ಪ್ರಸ್ತುತ ರಾಷ್ಟ್ರ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿವೆ. ಇಲ್ಲಿ ಹಣ ಮುಖ್ಯ ಪಾತ್ರ ವಹಿಸುತ್ತಿರುವುದು ಆತಂಕಕಾರಿಯಾಗಿದೆ ಎಂದು ಬಿಜೆಪಿಯ ಆಪರೇಷನ್ ರಾಜಕಾರಣದ…
ಬೆಂಗಳೂರು: ಪ್ರಸ್ತುತ ರಾಷ್ಟ್ರ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿವೆ. ಇಲ್ಲಿ ಹಣ ಮುಖ್ಯ ಪಾತ್ರ ವಹಿಸುತ್ತಿರುವುದು ಆತಂಕಕಾರಿಯಾಗಿದೆ ಎಂದು ಬಿಜೆಪಿಯ ಆಪರೇಷನ್ ರಾಜಕಾರಣದ ಬಗ್ಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಕಳವಳ ವ್ಯಕ್ತಪಡಿಸಿದರು.
ಇಂದು ನಗರದ ಭಾರತೀಯ ವಿದ್ಯಾ ಭವನದಲ್ಲಿ ಆಯೋಜಿತವಾಗಿದ್ದ ರಾಮಕೃಷ್ಣ ಹೆಗಡೆ 96ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪಡೆದ ವೇಳೆ ಎರಡು ಕೂಗು ಕೇಳಿ ಬಂದಿತ್ತು. ಒಂದು ಮುಸ್ಲಿಂ ರಾಷ್ಟ್ರಕ್ಕೆ ಮತ್ತೊಂದು ಹಿಂದೂರಾಷ್ಟ್ರಕ್ಕಾಗಿ ಆರ್.ಎಸ್.ಎಸ್ ಬೇಡಿಕೆ ಇಟ್ಟಿತ್ತು. ಆದರೆ ಪಾಕಿಸ್ತಾನ ಮುಸ್ಲಿಂ ರಾಷ್ಟ್ರ ಎಂದು ಘೋಷಿಸಿಕೊಂಡರೆ ಭಾರತವನ್ನು ಹಿಂದೂ ರಾಷ್ಟ್ರದ ಬದಲು ಜಾತ್ಯಾತೀತ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಘೋಷಿಸಲಾಯಿತು ಎಂದು ವಿವರಿಸಿದರು.
ಜಾತ್ಯತೀತ ಪ್ರಜಾಪ್ರಭುತ್ವ, ಆರ್ಥಿಕತೆ, ಸಾಮಾಜಿಕ ನ್ಯಾಯ, ಆಡಳಿತ ವಿಕೇಂದ್ರೀಕರಣ ಇವೇ ನಾಲ್ಕು ಅಂಶಗಳ ತಳಹದಿ. ಈ ತಳಹದಿ ಮೇಲೆ ರಾಷ್ಟ್ರಕಟ್ಟಲಾಗಿದೆ. ಆದರೆ ಈಗ ಈ ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಇದನ್ನು ನೋಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಏನಾಗುತ್ತಿದೆ? ಇಂದು ಹಣ ಮುಖ್ಯ ಪಾತ್ರ ವಹಿಸುತ್ತಿದೆ ಎನ್ನುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ನಿರ್ಭಯವಾಗಿ ವರದಿ ಮಾಡಲು ಪತ್ರಕರ್ತರೂ ಭೀತಿಯಲ್ಲಿರುವ ವಾತಾವರಣ ಸೃಷ್ಟಿಯಾಗಿದೆ. ವರದಿ ಮಾಡಿ ಜೈಲಿಗೋಗುವ ಸ್ಥಿತಿ ಇದೆ. ಹಾಗಾಗಿ ಈಗ ಬಹಳ ದೊಡ್ಡ ಸವಾಲು ನಮ್ಮ ದೇಶದ ಮುಂದಿದೆ ಎಂದು ಬಿಜೆಪಿಯಿಂದ ನಡೆಯುತ್ತಿರುವ ಕೇಸರೀಕರಣದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಇಂದು ಸಾರ್ವಜನಿಕ ಉದ್ದಿಗೆಗಳನ್ನು ಖಾಸಗೀಕರಣ ಮಾಡುತ್ತಿದೆ. ಸಾರ್ವಜನಿಕ ಉದ್ದಿಮೆ ಜನರ ಆಸ್ತಿ, ಇದನ್ನು ಸರ್ಕಾರ ನಿರ್ವಹಣೆ ಮಾಡಬೇಕೇ ಹೊರತು ಮಾರಾಟ ಮಾಡುವುದಲ್ಲ. ಆದರೂ ಮಾರಾಟ ಮಾಡುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದರು.
ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ, ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳು ಅನುದಾನ ಬಿಡುಗಡೆಗೆ ಕೇಂದ್ರಕ್ಕೆ ಅಲೆದಾಡಬೇಕಿದೆ. ಜಿಎಸ್ಟಿ ವ್ಯವಸ್ಥೆ ಪ್ರತಿ ರಾಜ್ಯವೂ ಕೇಂದ್ರದ ಮುಂದೆ ಬರುವಂತೆ ಮಾಡಲು ಮಾಡಿರುವ ವ್ಯವಸ್ಥೆ ಆಗಿದೆ ಎಂದು ಬಿಜೆಪಿ ಧೋರಣೆ ಖಂಡಿಸಿದರು.
