ದುಷ್ಟರ ವಕೃದಷ್ಠಿಗೆ ಅದೃಶ್ಯಳಾದ ಸಾತೇರಿ ದೇವಿ: ವರ್ಷದಲ್ಲಿ 7 ದಿನ ಮಾತ್ರ ದರ್ಶನ
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣ ಗ್ರಾಮದಲ್ಲಿ ಸಾತೇರಿ ದೇವಿ ದೇವಾಲಯ ಇದ್ದು, ವರ್ಷದಲ್ಲಿ 7 ದಿನ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಕಾರವಾರ(ಉತ್ತರ ಕನ್ನಡ): ಸಾಮಾನ್ಯವಾಗಿ ದೇವಸ್ಥಾನ ಅಂದ್ರೆ ಅಲ್ಲಿ ಪ್ರತಿನಿತ್ಯ ತ್ರಿಕಾಲ ಪೂಜೆ, ಭಕ್ತರಿಗೆ ದರ್ಶನ, ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಆದರೆ ಈ ದೇವಸ್ಥಾನದಲ್ಲಿ ವರ್ಷದಲ್ಲಿ ಕೇವಲ ಏಳು ದಿನ ಮಾತ್ರ ದೇವಿ ಭಕ್ತರಿಗೆ ದರ್ಶನ ನೀಡುತ್ತಾಳಂತೆ. ಈ ದೇವಿಗೆ ಹರಕೆ ಹೊತ್ತುಕೊಂಡರೆ ಒಂದೇ ವರ್ಷದಲ್ಲಿ ಅದು ಈಡೇರುತ್ತದೆ ಎನ್ನುವ ನಂಬಿಕೆ ಜನರಲ್ಲಿದ್ದು, ವಿವಿಧೆಡೆಗಳಿಂದ ಭಕ್ತ ಸಾಗರವೇ ಈ ದೇವಾಲಯಕ್ಕೆ ಹರಿದು ಬರುತ್ತದೆ.
https://www.facebook.com/flx/warn/?u=https%3A%2F%2Fsamajamukhi.net%2F2022%2F09%2F06%2Ftwo-deaths-local-news%2F%3Ffbclid%3DIwAR3jbKuIsQbXT0MlN-5YCDn7uw17rDiCFpJbZwE7jEYNwccmzqEZrt2n3DQ&h=AT0KwmGjHSYKdECcCAu03D7VrWwgjkE-0M1O7tEzEsIA_tqB3fbMmH1OidoA5YeqyvkyIQokohCTwZQga_rIhnN3j3LHKnRpcm4i2XJqsNH5tDGH_FFmRHTOMmS-Y82tbTxgkAAInx8K45tgnyzNgXu5HHqH6FBqh9IKR_0Ig6cMQaUWNyFZDW5zq41sdM8sthkYa2wcCwgz9JzBMYfNGd6aiFmc5L3uUXSHPiTMjW3dZoZclIKr2zeiCcEwgb-w-j9vnu28eSlPjLzpLkOGwpyUzhtqzG2dWi4tP4Ej
ಹೌದು, ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣ ಗ್ರಾಮದಲ್ಲಿರುವ ಸಾತೇರಿ ಎಂಬ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ವರ್ಷದಲ್ಲಿ ಏಳು ದಿನ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ. ಸಾತೇರಿ ದೇವಿ ಜಾತ್ರಾ ಮಹೋತ್ಸವದಲ್ಲಿ ಮಾತ್ರ ಭಕ್ತರಿಗೆ ದರ್ಶನ ನೀಡುವ ಪ್ರತೀತಿ ಇದೆ. ಹೀಗಾಗಿ ಕಳೆದೆರಡು ದಿನಗಳಿಂದ ದೇವಿಯ ಜಾತ್ರಾಮಹೋತ್ಸವ ಪ್ರಾರಂಭವಾಗಿದ್ದು, ಇಂದಿನಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಮೊದಲ ಎರಡು ದಿನ ಅರ್ಚಕರ ಕುಟುಂಬ ಮತ್ತು ಗ್ರಾಮಸ್ಥರಿಗೆ ಅವಕಾಶ.. ಹಲವೆಡೆಗಳಿಂದ ಆಗಮಿಸಿದ್ದ ಭಕ್ತರು ಸಾತೇರಿ ದೇವಿಗೆ ವಿವಿಧ ಸೇವೆಗಳನ್ನ ಅರ್ಪಿಸಿ ದರ್ಶನ ಪಡೆದರು. ಜಾತ್ರಾ ಮಹೋತ್ಸವದ ಮೊದಲೆರಡು ದಿನ ದೇವಸ್ಥಾನದ ಅರ್ಚಕ ಕುಟುಂಬದವರಿಗೆ ಹಾಗೂ ಗ್ರಾಮಸ್ಥರಿಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಉಳಿದ ಐದು ದಿನಗಳು ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಮುಕ್ತವಾಗಿರುತ್ತದೆ. ವರ್ಷದ ಉಳಿದ ದಿನಗಳಲ್ಲಿ ದೇವಸ್ಥಾನದಲ್ಲಿ ಪ್ರತಿ ಸೋಮವಾರ ಗರ್ಭಗುಡಿಯ ಬಾಗಿಲಲ್ಲಿಯೇ ನಿಂತು ಪೂಜೆ ಸಲ್ಲಿಸಿ ತೆರಳಲಾಗುತ್ತದೆ. ಇಂದು ಸಾರ್ವಜನಿಕ ದರ್ಶನದ ಮೊದಲ ದಿನವಾಗಿದ್ದು, ಸಾವಿರಾರು ಮಂದಿ ಆಗಮಿಸಿ ದರ್ಶನ ಪಡೆದುಕೊಂಡರು.
