


ರಾಜಕೀಯ ಧ್ರುವೀಕರಣದಲ್ಲಿ ಯಲ್ಲಾಪುರ ಕ್ಷೇತ್ರ: ಮೂವರು ನಾಯಕರ ನಡುವೆ ಮತದಾರನಿಗೂ ಗೊಂದಲ
ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗಲೇ ಹಾಲಿ ಶಾಸಕ ಶಿವರಾಮ ಹೆಬ್ಬಾರ್, ಮಾಜಿ ಶಾಸಕ ವಿ ಎಸ್ ಪಾಟೀಲ್, ಹೊಸ ಮುಖ ಪ್ರಶಾಂತ ದೇಶಪಾಂಡೆ ನಡುವೆ ಪೈಪೋಟಿ ಏರ್ಪಟ್ಟಿದೆ.

ಶಿರಸಿ (ಉತ್ತರ ಕನ್ನಡ): ಜಿಲ್ಲೆಯ ಯಲ್ಲಾಪುರ ಈಗ ರಾಜಕೀಯ ಧ್ರುವೀಕರಣಕ್ಕೆ ಹೆಸರಾಗುತ್ತಿದೆ. ಇಷ್ಟು ದಿನ ಬಿಜೆಪಿಯ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ವಿಎಸ್ ಪಾಟೀಲ್ ಈಗ ಕಾಂಗ್ರೆಸ್ನತ್ತ ವಾಲಿದ್ದಾರೆ. ಆದರೆ, ಈಗಾಗಲೇ ಅಲ್ಲಿ ಕಾಂಗ್ರೆಸ್ನಿಂದ ಪ್ರಶಾಂತ ದೇಶಪಾಂಡೆ ಓಡಾಟ ನಡೆಸಿದ್ದಾರೆ. ಇದೆಲ್ಲದರ ಜೊತೆಯಲ್ಲಿ ಸಚಿವ ಹೆಬ್ಬಾರ್ ಅವರ ಕ್ಷೇತ್ರ ಓಡಾಟ ಭರ್ಜರಿಯಾಗಿ ನಡೆದಿದ್ದು, ಯಾರು ಯಾವ ಪಕ್ಷದ ಅಭ್ಯರ್ಥಿಯೋ ಎಂಬ ಜಿಜ್ಞಾಸೆಯ ನಡುವೆಯೇ, ಯಾರಿಗೆ ಮತ ನೀಡುವುದು ಎಂಬ ಗೊಂದಲವೂ ಮೂಡಿದೆ.
2008ರಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದ ವಿಎಸ್ ಪಾಟೀಲ್, ನಂತರದ ಚುನಾವಣೆಗಳಲ್ಲಿ ಸೋಲು ಕಂಡಿದ್ದರು. ಆದರೆ, ಈ ಬಾರಿ ಬಿಜೆಪಿ ಸರ್ಕಾರದ ಬಂದ ನಂತರದಲ್ಲಿ ಅವರನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಈಗ ಅದರ ನಾಮ ನಿರ್ದೇಶನ ರದ್ದು ಮಾಡಲಾಗಿದ್ದು, ಪರೋಕ್ಷವಾಗಿ ಬಿಜೆಪಿಯಿಂದ ಹೊರ ದಬ್ಬಿಂತಾಗಿದೆ.
ಹೀಗಾಗಿಯೇ ವಿಎಸ್ ಪಾಟೀಲ್ ಕಾಂಗ್ರೆಸ್ ಸೇರುವ ಮೂಲಕ ಹೊಸ ಸಂಚಲನ ಮೂಡಿಸಿದರೂ ಸಹ ಈ ಹಿಂದೆ ಭರ್ಜರಿ ಓಡಾಟ ನಡೆಸಿರುವ ಪ್ರಶಾಂತ ದೇಶಪಾಂಡೆ ಏನು ಮಾಡಲಿದ್ದಾರೆ? ಎಂಬ ಗೊಂದಲ ಕಾರ್ಯಕರ್ತರಲ್ಲಿ ಮೂಡಿದೆ. ಹಿರಿಯ ಕಾಂಗ್ರೆಸ್ಸಿಗ ಆರ್ವಿ ದೇಶಪಾಂಡೆ ಮಗ ಪ್ರಶಾಂತ ದೇಶಪಾಂಡೆ ಯಲ್ಲಾಪುರ ಕ್ಷೇತ್ರದ ಅಭ್ಯರ್ಥಿಯಾಗಲು ಕಳೆದ ಕೆಲ ತಿಂಗಳಿನಿಂದ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದರು. ಕಾರ್ಯಕರ್ತರ ಪಡೆ ಕಟ್ಟಿಕೊಂಡು ವರ್ಷದ ಮೊದಲೇ ಪ್ರಚಾರ ರೀತಿಯ ಸಭೆಗಳನ್ನು ನಡೆಸುತ್ತಿದ್ದಾರೆ.
ರಾಜಕೀಯ ಧ್ರುವೀಕರಣದಲ್ಲಿ ಯಲ್ಲಾಪುರ ಕ್ಷೇತ್ರ: ಮೂವರು ನಾಯಕರ ನಡುವೆ ಮತದಾರನಿಗೂ ಗೊಂದಲ
ಪುನಃ ಪಾಟೀಲ್ ಮತ್ತು ಹೆಬ್ಬಾರ್ ವಾರ್?: ಈ ಹಿಂದೆ ಮೂರ್ನಾಲ್ಕು ಚುನಾವಣೆಯಲ್ಲಿ ಪಾಟೀಲ್ ಮತ್ತು ಹಾಲಿ ಶಾಸಕ ಶಿವರಾಮ ಹೆಬ್ಬಾರ್ ನೇರ ಎದುರಾಳಿ ಆಗಿದ್ದರು. ಆಗ ಹೆಬ್ಬಾರ್ ಕಾಂಗ್ರೆಸ್ನಲ್ಲಿದ್ದರೆ ಪಾಟೀಲ್ ಬಿಜೆಪಿಯಲ್ಲಿದ್ದರು. ಈಗ ಪುನಃ ಪಾಟೀಲ್ ಮತ್ತು ಹೆಬ್ಬಾರ್ ನಡುವೆ ವಾರ್ ನಡೆಯುವ ಸಾಧ್ಯತೆಯಿದೆ. ಕಾರಣ ಸಚಿವ ಹೆಬ್ಬಾರ್ ಸಹ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ಇದರೊಟ್ಟಿಗೆ ಅವರು ಅವರದ್ದೆ ಆದ ಕಾರ್ಯಕರ್ತರ ಪಡೆಯನ್ನೂ ಹೊಂದಿದ್ದಾರೆ. ಆದರೆ, ಬಿಜೆಪಿಯಿಂದ ಅಧಿಕೃತ ಅಭ್ಯರ್ಥಿ ಯಾರು ಎಂಬುದು ಸ್ಪಷ್ಟವಾಗಲು ಚುನಾವಣೆ ಬರಬೇಕಾದ ಕಾರಣ ವೈಯಕ್ತಿಕ ಪ್ರಚಾರ ಸಾಗಿದೆ. ಅಲ್ಲದೇ ವಿಎಸ್ ಪಾಟೀಲ್ ಅಧಿಕೃತವಾಗಿ ಕಾಂಗ್ರೆಸ್ ಸೇರದಿರುವುದು ಹಲವು ಗೊಂದಲ ಸೃಷ್ಟಿಯಾಗಿದೆ. ಆದ್ದರಿಂದ ಯಾವುದನ್ನೂ ಈಗಲೇ ಹೇಳಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಹೆಬ್ಬಾರ್ ಅವರದ್ದಾಗಿದೆ.