ಸಂಸತ್ತಿನಲ್ಲಿ ಬಹುಮತ ಒಂದೇ ಮುಖ್ಯವಾಗಿದೆ. ಕಾನೂನು ರೂಪಿಸುವಾಗ ಬಿಲ್ ಗಳ ಮೇಲೆ ಚರ್ಚೆಗೆ ಆಧ್ಯತೆ ಇಲ್ಲವಾಗಿದೆ. ಕೇವಲ ಬಹುಮತದ ಆಧಾರದಲ್ಲಿ ಬಿಲ್ ಪಾಸ್ ಮಾಡಿಕೊಳ್ಳಲಾಗುತ್ತಿದೆ. ದನಿ ಎತ್ತಿದವರನ್ನು ಸದನದಿಂದ ಹೊರಹಾಕಲಾಗುತ್ತಿದೆ. ಇದು ಸಂಸತ್ತು ಸರಿಯಾಗಿ ಕೆಲಸ ಮಾಡದ ಸ್ಥಿತಿಯಾಗಿದೆ. ಹೀಗೆ ಸಂಸತ್ತು ಸರಿಯಾಗಿ ಕೆಲಸ ಮಾಡದಿರುವುದು ಅಪಾಯಕಾರಿ ಬೆಳವಣಿಗೆ ಎಂದರು.
ನಗದು ಅಮಾನ್ಯೀಕರಣ, ಆರ್ಟಿಕಲ್ 370 ಸೇರಿದಂತೆ ಕೇಂದ್ರದ ಎನ್ ಡಿಎ ಸರ್ಕಾರ ಜಾರಿಗೆ ತಂದಿರುವ ಕಾನೂನುಗಳಿಂದ ಎದುರಾಗಿರುವ ಸಮಸ್ಯೆಗಳು ಮತ್ತು ಸವಾಲುಗಳ ವಿಷಯ ಪ್ರಸ್ತಾಪಿಸಿ ಕೇಂದ್ರದ ನಡೆಗೆ ಕಳವಳ ವ್ಯಕ್ತಪಡಿಸಿದರು.
ಮತದಾರರ ಗುರುತಿನ ಚೀಟಿಗೆ ಚುನಾವಣಾ ಆಯೋಗ ಆಧಾರ್ ಲಿಂಕ್ ಕಡ್ಡಾಯ ಎಂದು ಹೇಳಿತ್ತು. ಇದಕ್ಕೆ ಟೀಕೆ ವ್ಯಕ್ತವಾಗುತ್ತಿದ್ದಂತೆ ಈಗ ಕಡ್ಡಾಯವಲ್ಲ ಕೇವಲ ಆಯ್ಕೆ ಮಾತ್ರ ಎನ್ನುತ್ತಿದೆ. ಚುನಾವಣಾ ಆಯೋಗ ಒಂದೇ ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಸಲು ಸಾಧ್ಯ. ಆದರೆ ಇಂದು ಏನಾಗುತ್ತಿದೆ? ಇಡಿ, ಸಿಬಿಐ ಸ್ವಾಯತ್ತವಾಗಿಲ್ಲ. ಆಡಳಿತ ಪಕ್ಷದ ಕೈಗೊಂಬೆಯಾಗಿ ಇವು ಕೆಲಸ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದರು.
ಸ್ವಾತಂತ್ರ್ಯ ನಂತರ ಭಾರತ ಕಳೆದ 75 ವರ್ಷದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಸಮಾನ ಹಕ್ಕುಗಳು ಎಲ್ಲರಿಗೂ ಸಿಕ್ಕಿವೆ, ಮತದಾನ ಸೇರಿದಂತೆ ಎಲ್ಲ ಸವಲತ್ತುಗಳ ಸಮಾನ ಹಂಚಿಕೆಯಾಗಿದೆ ಎಂದು ಸಂವಿಧಾನದ ಮಹತ್ವ ಮತ್ತು ಸಂವಿಧಾನದಿಂದ ಪ್ರತಿಯೊಬ್ಬ ಪ್ರಜೆ ಅನುಭವಿಸುತ್ತಿರುವ ಸ್ವಾತಂತ್ರ್ಯದ ಬಗ್ಗೆ ಪ್ರಸ್ತಾಪಿಸಿದರು.
ರಾಮಕೃಷ್ಣ ಹೆಗಡೆ ಕರ್ನಾಟಕದಲ್ಲಿ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಆಗಿದ್ದರು. ಅಧಿಕಾರ ವಿಕೇಂದ್ರೀಕರಣ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿಯುವ ಕೆಲಸ ಮಾಡಿದ್ದರು. ಸಮಾಜವಾದ, ಜಾತ್ಯತೀತ, ಪ್ರಜಾಪ್ರಭುತ್ವ ವ್ಯವಸ್ಥೆಗೆ ರಾಮಕೃಷ್ಣ ಹೆಗಡೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೆಗಡೆ ಅವರು ನೀಡಿರುವ ಕೊಡುಗೆಯನ್ನು ಯಚೂರಿ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಶ್ಯಾಮನೂರು ಶಿವಶಂಕರಪ್ಪ, ಭಾರತೀಯ ಕಮುನಿಸ್ಟ್ ಪಾರ್ಟಿ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ, ನವ ನಿರ್ಮಾಣ ವೇದಿಕೆ ಅಧ್ಯಕ್ಷೆ ಮಮತ ನಿಚ್ಚಾನಿ ಉಪಸ್ಥಿತರಿದ್ದರು. (kpc)