ಸಾತೇರಿ ದೇವಿ ಜಾತ್ರಾ ಮಹೋತ್ಸವ ಆರಂಭ..
ಸಾತೇರಿ ದೇವಿಗಿದೆ ಪೌರಾಣಿಕ ಇತಿಹಾಸ.. ಹಣಕೋಣದಲ್ಲಿರುವ ಸಾತೇರಿ ದೇವಿ ತನ್ನ ಭಕ್ತರ ಕಷ್ಟಗಳನ್ನು ನಿವಾರಿಸಿ, ಸಹಾಯ ಸಹಕಾರದ ಅಗತ್ಯವಿದ್ದರೆ ಭಕ್ತರ ಸಮ್ಮುಖದಲ್ಲಿ ಪ್ರತ್ಯಕ್ಷಳಾಗಿ ಕಷ್ಟಗಳನ್ನು ನಿವಾರಿಸುತ್ತಿದ್ದಳಂತೆ. ಒಮ್ಮೆ ದೇವಿ ಬಾವಿಯ ಪಕ್ಕದಲ್ಲಿ ಸ್ನಾನ ಮಾಡಿ ಕೂದಲನ್ನು ಬಾಚಿಕೊಳ್ಳುವಾಗ ಒಬ್ಬ ದುಷ್ಟನ ಕಣ್ಣು ದೇವಿಯ ಮೇಲೆ ಬಿದ್ದು, ದೇವಿಯ ಬಳಿ ಬಂದಾಗ ಆಕೆ ರಕ್ಷಣೆಗಾಗಿ ಬಾವಿಗೆ ಹಾರಿ ಅದೃಶ್ಯಳಾದಳಂತೆ.
ಬಳಿಕ ಊರಿನ ಹಿರಿಯನೊಬ್ಬರಿಗೆ ದೇವಿ ಕನಸಿನಲ್ಲಿ ಬಂದು ತಾನು ಬಾವಿಯಲ್ಲಿ ಅದೃಶ್ಯಳಾಗಿದ್ದು, ತಾನು ನೆಲೆಸಿರುವ ಸ್ಥಳದಲ್ಲೇ ಸಣ್ಣ ಗುಡಿಯೊಂದನ್ನು ಕಟ್ಟಿಕೊಡುವಂತೆ ಹೇಳಿ ವರ್ಷದಲ್ಲಿ 7 ದಿನಗಳ ಕಾಲ ಮಾತ್ರ ತಾನು ದರ್ಶನ ನೀಡುವುದಾಗಿ ತಿಳಿಸಿದ್ದಳಂತೆ. ಅದರಂತೆ ನಂತರದ ದಿನಗಳಲ್ಲಿ ಈ ಜಾಗದಲ್ಲಿ ಚಿಕ್ಕ ಗುಡಿ ಕಟ್ಟಲಾಯಿತು. ಈ ದೇವಿಯ ಫೋಟೋ ಮಾರಾಟ ಮಾಡುವುದಾಗಲಿ, ಮೊಬೈಲ್, ಕ್ಯಾಮರಾಗಳಲ್ಲಿ ಚಿತ್ರಿಸಿಕೊಳ್ಳುವುದಕ್ಕಾಗಲಿ ದೇವಸ್ಥಾನದಲ್ಲಿ ಅವಕಾಶವಿರುವುದಿಲ್ಲ. ಹಾಗೇನಾದರೂ ಮಾಡಿದಲ್ಲಿ ಅಂತಹವರಿಗೆ ಕೆಟ್ಟದ್ದಾಗುತ್ತದೆ ಎಂಬ ನಂಬಿಕೆ ಭಕ್ತರದ್ದು.
ದೇವಿ ದರ್ಶನಕ್ಕೆ ವರ್ಷದಲ್ಲಿ ಏಳು ದಿನ ಮಾತ್ರ ಅವಕಾಶ ಸಿಗುವುದರಿಂದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಿದ್ದಾರೆ. ಕಳೆದೆರಡು ವರ್ಷ ಕೊರೊನಾ ಕಾರಣದಿಂದ ದೇವಿಯ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಬಾರಿ ಸಹ ಸಾತೇರಿ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಪ್ರಾರಂಭವಾಗಿದ್ದು, ದೇವಿಯ ದರ್ಶನ ಪಡೆಯುವುದಕ್ಕೆ ಇನ್ನೂ ಮೂರು ದಿನಗಳ ಕಾಲಾವಕಾಶವಿದೆ. (etbk)