[ಇದನ್ನು ಓದಲು ಏಳು ನಿಮಿಷ ಸಾಕು]
ಯಾವ ಯಾವ ವಾರ್ಡಿನಲ್ಲಿ ಎಷ್ಟೆಷ್ಟು ಧ್ವಜ ಹಾರಿದೆ ಅಂತ ಈ ದಿನ ಡ್ರೋನ್ ಮೂಲಕವೂ ಸರ್ವೆ ನಡೆದಿದೆ. ಸ್ಪೇನ್‌ನಲ್ಲಿ ಕೂಡ ಕೆಲ ಸಮಯದ ಹಿಂದೆ ಹೀಗೇ ಡ್ರೋನ್ ಹಾರಿಸಿ ಧ್ವಜ ಪರೀಕ್ಷೆ ನಡೆದಿತ್ತು. ವಿಜ್ಞಾನಿಗಳು ನಡೆಸಿದ ಸಮೀಕ್ಷೆ ಅದಾಗಿತ್ತು.
ಅಲ್ಲಿ ಅಷ್ಟೆತ್ತರದ ಮರಗಳ ಮೇಲೆ ಕರಿಗಿಡುಗ (Blcak kites) ಪಕ್ಷಿಗಳು ತಮ್ಮ ಗೂಡುಗಳನ್ನು ನಾನಾ ಬಣ್ಣಗಳ ಬಾವುಟಗಳಿಂದ ಅಲಂಕರಿಸುತ್ತವೆ. ಯಾಕಪ್ಪಾ ಅವು ಹೀಗೆ ತಮ್ಮ ಗೂಡಿನ ಬಗ್ಗೆ ಜಾಹೀರು ಮಾಡುತ್ತವೆ? ಹಾವು, ಕೋತಿ, ಬೇರೆ ಬೇರೆ ಬೇಟೆಗಾರ ಪಕ್ಷಿಗಳು ಗೂಡಿನ ಮೇಲೆ ದಾಳಿ ಮಾಡಿದರೆ ಏನು ಗತಿ? ಅಷ್ಟೂ ಗೊತ್ತಾಗಲ್ವೆ ಈ ಗಿಡುಗಕ್ಕೆ? ತಮ್ಮ ಸಂತತಿ ಸುರಕ್ಷಿತವಾಗಿ ಮುಂದುವರೆಯುವಂತೆ ಮಾಡುವ ಬದಲು ಯಾಕೆ ಈ ಅಪಾಯಕಾರಿ ಡೆಕೊರೇಶನ್ ಹುಚ್ಚು?
-ಹೀಗೆಂದು ಪ್ರಶ್ನೆ ಹುಟ್ಟಿದ್ದಕ್ಕೇ ಪಕ್ಷಿತಜ್ಞರು ಸತ್ಯಸಂಗತಿ ಏನೆಂದು ಪರೀಕ್ಷೆ ಮಾಡಲು ಹೊರಟಿದ್ದರು.
