ಆಫ್ರಿಕದಿಂದ ಎಂಟು ಚೀತಾಗಳನ್ನು ತಂದಿದ್ದರಿಂದ ಪ್ರಧಾನಿ ಮೋದಿಯವರಿಗೆ ಎಲ್ಲ ಕಡೆಯಿಂದ ಭೋ ಪರಾಕ್ ಸಿಗುತ್ತಿದೆ. ಸಿಗಲಿ.
ಅಳಿದುಹೋದ ವನ್ಯ ಸಂತತಿಯೊಂದಕ್ಕೆ ಮರುಜೀವ ಕೊಡುವ ಮಹಾಯತ್ನ ಇದೆಂದು ಮೋದಿಯವರು ಮಹಾ ಉತ್ಸಾಹದಿಂದ ಭಾಷಣ ಮಾಡಿದ್ದಾರೆ. ಮಾಧ್ಯಮಗಳು ಜೈಕಾರ ಹಾಕಿವೆ. ಹಾಕಲಿ.
ಹಿಂದೆ ಯಾರೂ ಆ ಯತ್ನವನ್ನು ಮಾಡಲೇ ಇಲ್ಲವೆಂದು ಮೋದಿಯವರು ಆಪಾದಿಸಿದ್ದಾರೆ. ಅಲ್ಲೊಂದು ತಪ್ಪಾಗಿದೆ. 2009-10ರಲ್ಲೇ ಇಂಥ ಯತ್ನ ನಡೆದಿತ್ತೆಂದು ಕಾಂಗ್ರೆಸ್‌ನ ಜೈರಾಮ್ ರಮೇಶ್ ಫೋಟೊ ಸಮೇತ ಟ್ವೀಟ್ ಮಾಡಿದ್ದಾರೆ. ಅದನ್ನು ಕೆಲವೇ ಕೆಲವು ವಾರ್ತಾಸಂಸ್ಥೆಗಳು ಮಾತ್ರ ವರದಿ ಮಾಡಿವೆ. ಇರಲಿ. ಅಂತೂ ಒಂದು ