


ಐತಿಹಾಸಿಕ ಬನವಾಸಿಯ ಮಧುಕೇಶ್ವರ ದೇವರ ನವರಥಕ್ಕೆ ಮುನ್ನುಡಿ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಮಧುಕೇಶ್ವರ ದೇವಸ್ಥಾನದ ಮಹಾರಥದ ಮರು ನಿರ್ಮಾಣ ಕಾರ್ಯ ನಡೆಯುತ್ತಿದೆ.

ಶಿರಸಿ: ರಾಜ್ಯದಲ್ಲೇ ಪ್ರಸಿದ್ಧಿ ಹೊಂದಿರುವ 400 ವರ್ಷಗಳ ಇತಿಹಾಸವಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಮಧುಕೇಶ್ವರ ದೇವಸ್ಥಾನದ ಮಹಾರಥದ ಮರು ನಿರ್ಮಾಣ ಕಾರ್ಯ ನಡೆಯುತ್ತಿದೆ. ಸೋಂದೆ ಅರಸರ ಕಾಲದ ರಥವನ್ನು ಈಗ ಬದಲಿಸುವ ಕೆಲಸ ನಡೆಯುತ್ತಿದ್ದು, ಮುಂಬರುವ ಮಾರ್ಚ್ಗೆ ಹೊಸ ರಥದ ನಿರೀಕ್ಷೆ ಭಕ್ತರಿಗಿದೆ.
1608 ರಲ್ಲಿ ಸೋಂದಾ ರಾಮಚಂದ್ರ ನಾಯಕ ಈ ರಥವನ್ನು ಸಿದ್ಧಪಡಿಸಿ ಮಧುಕೇಶ್ವರ ದೇವಾಲಯಕ್ಕೆ ನೀಡಿದ್ದರು. 413 ವರ್ಷಗಳಷ್ಟು ಹಳೆಯದಾದ ಈ ರಥದಲ್ಲಿಯೇ ಪ್ರತಿ ವರ್ಷ ತೇರು ನಡೆಸುತ್ತಾ ಬರಲಾಗಿತ್ತು. ಈಗ ಅದರ ಬದಲಿಗೆ ನವ ರಥ ನಿರ್ಮಾಣ ಮಾಡಲಾಗುತ್ತಿದ್ದು, ಕೋಟೇಶ್ವರದ ಕುಶಲ ಕರ್ಮಿಗಳು ರಥ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ. ಈಗಾಗಲೇ ರಥದ ಮೂರು ಅಚ್ಚುಗಳು, ನಾಲ್ಕು ಮುಖ್ಯ ಗಾಲಿಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
ನವರಥ ನಿರ್ಮಾಣ ಸಮಿತಿ ಕಾರ್ಯದರ್ಶಿ ಡಿ. ಡಿ ಭಟ್ ಅವರು ಮಾತನಾಡಿದರು
ಹಲಸಿನ ಮರ ಬಳಕೆ: ರಥ ನಿರ್ಮಾಣದ ಅಗತ್ಯ ಕಟ್ಟಿಗೆಗಳನ್ನು ಸ್ಥಳೀಯರು ತಮ್ಮ ಹೊಲ, ಭೂಮಿಯಲ್ಲಿ ಬೆಳೆದದ್ದನ್ನೇ ನೀಡಿದ್ದಾರೆ. ಕರಿ ಮತ್ತಿ ಜಾತಿಯ ಮರಗಳು, ರಂಜಲು ಜಾತಿಯ ಮರಗಳು, ಹೊನ್ನೆ, ಕರಿಮತ್ತಿ, ಹೆಬ್ಬಲಸು ಜಾತಿಯ ಮರಗಳನ್ನು ಭಕ್ತರು ನೀಡಿದ್ದಾರೆ. ರಥದ ಗೊಂಬೆಗಳು ಮತ್ತು ಮಧ್ಯ ಭಾಗದ ಕೆತ್ತನೆಗಳಿಗಾಗಿ ಸಾಗುವಾನಿ, ದೇವರನ್ನು ಕೂಡಿಸುವ ಪೀಠ ಸ್ಥಾಪನೆಗೆ ಹಲಸಿನ ಮರ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಮುಖ್ಯಮಂತ್ರಿಗಳಿಂದ ಉದ್ಘಾಟನೆ: ಇನ್ನು ನವರಥ ನಿರ್ಮಾಣಕ್ಕೆ 3 ಕೋಟಿ ರೂ. ಖರ್ಚು ಅಂದಾಜಿಸಲಾಗಿತ್ತು. ಸಚಿವ ಶಿವರಾಮ ಹೆಬ್ಬಾರ್ ಮುತುವರ್ಜಿ ವಹಿಸಿ ರಥ ನಿರ್ಮಾಣಕ್ಕೆ ಹಣ ಮಂಜೂರು ಮಾಡಲು ಅವಕಾಶ ಇಲ್ಲದಿದ್ದರೂ, ಮುಖ್ಯಮಂತ್ರಿಗಳ ಮಟ್ಟದಲ್ಲಿ ಪ್ರಯತ್ನಿಸಿ ಸರ್ಕಾರದಿಂದ 3 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ. ಇದರ ಜೊತೆ ಸಾರ್ವಜನಿಕರೂ ಉದಾರವಾಗಿ ನೀಡಿದ ಹಣ 95 ಲಕ್ಷ ರೂ. ನಷ್ಟು ಸಂಗ್ರಹವಾಗಿದೆ. ಈ ಎಲ್ಲವನ್ನೂ ಬಳಕೆ ಮಾಡಿಕೊಂಡು ಮಾರ್ಚ್ ವೇಳೆಗೆ ರಥ ಸಿದ್ಧಪಡಿಸಿ ಮುಖ್ಯಮಂತ್ರಿಗಳಿಂದ ಉದ್ಘಾಟನೆಗೆ ಭಕ್ತರು, ಸಮಿತಿಯವರು ನಿರ್ಧರಿಸಿದ್ದಾರೆ.
ಆಕರ್ಷಣೆಯಾಗಿ ಇಡುವ ಯೋಚನೆ: ಇದಲ್ಲದೇ 400 ವರ್ಷಗಳ ಹಿಂದಿನ ರಥವನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ. ನವರಥ ನಿರ್ಮಾಣವಾದ ನಂತರ ಹಳೆಯ ರಥವನ್ನು ಪ್ರವಾಸಿಗರ ಆಕರ್ಷಣೆಯಾಗಿ ಇಡುವ ಯೋಚನೆ ಆಡಳಿತ ಮಂಡಳಿಯದ್ದಾಗಿದೆ. (ಈಟಿಬಿಕೆ)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