ಪಕ್ಷಿಗಳು ಗೂಡನ್ನು ನಾನಾ ಉದ್ದೇಶಗಳಿಗಾಗಿ ಕಟ್ಟುತ್ತವೆ. ಗೀಜಗದ ಪಕ್ಷಿ ಅಷ್ಟೆಲ್ಲ ಸುಂದರವಾಗಿ ಗೂಡನ್ನು ನಿರ್ಮಿಸಿ, ಹೆಣ್ಣನ್ನು ಕರೆದು ತೋರಿಸುತ್ತದೆ. ಹೆಣ್ಣು ಅದನ್ನು ಇಷ್ಟಪಡದಿದ್ದರೆ ಮತ್ತೂ ಚಂದದ ಗೂಡನ್ನು ಕಟ್ಟಲು ತೊಡಗುತ್ತದೆ. ಚಂದವೊಂದಿದ್ದರೆ ಸಾಲದು, ಅದರೊಳಕ್ಕೆ ಹಾವು ಸುಲಭಕ್ಕೆ ನುಗ್ಗದಂತೆ, ನುಗ್ಗಿದರೂ ಮೊಟ್ಟೆ ಇರುವ ಭಾಗಕ್ಕೆ ತಲೆ ತೂರಿಸಬಾರದು. ಹಾಗೆ ತಾಂತ್ರಿಕವಾಗಿ ಮಜಬೂತಾಗಿದೆ ಇಲ್ಲವೆ ಎಂದು ಪರೀಕ್ಷಿಸಿಯೇ ಹೆಣ್ಣು ಮುಂದಿನ ಹೆಜ್ಜೆ ಇಡುತ್ತದೆ. ಹೆಣ್ಣಿನ ದೃಷ್ಟಿಯಿಂದ ಫೇಲ್ ಆದ ಗೂಡುಗಳು ಖಾಲಿಯಾಗಿಯೇ ಉಳಿಯುತ್ತವೆ; (ಮಲೆನಾಡಿನ ಅದೆಷ್ಟೊ ಕುಟುಂಬಗಳಲ್ಲಿ ಇಂದು ಇದೇ ಪರಿಸ್ಥಿತಿ ಇದೆ).
ಸುಶ್ರಾವ್ಯವಾಗಿ ಹಾಡುವ ಮಡಿವಾಳ ಹಕ್ಕಿ (ಮ್ಯಾಗ್‌ಪೈ) ತನ್ನ ಗೂಡಿನ ಮೇಲೆ ಬಣ್ಣ ಬಣ್ಣದ ರಿಬ್ಬನ್‌ಗಳನ್ನು ತಂದು ಜೋಡಿಸುತ್ತದೆ. ಯುರೋಪಿನ ಮ್ಯಾಗ್‌ಪೈಗಳಿಗೆ ʼಕಳ್ಳ ಹಕ್ಕಿಗಳುʼ ಎಂದೇ ಕರೆಯುತ್ತಾರೆ. ಪಳಪಳ ಹೊಳೆಯುವ ಏನನ್ನಾದರೂ ಅವು ಎತ್ತಿ ತರುತ್ತವೆ. ಕೀಲಿಕೈ, ನಾಣ್ಯ, ಬಳೆ, ಅಷ್ಟೇಕೆ ಒಮ್ಮೆಯಂತೂ ನವ ವಧುವಿನ ಎಂಗೇಜ್‌ಮೆಂಟ್ ಉಂಗುರವನ್ನೂ ಎತ್ತಿ ತಂದು ಗೂಡನ್ನು ಸಿಂಗರಿಸಿದ ಉದಾಹರಣೆ ಇದೆ. ಪಕ್ಷಿಗಳಿಗೂ ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಆಸೆ!
ಐರೋಪ್ಯ ದೇಶಗಳಲ್ಲಿ ಈ ಕಳ್ಳ ಮ್ಯಾಗ್‌ಪೈಗಳು ಜಾನಪದದಲ್ಲಿ ಸೇರಿಹೋಗಿವೆ. ಮನೆಗೆಲಸದ ಹುಡುಗಿಯೊಬ್ಬಳನ್ನು ಕಳ್ಳಿ ಎಂದು ಮರಣದಂಡನೆ ವಿಧಿಸುವ ಒಪೆರಾದ ಹೆಸರೇ ʼಲಾ ಗಾಝಾ ಲಾಡ್ರಾʼ (ಅಂದರೆ ಕಳ್ಳ ಮ್ಯಾಗ್‌ಪೈ) ಅಂತಲೇ ಇದೆ. ಟಿನ್‌ಟಿನ್ ಕಾಮಿಕ್ಸ್ ನಲ್ಲೂ ಬೆಲೆಬಾಳುವ ಹರಳನ್ನು ಇದೇ ಪಕ್ಷಿ ಹಾರಿಸಿಕೊಂಡು ಹೋದ ಪ್ರಸಂಗ ಇದೆ. ಅಷ್ಟೇಕೆ, ಚೇಂಬರ್ಸ್ ನಿಘಂಟಿನಲ್ಲೂ ಮ್ಯಾಗ್‌ಪೈ ಎಂದರೆ ಕಳ್ಳ ಎಂಬ ಅರ್ಥವೂ ಇದೆ.
