧ ಸಿಡಿದೆದ್ದು ಅವರನ್ನು ಕೊಂದೇ ಬಿಟ್ಟರು.
ಬ್ರಟೀಷರಿಗೆ ತೆರಿಗೆ ಕೊಡುವುದಿಲ್ಲ ಎಂದು ಪ್ರಾರಂಭವಾದ ಸ್ಥಳಿಯರ ಚಳವಳಿ ಈಸೂರನ್ನು ಸ್ವತಂತ್ರ ಗ್ರಾಮ ಎಂದು ಘೋಶಿಸುವ ವರೆಗೆ ಮುಂದುವರಿಯಿತು. ಮಾರನೇ ದಿನ ಸೆ.೨೮ ಬ್ರಟೀಷ್ ಸೇನೆ ಈಸೂರಲ್ಲಿ ದಂಗೆ ಮಾಡಿ ಹೋರಾಟಗಾರರನ್ನು ಹೊಡೆದು ಓಡಿಸಿ ಮಹಿಳೆಯರ ಮೇಲೆ ಅತ್ಯಾಚಾರಕ್ಕೂ ಮುಂದಾದರು. ಇದೇ ದಿನ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ೨೦೦ ಜನರಲ್ಲಿ ೫ ಜನರನ್ನು ಗಲ್ಲಿಗೇರಿಸಲಾಯಿತು.
೨೫ ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಇದು ಈಸೂರು ದಂಗೆ, ಮಾರಣಹೋಮದ ಕತೆ. ಅಂದು ಜೀವತೆತ್ತ ಕೆ.ಗುರಪ್ಪ,ಮಲ್ಲಪ್ಪ,ಸೂರ್ಯನಾರಾಯಣ ರಾವ್, ಹಾಲಪ್ಪ ಸೇರಿದ ೫ ಜನ ಮಣ್ಣು ಸೇರಿದರು ಉಳಿದ ೨೫ ಜನರು ಜೀವಿತಾವಧಿ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದವರು ಸ್ವಾತಂತ್ರ್ಯಾ ನಂತರ ಮರಳಿ ಮನೆ ಸೇರಿದರು ಈ ಹೋರಾಟ ಭಾರತದ ಸ್ವಾತಂತ್ರ್ಯ ಹೋರಾಟದ ಮೈಲುಗಲ್ಲು. ಪರಕೀಯ ಆಡಳಿತದ ಪರತಂತ್ರದಿಂದ ಸ್ವತಂತ್ರ ಗ್ರಾಮವಾದ ಈಸೂರು ಹೀಗೆ ಸ್ವಯಂ ಸ್ವತಂತ್ರ ಗ್ರಾಮ ಎಂದು ಘೋಶಿಸಿಕೊಂಡ ಮೊದಲ ಊರು ಈ ಈಸೂರು.


