

ಭಕ್ತಿ, ಭಾವ, ಜನಪದ ಗೀತೆಗಳ ಕಾರ್ಯಕ್ರಮ
ಸಿದ್ದಾಪುರ
ಪಟ್ಟಣದ ಶ್ರೇಯಸ್ ಆಸ್ಪತ್ರೆಯಲ್ಲಿ ಸ್ವಾತಂತ್ರö್ಯ ಅಮೃತಮಹೋತ್ಸವದ ಪ್ರಯುಕ್ತ ಧ್ವಜಾರೋಹಣ, ಹಾಗೂ ಕೊಂಡ್ಲಿ ಯಶಸ್ವಿನಿ ಆರ್ಕೆಷ್ಟಾç ತಂಡ ದಿಂದ ಭಕ್ತಿ ಗೀತೆ,ಭಾವ ಗೀತೆ ಹಾಗೂ ಜನಪದ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹಿರಿಯ ಕವಿ, ಸಾಮಾಜಿಕ ಕಾರ್ಯಕರ್ತ ಆರ್.ಕೆ.ಹೊನ್ನೆಗುಂಡಿ ಆಸ್ಪತ್ರೆಯ ಆವರಣದಲ್ಲಿ ಮುಂಜಾನೆ ಧ್ವಜಾರೋಹಣ ನೆರವೇರಿಸಿದರು. ಶ್ರೇಯಸ್ ಆಸ್ಪತ್ರೆಯ ಡಾ|ಶ್ರೀಧರ ವೈದ್ಯ, ಡಾ|ಸುಮಂಗಲಾ ವೈದ್ಯ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಸಂಜೆ ಆಸ್ಪತ್ರೆಯ ಸಭಾಭವನದಲ್ಲಿ ನಡೆದ ಗಾಯನ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಮಾತನಾಡಿದ ಡಾ| ಶ್ರೀಧರ ವೈದ್ಯ ದೇಶದ ಸ್ವಾತಂತ್ರö್ಯ ಅಮೃತ ಮಹೋತ್ಸವವನ್ನು ನಾವೆಲ್ಲ ಸಂಭ್ರಮ,ಅಭಿಮಾನದಿಂದ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಓರ್ವ ವಿನೂತನ ಗಾಯಕ ವೆಂಕಟೇಶ ಕೊಂಡ್ಲಿಯವರ ಯಶಸ್ವಿನಿ ತಂಡದ ಕಾರ್ಯಕ್ರಮವನ್ನು ಆಯೋಜಿಸಿ, ಗಾಯನದ ಮೂಲಕ ನಮ್ಮ ಸಡಗರವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಇದಾಗಿದೆ. ಅಲ್ಲದೇ ಎಲೆಯ ಮರೆಯಲ್ಲಿರುವ ವೆಂಕಟೇಶ ಕೊಂಡ್ಲಿಯವರನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.
ವೆಂಕಟೇಶ ಕೊಂಡ್ಲಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗಾಯನ ಕಾರ್ಯಕ್ರಮದಲ್ಲಿ ವೆಂಕಟೇಶ ಕೊಂಡ್ಲಿ, ರಾಘವೇಂದ್ರ ನಾಯ್ಕ, ಸುರೇಶ,ಸಿಂಧು ಮುಂತಾದವರು ಅನೇಕ ಭಕ್ತಿ ಗೀತೆ, ಭಾವ ಗೀತೆ, ಜನಪದ ಗೀತೆಗಳನ್ನು ಹಾಡಿ ಶೋತೃಗಳನ್ನು ರಂಜಿಸಿದರು. ವೆಂಕಟೇಶ ಕೊಂಡ್ಲಿ ಗಂಡು ಮತ್ತು ಹೆಣ್ಣಿನ ಸ್ವರದಲ್ಲಿ ಹಾಡಿದ್ದು ವಿಶೇಷವಾಗಿತ್ತು.
ಈ ಕಾರ್ಯಕ್ರಮದಲ್ಲಿ ನಿವೃತ್ತ ವೈದ್ಯ ಡಾ|ಪ್ರಭಾಶಂಕರ ಹೆಗಡೆ, ಆರ್.ಕೆ.ಹೊನ್ನೆಗುಂಡಿ, ಜಿ.ಜಿ.ಹೆಗಡೆ ಬಾಳಗೋಡ, ಡಾ|ಸುಮಂಗಲಾ ವೈದ್ಯ, ಸಿ.ಎಸ್.ಗೌಡರ್ ಮುಂತಾದವರೂ ಸೇರಿದಂತೆ ನೂರಾರು ಶೋತೃಗಳು ಪಾಲ್ಗೊಂಡಿದ್ದರು.