ಸಂಗಾತಿಯನ್ನು ಆಕರ್ಷಿಸಲು ಈ ಪುಟ್ಟ ಪಕ್ಷಿ ತನ್ನ ಗೂಡನ್ನು ಸಿಂಗರಿಸುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅದು ನಿಜ ಅಲ್ಲ ಎಂದು ಬ್ರಿಟನ್ನಿನ ಎಕ್ಸೆಟರ್ ವಿ.ವಿಯ ಸಂಶೋಧಕರು ಈಗ ಹೇಳುತ್ತಾರೆ. ಪಳಪಳ ಹೊಳೆಯುವ ವಸ್ತುಗಳನ್ನು ಕಂಡರೆ ಪಕ್ಷಿಗಳು ಆಕರ್ಷಿತವಾಗುತ್ತಿಲ್ಲ, ನಿಜಕ್ಕೂ ಹೆದರುತ್ತವೆ ಎಂದು ಅವರು ಪತ್ತೆ ಹಚ್ಚಿದ್ದಾರೆ. ಅಂಥ ಭಯವನ್ನೂ ಧಿಕ್ಕರಿಸಿ ಅವುಗಳನ್ನೇ ಬಾಯಲ್ಲಿ ಕಚ್ಚಿ ತಂದ ಧೀರ ತಾನು ಎಂದು ಹೆಣ್ಣಿಗೆ ತೋರಿಸುವ ಇರಾದೆಯೆ?
ಅಥವಾ “ಪ್ರಿಯೇ, ಹೆದರದಿರು! ನಮ್ಮ ಮನೆಯ ಸಮೀಪ ಯಾವ ಬೇಟೆಗಾರ ಪಕ್ಷಿಯೂ ಸುಳಿಯದು!” ಎಂದು ಹೆಣ್ಣಿಗೆ ಅಭಯವಚನ ಕೊಡುವ ಸಂಕೇತವೆ? ಗೊತ್ತಿಲ್ಲ. ಚರ್ಚೆ ಜಾರಿಯಲ್ಲಿದೆ.
ಬಿಸಿಲಲ್ಲಿ ಹಪ್ಪಳ, ಸಂಡಿಗೆ ಅಥವಾ ಕೊಬ್ಬರಿಯನ್ನು ಒಣಗಿಸಲು ಇಟ್ಟರೆ ಅದರ ಪಕ್ಕದಲ್ಲಿ ಒಂದು ಕನ್ನಡಿಯನ್ನು ತಂದಿಡುವ ಪದ್ಧತಿ ನಮ್ಮ ಬಕ್ಕೆಮನೆಯಲ್ಲಿದೆ. ಪಳಪಳ ಹೊಳೆಯುವ ವಸ್ತುಗಳಿದ್ದರೆ ಕಾಗೆಗಳಿಗೂ ಅಲರ್ಜಿಯೆ? ಕನ್ನಡಿ ಇದ್ದರೆ ಕಾಗೆ ಬರುವುದಿಲ್ಲ ಎಂದು ನಮ್ಮವರು ಹೇಗೆ ಪತ್ತೆ ಹಚ್ಚಿದ್ದರೊ?
ʼಕನ್ನಡಿಯ ಬದಲು ದರ್ಭೆಹುಲ್ಲನ್ನು ಇಟ್ಟರೂ ಕಾಗೆ ಅತ್ತ ಕಡೆ ಬರುವುದಿಲ್ಲʼ ಎಂದು ನಮ್ಮೂರಿನ ಶಾಸ್ತ್ರಪಂಡಿತರು ಹೇಳಿದ್ದರು. ಅದನ್ನು ಪರೀಕ್ಷಿಸಿ ನೋಡಲು ನನಗಿನ್ನೂ ಸಾಧ್ಯವಾಗಿಲ್ಲ.
