
ಆರ್ ಎಸ್ಎಸ್ ವಿರೋಧಿ ಪುಸ್ತಕ ಪ್ರಕಟಿಸಿದ ಸತೀಶ್ ಜಾರಕಿಹೊಳಿ ಸೋಲಿಸಲು ಬಿಜೆಪಿ, ಸಂಘ ರಣತಂತ್ರ!
2023ರ ವಿಧಾನಸಭಾ ಚುನಾವಣೆಯಲ್ಲಿ ಮುಂಬೈ ಕರ್ನಾಟಕದಿಂದ ಕೆಲವು ಪ್ರಮುಖ ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್ ಪಕ್ಷ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಹೆಚ್ಚು ನೆಚ್ಚಿಕೊಂಡಿದೆ. ಆದರೆ ಅವರನ್ನೇ ಸೋಲಿಸಲು ಆರೆಸ್ಸೆಸ್…

ಬೆಳಗಾವಿ: 2023ರ ವಿಧಾನಸಭಾ ಚುನಾವಣೆಯಲ್ಲಿ ಮುಂಬೈ ಕರ್ನಾಟಕದಿಂದ ಕೆಲವು ಪ್ರಮುಖ ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್ ಪಕ್ಷ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಹೆಚ್ಚು ನೆಚ್ಚಿಕೊಂಡಿದೆ. ಆದರೆ ಅವರನ್ನೇ ಸೋಲಿಸಲು ಆರೆಸ್ಸೆಸ್ ಮತ್ತು ಬಿಜೆಪಿ ನಾಯಕತ್ವ ತಂತ್ರ ರೂಪಿಸುತ್ತಿದೆ ಎಂದು ತಿಳಿದುಬಂದಿದೆ.
ಯಮಕನಮರಡಿ ಕ್ಷೇತ್ರದಲ್ಲಿ ರಾಜಕೀಯವಾಗಿ ಪ್ರಭಾವಿಯಾಗಿರುವ ಗೋಕಾಕದ ಜಾರಕಿಹೊಳಿ ಕುಟುಂಬವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ.
ಮೂಲಗಳ ಪ್ರಕಾರ, ಸತೀಶ್ ಜಾರಕಿಹೊಳಿ ಸ್ಥಾಪಿಸಿದ ಮಾನವ ಬಧುತ್ವ ವೇದಿಕೆ(ಎಂಬಿವಿ) ಖ್ಯಾತ ಬರಹಗಾರ ದೇವನೂರು ಮಹದೇವ್ ಅವರು ಬರೆದ ಆರ್‌ಎಸ್‌ಎಸ್ ವಿರೋಧಿ ಪುಸ್ತಕ ‘ಆರ್‌ಎಸ್‌ಎಸ್ ಉದ್ದ ಅಗಲ’ವನ್ನು ಪ್ರಕಟಿಸಿದ ನಂತರ ಯಮಕನಮರಡಿ ಶಾಸಕರ ವಿರುದ್ಧ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕತ್ವದ ಒಂದು ಭಾಗ ಕೆರಳಿ ಕೆಂಡವಾಗಿದೆ.
‘ಪುಸ್ತಕಕ್ಕೆ ಓದುಗರಿಂದ ಅಭೂತಪೂರ್ವ ಪ್ರತಿಕ್ರಿಯೆ ಬಂದ ನಂತರ ಜಾರಕಿಹೊಳಿ ಅವರನ್ನು ಹತ್ತಿಕ್ಕಲು ಆರ್‌ಎಸ್‌ಎಸ್ ಪಡೆ ಸಿದ್ಧವಾಗಿದೆ’ ಎಂದು ಮೂಲಗಳು ತಿಳಿಸಿದ್ದು, ಜಾರಕಿಹೊಳಿ ಅವರನ್ನು ಯಮಕನಮರಡಿಯಲ್ಲಿ ಸೋಲಿಸಲು ಬಿಜೆಪಿ ನಾಯಕತ್ವ ನಿರ್ಧರಿಸಿದೆ.
ಮುಂಬೈ-ಕರ್ನಾಟಕದಲ್ಲಿ ಹಲವಾರು ಅಭ್ಯರ್ಥಿಗಳನ್ನು ಸೋಲಿಸಲು ಜಾರಕಿಹೊಳಿ ಅವರ ಜನಪ್ರಿಯತೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್ ಉತ್ಸುಕವಾಗಿದ್ದು, ಆದರೆ ಅವರನ್ನು ಯಮಕನಮರಡಿಗೆ ಸೀಮಿತಗೊಳಿಸಲು ಬಿಜೆಪಿ ನಾಯಕತ್ವ ಯೋಜಿಸುತ್ತಿದೆ.
ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ, ಉಮೇಶ್ ಕತ್ತಿ, ಮತ್ತು ಬೆಳಗಾವಿ ಭಾಗದ ಹಲವಾರು ಬಿಜೆಪಿ ಶಾಸಕರು ಜಾರಕಿಹೊಳಿ ಅವರನ್ನು ಗುರಿಯಾಗಿಸಿಕೊಂಡು ಯಮಕನಮರಡಿಯಲ್ಲಿ ಬಿಜೆಪಿಯನ್ನು ಬಲಪಡಿಸುವ ನಿರೀಕ್ಷೆಯಿದೆ,” ಎಂದು ಮೂಲಗಳು ತಿಳಿಸಿವೆ. (kpc)
