ತೀವ್ರ ಕುತೂಹಲ ಕೆರಳಿಸಿಲುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿರುವಂತೆಯೇ ಪಕ್ಷದ ನೇತೃತ್ವ ವಹಿಸುವಂತೆ ರಾಹುಲ್ ಗಾಂಧಿ ಮನವೊಲಿಕೆಗೆ ಅಂತಿಮ ಹಂತದ ಕಸರತ್ತು ಕೂಡ ನಡೆಯುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನವದೆಹಲಿ: ತೀವ್ರ ಕುತೂಹಲ ಕೆರಳಿಸಿಲುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿರುವಂತೆಯೇ ಪಕ್ಷದ ನೇತೃತ್ವ ವಹಿಸುವಂತೆ ರಾಹುಲ್ ಗಾಂಧಿ ಮನವೊಲಿಕೆಗೆ ಅಂತಿಮ ಹಂತದ ಕಸರತ್ತು ಕೂಡ ನಡೆಯುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇಂದು ದೆಹಲಿಯಲ್ಲಿ ನಡೆದ ಸಿಡಬ್ಲ್ಯೂಸಿ (ಕಾಂಗ್ರೆಸ್ ಕಾರ್ಯಕಾರಿ ಸಮಿತಿ) ಸಭೆಯಲ್ಲಿ ಪಕ್ಷದ ಅದ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ವೇಳಾಪಟ್ಟಿ ನಿರ್ಧರಿಸಲಾಗಿದೆ. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಈ ಸಭೆ ನಡೆಯಿತು. ಸಭೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಭಾಗವಹಿಸಿದ್ದರು. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಕೂಡ ವರ್ಚುವಲ್ ಮೋಡ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಇನ್ನು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ. ಸೆಪ್ಟೆಂಬರ್ 22 ರಂದು ಚುನಾವಣಾ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗುವುದು. ಸೆಪ್ಟೆಂಬರ್ 24 ರಿಂದ ಸೆಪ್ಟೆಂಬರ್ 30 ರ ನಡುವೆ ನಾಮಪತ್ರ ಸಲ್ಲಿಸಬಹುದು. ಅಕ್ಟೋಬರ್‌ನಲ್ಲಿ ಪರಿಶೀಲನೆ ನಡೆಯಲಿದೆ ಮತ್ತು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಅಕ್ಟೋಬರ್ 8 ಆಗಿದೆ. ಅಂತಿಮವಾಗಿ, ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಯಾರು ಅಧ್ಯಕ್ಷರಾಗಬೇಕು ಮತ್ತು ರಾಹುಲ್ ಗಾಂಧಿ ಅಧ್ಯಕ್ಷರಾಗಬೇಕೇ ಎಂಬ ಬಗ್ಗೆ ಚರ್ಚೆ ನಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಈ ಕುರಿತು ಮಾತನಾಡಿ, ‘ಇದೊಂದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ. ಅಧ್ಯಕ್ಷರಾಗಲು ಬಯಸುವವರು ನಾಮಪತ್ರ ಸಲ್ಲಿಸಬೇಕು ಎಂದರು.
ಮೂಲಗಳ ಪ್ರಕಾರ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಶುಕ್ರವಾರ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸಿಡಬ್ಲ್ಯೂಸಿ ಸಭೆ ನಡೆದಿದೆ. ರಾಹುಲ್ ಗಾಂಧಿ ಅವರು ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದ ಚುನಾವಣೆ ಈಗ ಕಾಂಗ್ರೆಸ್‌ಗೆ ಸವಾಲಾಗಿ ಪರಿಣಮಿಸಿದೆ. ಚುನಾವಣಾ ಪ್ರಕ್ರಿಯೆಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಲು ಕೇಂದ್ರ ಚುನಾವಣಾ ಪ್ರಾಧಿಕಾರ ಈಗಾಗಲೇ ಸಿದ್ಧತೆ ನಡೆಸಿದೆ.
ರಾಹುಲ್ ಗಾಂಧಿ ಮನವೊಲಿಕೆಗೆ ಅಂತಿಮ ಹಂತದ ಕಸರತ್ತು
ಇನ್ನು ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಿಲ್ಲದ ಕಾರಣ ಈ ಪ್ರಕ್ರಿಯೆಯು ಜಟಿಲವಾಗುತ್ತಿದೆ. ಆದರೂ ಅವರನ್ನು ಮನವೊಲಿಸುವ ಎಲ್ಲಾ ಪ್ರಯತ್ನಗಳು ಇನ್ನೂ ನಡೆಯುತ್ತಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ‘ಭಾರತ್ ಜೋಡೋ ಯಾತ್ರೆ’ ಪ್ರಾರಂಭಿಸಲು ಕಾಂಗ್ರೆಸ್ ಯೋಜಿಸಿದೆ.
148 ದಿನಗಳ ಪಾದಯಾತ್ರೆ ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ. ಐದು ತಿಂಗಳ ಯಾತ್ರೆಯು 3,500 ಕಿಲೋಮೀಟರ್ ಮತ್ತು 12 ಕ್ಕೂ ಹೆಚ್ಚು ರಾಜ್ಯಗಳನ್ನು ಕ್ರಮಿಸಲು ನಿರ್ಧರಿಸಲಾಗಿದೆ. ಪಾದಯಾತ್ರೆ (ಮೆರವಣಿಗೆ) ಪ್ರತಿದಿನ 25 ಕಿ.ಮೀ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯಾತ್ರೆಯು ಪಾದಯಾತ್ರೆಗಳು, ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ. (ಕಪ್ರಡಾ)