ಕದಿಯುವ ವಿಷಯದಲ್ಲಿ ನಮ್ಮ ಕಾಗೆಗಳಷ್ಟು ಜಾಣಪಕ್ಷಿ ಯಾವುದೂ ಇಲ್ಲ. ನಗರದ ಕಾಗೆಗಳು ಏನೇನೆಲ್ಲ ವಸ್ತುಗಳನ್ನು ತಂದು ಗೂಡಿಗೆ ಜೋಡಿಸುತ್ತವೆ ಎಂಬುದನ್ನು ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ದಾಖಲಿಸಿದ್ದರು. ಕಾಗೆಗಳೆಂದರೆ ಅವರ ಅಚ್ಚುಮೆಚ್ಚಿನ ಪಕ್ಷಿ ಆಗಿತ್ತು. (ಕಾಗೆಗಳು ಮರಗಳ ಬಿರುಕಿನೊಳಗಿರುವ ಹುಳುಗಳನ್ನು ಮೇಲೆತ್ತಲು ಎಲೆಗಳನ್ನೇ ನೀಟಾಗಿ ಕತ್ತರಿಸಿ ಆಯುಧಗಳನ್ನು ಮಾಡಿಕೊಳ್ಳುತ್ತವೆ ಎಂದು ನ್ಯೂಝಿಲ್ಯಾಂಡಿನ ವಿಜ್ಞಾನಿಗಳು ತೋರಿಸಿದ್ದಾರೆ. ಅಲ್ಲಿನ ಸರಕಾರ ಅಂಥ ಟೂಲ್ ಮೇಕಿಂಗ್ ಕಾಗೆಯ ಚಿತ್ರವನ್ನೇ ಅಂಚೆಚೀಟಿಯಾಗಿ ಮುದ್ರಿಸಿದೆ. ಆದರೆ ಈ ವಿಷಯ ಗೂಡಿಗೆ ಸಂಬಂಧಿಸಿಲ್ಲ ಹಾಗಾಗಿ ಇಲ್ಲಿ ಬೇಡ).
ಮುಂಬೈಯ ಒಂದು ಮರದ ಮೇಲಿನ ಕಾಗೆಗೂಡಿನಲ್ಲಿ ಬರೀ ಅಲ್ಯೂಮಿನಿಯಂ ಹ್ಯಾಂಗರ್ ಗಳೇ ತುಂಬಿದ್ದರ ಚಿತ್ರವನ್ನು ಅಲ್ಲಿನ ಪತ್ರಿಕೆಯೊಂದು ಪ್ರಕಟಿಸಿತ್ತು. ಅದು ಪ್ರಿಯತಮೆಯನ್ನು ಮೆಚ್ಚಿಸಲಿಕ್ಕೆ ಇರಲಿಕ್ಕಿಲ್ಲ. ಹ್ಯಾಂಗರ್ ಜೊತೆ ಇಡೀ ವಾರ್ಡ್‌ರೋಬ್ ತಂದಿಟ್ಟರೂ ಕೆಲವು ಹೆಣ್ಣುಗಳನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ ಬಿಡಿ. ಪ್ರಾಯಶಃ ತನ್ನ ಗೂಡೆಷ್ಟು ಗಟ್ಟಿಮುಟ್ಟು ಎಂದು ತೋರಿಸಲಿಕ್ಕೇ ಇರಬಹುದು. ಬಿರುಗಾಳಿಯ ತೀವ್ರತೆ ಹೀಗೇ ಹೆಚ್ಚುತ್ತಿದ್ದರೆ ಅವು ಕ್ರಮೇಣ ನಟ್ ಬೋಲ್ಟ್‌ಗಳನ್ನೂ ಜೋಡಿಸಿ ಗೂಡು ಕಟ್ಟಬಹುದು.