ಒಟ್ಟಾರೆಯಾಗಿ ಹಾಲಿ ಶಾಸಕ ಶಿವರಾಮ ಹೆಬ್ಬಾರ್, ಮಾಜಿ ಶಾಸಕ ವಿಎಸ್ ಪಾಟೀಲ್, ಹೊಸ ಮುಖ ಪ್ರಶಾಂತ ದೇಶಪಾಂಡೆ ಅವರು ನಡುವೆ ಮತದಾರ ಗೊಂದಲದಲ್ಲಿದ್ದಾನೆ. ನಾಯಕರ ನಡುವೆಯೂ ಯಾರು ಅಭ್ಯರ್ಥಿ ಎಂಬ ಕುತೂಹಲವಿದ್ದರೆ, ಮತದಾರ, ಕಾರ್ಯಕರ್ತರು ಯಾರನ್ನು ಬೆಂಬಲಿಸಬೇಕು ಎಂಬ ಸಮಸ್ಯೆಯಲ್ಲಿದ್ದಾರೆ. ಆದರೆ ಅಂತಿಮ ಚಿತ್ರಣಕ್ಕೆ ಇನ್ನು ಕೆಲವೇ ತಿಂಗಳು ಕಾಯಬೇಕಾದ ಅನಿವಾರ್ಯತೆಯೂ ಇದೆ. (etbk)