ಸಿದ್ದಾಪುರ:- ತಾಲೂಕಿನ ಹೊಸೂರಿನ ಗುಡ್ಡೆಕೇರಿ ಅಂಗನವಾಡಿ ಯ ಚಿಣ್ಣರು ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಬಾಲಗೋಪಾಲ ವೇಷಧಾರಿ ಗಳಾಗಿ ಗಮನ ಸೆಳೆದರು.


ಸಿದ್ದಾಪುರ :- ದೇಶ ನಮ್ಮದು, ನಾವು ಭಾರತೀಯರು ಎನ್ನುವ ಮನೋಭಾವ ನಮ್ಮಲ್ಲಿ ಮೂಡಬೇಕು. ಆವಾಗ ನಮ್ಮದೇ ವಿಶ್ವ ಗುರುವಾಗಿ ವಿಶ್ವದಲ್ಲಿ ರಾರಾಜಿಸುತ್ತದೆ ಎಂದು ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಮೂರ್ತಿ ಮಡಿವಾಳ ಕಡಕೇರಿ ಹೇಳಿದರು.
ಅವರು ತಾಲೂಕಿನ ಕಡಕೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 76 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಕಲೆ, ಸಂಸ್ಕೃತಿ, ಆಚರಣೆಗಳನ್ನು ಇಂದು ಪ್ರಪಂಚಕ್ಕೆ ಸಾರುತ್ತಿರುವ ದೇಶ ನಮ್ಮದು. ಅಂದು ನಮ್ಮನ್ನು ಆಳಿದವರು ಇಂದು ನಮ್ಮನ್ನು ಅನುಸರಿಸುತ್ತಿದ್ದಾರೆ. ಇದು ನಮ್ಮ ದೇಶದ ಹೆಮ್ಮೆ. ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ದೇಶಕ್ಕಾಗಿ ಏನು ಕೊಡುಗೆ ನೀಡಿದ್ದೇವೆ ಎನ್ನುವುದನ್ನು ಮನನ ಮಾಡಿಕೊಳ್ಳಬೇಕು ಎಂದರು.

ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಉಮೇಶ ಎನ್ ನಾಯ್ಕ ಮಾತನಾಡಿ ಮೊದಲು ನಾವು ಭಾರತೀಯರಾಗಬೇಕು.
ನಮ್ಮಲ್ಲಿ ದ್ವೇಷ, ಅಸೂಯೆಗಳಲ್ಲಿದೆ ಒಗ್ಗಟ್ಟಿನಿಂದ ದೇಶವನ್ನು ಕಟ್ಟಬೇಕು ಎಂದರು.
ಎಸ್ ಡಿ ಎಮ್ ಸಿ ಅಧ್ಯಕ್ಷ ಸುರೇಶ ಮಡಿವಾಳ ಮಾತನಾಡಿ ಕುವೇಂಪುರವರ ನುಡಿಯಂತೆ ನಮ್ಮ ಮತ ವಿಶ್ವ ಮತವಾಗಲಿ, ನಮ್ಮ ಪಥ ವಿಶ್ವ ಪಥವಾಗಲಿ, ನಾವು ಮೊದಲು ಮಾನವರಾಗೋಣ ಎಂದರು. ಗ್ರಾಮ ಪಂಚಾಯತಿ ಸದಸ್ಯೆ ಹೇಮಾವತಿ ನಾಯ್ಕ,
ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅಣ್ಣಪ್ಪ ಬಿ ನಾಯ್ಕ, ಗಂಗಾಧರ ಮಡಿವಾಳ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ವಿನೂತ ಶಾಸ್ತ್ರಿ, ಎಸ್. ಡಿ.ಎಂ.ಸಿ ಮಾಜಿ ಅಧ್ಯಕ್ಷ ಸೀತಾರಾಮ ನಾಯ್ಕ, ಊರಿನ ಹಿರಿಯರಾದ ಮೋಹನ ನಾಯ್ಕ, ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಊರಿನ ಪ್ರಮುಖ ಬೀದಿಗಳಲ್ಲಿ ಪ್ರಭಾತ್ ಪೆರಿ ನಡೆಸಲಾಯಿತು.
ಕಾರ್ಯಕ್ರಮ ದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ಸ್ಪರ್ಧಾ ಕಾರ್ಯಕ್ರಮಗಳ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯೋದ್ಯಾಪಕರಾದ ಮಾಯಾ ಭಟ್ ಸ್ವಾಗತಿಸಿದರು.
ಶಿಕ್ಷಕಿ ಮಂಜುಳಾ ಪಟಗಾರ್ ಪ್ರಶಸ್ತಿ ವಿಜೇತರ ಯಾದಿ ನಿರೂಪಿಸಿದರು.
ಕೇಶವ ನಾಯ್ಕ ವಂದಿಸಿದರು. ಶಿಕ್ಷಕಿ ಶಾಂತಲಾ ಗಾಂವ್ಕರ್ ಕಾರ್ಯಕ್ರಮ ನಿರ್ವಹಿಸಿದರು.

ಬೈಕ್ ರ್ಯಾಲಿಯೊಂದಿಗೆ ಸ್ವಾತಂತ್ರೋತ್ಸವ ಆಚರಿಸಿದ ಆಮ್ ಆದ್ಮಿ
ಸಿದ್ದಾಪುರ : ಸಿರ್ಸಿ ಸಿದ್ದಾಪುರ ಆಮ್ ಆದ್ಮಿ ತಂಡದವರು ಬೈಕ್ ರ್ಯಾಲಿ ಮಾಡುವುದರೊಂದಿಗೆ ವಿಶೇಷ ವಾಗಿ ಸ್ವಾತಂತ್ರೋತ್ಸವಆಚರಿಸಿ ಗಮನ ಸೆಳೆದರು
ಪಟ್ಟಣದ ರಾಘವೇಂದ್ರ ಮಠದಲ್ಲಿ ಶ್ರೀ ದೇವರಿಗೆ ಪೂಜೆ ಸಲ್ಲಿಸಿ ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಗೋಳಗೊಡ್ ಕವಚೂರ್ ನೆಜ್ಜುರ್ ಮಳವಳ್ಳಿ ಹಸುವಂತೆ ಮನ್ಮನೆ ಯಿಂದ ಮಾವಿನಗುಂಡಿ ಗೆ ತೆರಳಿ ಮಹಿಳಾ ಸ್ವತಂತ್ರ ಹೋರಾಟ ಗಾರರ ಸ್ಮಾರಕ ಕ್ಕೆ ನಮನ ಸಲ್ಲಿಸಿ ಸ್ವತಂತ್ರೋತ್ಸವವನ್ನು ವಿಶೇಷವಾಗಿ ಆಚರಿಸಿದರು
ರ್ಯಾಲಿಯಲ್ಲಿ ಹಿತೇಂದ್ರ ನಾಯ್ಕ್ ವೀರಭದ್ರ ನಾಯ್ಕ್ ರಾಘವೇಂದ್ರ ಕವಚೂರ್, ಹನೀಫ್ ಬ್ಯಾರಿ, ಲಕ್ಷಣ ನಾಯ್ಕ್ ಮಂಜುಳಾ,ಆಕಾಶ್ ಕೊಂಡ್ಲಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