ಪಕ್ಷಿವಿಜ್ಞಾನಿಗಳಿಗೆ ತುಂಬ ತಲೆನೋವು ಕೊಟ್ಟಿದ್ದು ʼಬಿಲದ ಗೂಬೆʼ. ಇದು ನೆಲದಲ್ಲಿ ಒಂದೆರಡು ಮೊಳ ಉದ್ದದ ಬಿಲ ತೋಡಿ ಹೆಣ್ಣನ್ನು ಕರೆಯುತ್ತದೆ. ಅಷ್ಟೇ ಅಲ್ಲ, ನಾವೆಲ್ಲ ಇಸ್ಸೀ ಎನ್ನಬಹುದಾದ ಸೆಗಣಿ ಮುದ್ದೆಯನ್ನು ತಂದು ಬಿಲದ ಬಾಯಿಗೆ ಮೆತ್ತುತ್ತದೆ.
ಅದೇಕೆ ಹಾಗೆ ಮಾಡುತ್ತದೆ? ಇರುವೆಗಳನ್ನು ದೂರ ಇಡಲೆಂದೇ ಇರಬೇಕೆಂದು ಅನೇಕರು ತರ್ಕಿಸಿದ್ದರು. ನಮ್ಮಲ್ಲೂ ಮಹಿಳೆಯರು ಮನೆಯ ಮುಂದೆ ಚೊಕ್ಕದಾಗಿ ಸೆಗಣಿ ಸಾರಿಸಿ ಇಡುತ್ತಾರಲ್ಲವೆ?
ಕೊನೆಗೆ ಗೊತ್ತಾಗಿದ್ದೇನೆಂದರೆ, ಅವು ಡಂಗ್ ಬೀಟ್ಲ್ ಎಂಬ ಸೆಗಣಿದುಂಬಿಯನ್ನು ಆಕರ್ಷಿಸಲು ಹಾಗೆ ಮಾಡುತ್ತವೆ. ಸೆಗಣಿಯನ್ನು ತಿನ್ನಲು ಬರುವ ದುಂಬಿಯನ್ನು ಈ ಗೂಬೆ ಹಿಡಿದು ತಿನ್ನುತ್ತದೆ. ಈ ವಿಚಾರವೂ ಅಷ್ಟು ಸುಲಭಕ್ಕೆ ಗೊತ್ತಾಗಲಿಲ್ಲ. ವಿಜ್ಞಾನಿಗಳು ಗೂಬೆಯ ಮಲವನ್ನು ಪರೀಕ್ಷೆ ಮಾಡಿ ಹೇಳಿದ್ದಾರೆ. ಹಸಿಹಸಿ ಸೆಗಣಿ ಇದ್ದರೆ ಜಾಸ್ತಿ ದುಂಬಿಗಳು ಬರುತ್ತವೆ. ಒಣಗಿದ ಸೆಗಣಿ ಉಂಡೆಗಳಿದ್ದರೆ ಅಷ್ಟೇನೂ ಪ್ರಯೋಜನ ಇಲ್ಲವಂತೆ. ಅಂಥ ಒಣಗಿದ ಕುಳ್ಳುಗಳಿಗೆ ನೀರನ್ನು ಸಿಂಪಡಿಸಿಟ್ಟು ಮರುದಿನ ಗೂಬೆಯ ಮಲಪರೀಕ್ಷೆ ಮಾಡಿ, ತಮ್ಮ ಸಿದ್ಧಾಂತವನ್ನು ಮಂಡಿಸಿದ ವಿಜ್ಞಾನಿಗಳೂ ಇದ್ದಾರೆ.
ಪಕ್ಷಿಲೋಕದಲ್ಲಿ ಎಲ್ಲಕ್ಕಿಂತ ಚಂದವಾಗಿ ಗೂಡನ್ನು ಅಲಂಕರಿಸುವುದು ಬ್ರೋವರ್ ಬರ್ಡ್. ಗೂಡೂ ಅಷ್ಟೇ ಸುಂದರವಾಗಿ ನೆಲದಿಂದ ಮೇಲೆದ್ದು ಬಾಗಿ ನಿಂತಿರುತ್ತದೆ. (ಕೆಲವಂತೂ ಈಗಿನ ಯುವಕರ ಬುಟ್ಟಿಕಟಿಂಗ್ ಥರಾ ಇರುತ್ತವೆ.) ಅಂಥ ಗೂಡಿನ ಸುತ್ತ ಈ ಹಕ್ಕಿ ನಾನಾ ಬಗೆಯ ಬಣ್ಣಬಣ್ಣದ ವಸ್ತುಗಳನ್ನು ಕಸದ ಡಬ್ಬಿಗಳಿಂದ ಎತ್ತಿ ತರುತ್ತದೆ. ಇಲ್ಲಿ ತೋರಿಸಿದ ಮೊದಲ ಚಿತ್ರ ಅದರದ್ದೇ. ಗೂಡಿನ ಸುತ್ತ ಎಲ್ಲ ಅಲಂಕಾರ, ರಂಗೋಲಿ ಕೆಲಸ ಮುಗಿದ ಮೇಲೆ ಹೆಣ್ಣುಪಕ್ಷಿ ಅದನ್ನು ಪರಾಂಬರಿಸಿ ನಪಾಸ್ ಮಾಡಿದರೆ ಮುಗೀತು. ಗೀಜಗದ ಗಂಡಿನಂತೆ ಮತ್ತೆ ಹೊಸದಾಗಿ ಗೂಡು ಕಟ್ಟುವ ಮತ್ತು ರಂಗೋಲಿ ಹಾಸುವ ಕೆಲಸ ಶುರು.
ಸ್ಪೇನಿನ ಪಕ್ಷಿತಜ್ಞರು ಕರೀ ಗಿಡುಗನ ಗೂಡುಗಳ ಮೇಲೆ ಡ್ರೋನ್ ಹಾರಿಸಿದ್ದರ ಕತೆಗೆ ಈಗ ಬರೋಣ. ಎರಡನೇ ಚಿತ್ರ ಅದರದ್ದೇ.
ಈ ಬ್ಲ್ಯಾಕ್ ಕೈಟ್ ಪಕ್ಷಿಗಳು ಎತ್ತರದಲ್ಲಿ ಗೂಡು ಕಟ್ಟುತ್ತವೆ. ಪ್ಲಾಸ್ಟಿಕ್ ಚಿಂದಿಗಳನ್ನು ತಂದು ಹಾಸುತ್ತವೆ. ಅದೂ ಹೆಚ್ಚಾಗಿ ಬಿಳೀ ಪ್ಲಾಸ್ಟಿಕ್ ಚಿಂದಿಗಳು. ಯಾಕೆ? ಹೆಣ್ಣನ್ನು ಆಕರ್ಷಿಸಲು ಅಲ್ಲ; ಹೆಣ್ಣು ಕೂಡ ಚಿಂದಿ ಆಯಲು ಹೋಗುತ್ತದೆ. ಹಾವುಗೀವುಗಳನ್ನು ಬೆದರಿಸಲೂ ಅಲ್ಲ. ಹಾವು ಅತ್ತ ಬರುವುದೂ ಇಲ್ಲ. ಬಂದರೆ ಅದನ್ನೇ ಗುಳುಂ ಮಾಡುತ್ತವೆ ಈ ಬೇಟೆಗಾರ ಪಕ್ಷಿಗಳು. ಮೇಲಾಗಿ, ಈ ಗಿಡುಗಗಳು ಕಳೆದ ವರ್ಷ ಯಾರೋ ನಿರ್ಮಿಸಿದ ಗೂಡನ್ನೇ ಗಟ್ಟಿಮುಟ್ಟು ಮಾಡಿ ಅದರ ಮೇಲೆ ಮೊಟ್ಟೆ ಇಡಲು ಜಾಗ ಮಾಡಿಕೊಳ್ಳುತ್ತವೆ. ಹಾಗಿದ್ದರೆ ಯಾಕೆ ಈ ಬಿಳೀ ಹಾಸಿಗೆ?
ಯಾಕೆ ಅಂದರೆ, ಅವು ನಮ್ಮ ಧ್ವಜದ ಹಾಗೆ! ತಾನು ಬಲಿಷ್ಠ ಎಂದು ತೋರಿಸಿಕೊಳ್ಳಲು ಈ ಧ್ವಜ ಪ್ರದರ್ಶನ.
ಡ್ರೋನ್ ಹಾರಾಟದ ನಂತರ ಗೊತ್ತಾಗಿದ್ದೇನೆಂದರೆ, ಆ ಮರಗಳ ಮೇಲೆ ತರಾವರಿ ಗೂಡುಗಳಿರುತ್ತವೆ. ಯಾವುದರಲ್ಲಿ ಕಡಿಮೆ ಚಿಂದಿ ಇರುತ್ತದೋ ಅದು ದುರ್ಬಲ ದಂಪತಿಯ ಗೂಡು. ಅದರ ಮೇಲೆ ಪದೇ ಪದೇ ದಾಳಿ ಆಗುತ್ತಿರುತ್ತದೆ. ಅಲ್ಲಿ ಸೇಫ್ಟಿ ಇಲ್ಲ. ಜಾಸ್ತಿ ಅಗಲದ, ಜಾಸ್ತಿ ಸಂಖ್ಯೆಯ ಪ್ಲಾಸ್ಟಿಕ್ ಚಿಂದಿಗಳಿರುವ ಗೂಡಿನ ಬಳಿ ಯಾರೂ ದಾಳಿಗೆ ಬರುತ್ತಿಲ್ಲ. ಅದು ಸದೃಢ ದಂಪತಿಯ ನಿವಾಸದ ಸಂಕೇತ.
ಧ್ವಜ ಅಂದರೆ ನಮ್ಮಲ್ಲೂ ಬಲದ ಸಂಕೇತವೇ ತಾನೆ? ಗರುಡಧ್ವಜ, ಹಂಸಧ್ವಜ, ಉರಗಧ್ವಜ, ಹನುಮಧ್ವಜ ಇತ್ಯಾದಿಗಳೆಲ್ಲ ನಮಗೆ ಪರಿಚಿತ. ಈಗಂತೂ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವೆಲ್ಲ ಮನೆಮನೆಯಲ್ಲೂ ಹೆಮ್ಮೆಯಿಂದ ರಾಷ್ಟ್ರಧ್ವಜವನ್ನು ಹಾರಿಸಿ ಸೆಲ್ಫಿ ತೆಗೆದಾಗಿದೆ. ಇಷ್ಟೊಂದು ಸಂಖ್ಯೆಯ ಬಾವುಟಗಳನ್ನು ಹಾರಿಸಿ ಐತಿಹಾಸಿಕ ದಾಖಲೆಯನ್ನು ನಾವು ಮೂಡಿಸಿದ್ದೇವೆ.
*
ನಮ್ಮಲ್ಲಿ ಪ್ಲಾಸ್ಟಿಕ್ ಚಿಂದಿನ್ನೇ ಹೆಕ್ಕಿ ತಂದು ಧ್ವಜವನ್ನಾಗಿ ಮಾಡಿಕೊಳ್ಳುವ ಕರಿ ಗಿಡುಗಗಳಿಲ್ಲ. ಹಾಗಾಗಿ ಇಂದು ಇಳಿಸಿದ ಪಾಲಿಯೆಸ್ಟರ್ ಧ್ವಜವನ್ನು ಅತ್ತ ಇತ್ತ ಬಿಸಾಕಬೇಡಿ. ಚಿಂದಿ ಆಯುವವರೂ ಅದು ಬೇಕಿಲ್ಲದ ವಸ್ತು. ಜಗತ್ತಿನಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್ ಚಿಂದಿ ತ್ಯಾಜ್ಯಗಳನ್ನು ಕಂಡಕಂಡಲ್ಲಿ ಬಿಸಾಕುವ ರಾಷ್ಟ್ರಗಳಲ್ಲಿ ಮೊದಲ ಶ್ರೇಯಾಂಕ ಈಗಾಗಲೇ ನಮ್ಮದಾಗಿದೆ. ಅದನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದರೆ ಏನು ಬಂತು?
ಎಲ್ಲೋ ಬೀದಿಬದಿಯ ಚರಂಡಿಯಲ್ಲೊ ಅಥವಾ ಕಸದ ಬುಟ್ಟಿಯಲ್ಲೊ ಬಾವುಟಗಳು ಸೇರ್ಪಡೆ ಆಗದಂತೆ ನೋಡಿಕೊಳ್ಳಿ. ನಮ್ಮ ನಾಲಾಯಖ್ ಮುನಿಸಿಪಾಲಿಟಿ ಕೆಲಸಗಾರರು ಬೆಂಕಿಗಿಂಕಿ ಕೊಟ್ಟರೆ ಅದರಿಂದ ಡಯಾಕ್ಸಿನ್, ಫ್ಯೂರಾನ್‌ನಂಥ ವಿಷದ ಗಾಳಿ ಹಬ್ಬುತ್ತದೆ. ಆ ಗಾಳಿಯ ಸೇವನೆಯಿಂದ ಕೆಲವರು ಸಕ್ಕರೆ ಕಾಯಿಲೆ, ಅಸ್ತಮಾ, ಹೃದ್ರೋಗ, ನರದೌರ್ಬಲ್ಯ, ಕಿಡ್ನಿ ವೈಫಲ್ಯಕ್ಕೆ ತುತ್ತಾಗುತ್ತಾರೆ. ಆ ಎಲ್ಲವುಗಳಲ್ಲೂ ನಮ್ಮದು ನಂಬರ್ ಮೊದಲ ಶ್ರೇಯಾಂಕ, ನೆನಪಿರಲಿ.
ಅದಕ್ಕಿಂತ ದೊಡ್ಡ ಅಪಾಯ ಏನೆಂದರೆ ಪುರುಷರಲ್ಲಿ ಷಂಢತ್ವ, ಮಹಿಳೆಯರಲ್ಲಿ ಗರ್ಭಸ್ರಾವಕ್ಕೆ ಆ ಹೊಗೆ ಕಾರಣವಾಗುತ್ತದೆ. ಇದನ್ನೂ ವಿಜ್ಞಾನಿಗಳೇ ಸಾಬೀತು ಮಾಡಿದ್ದಾರೆ.
ನಮ್ಮೆಲ್ಲರ ಹೆಮ್ಮೆಯ, ಸಾಮೂಹಿಕ ಪ್ರಾಬಲ್ಯದ ಸಂಕೇತವಾಗಿ ನಾವು ಪ್ರದರ್ಶಿಸಿದ ಬಾವುಟವೇ ಹೊಗೆಯಾಗಿ ಶ್ವಾಸನಾಳವನ್ನು ಹೊಕ್ಕು, ಹಗೆಯಾಗಿ ನಮ್ಮ ಬಲವನ್ನು ಕುಗ್ಗಿಸಬಾರದು ಅಲ್ವಾ?
——————–
ಚಿತ್ರಕೃಪೆ: ಬೋವರ್ ಪಕ್ಷಿಗಳ ಗೂಡು: eBird.org
ಕರೀ ಗಿಡುಗಗಳಲ್ಲಿ ಪ್ಲಾಸ್ಟಿಕ್ ಚಿಂದಿ: ಸ್ಪೇನಿನ ವಿಜ್ಞಾನಿ ಎಫ್ ಸರ್ಗಿಯೊ
-nagesh hegade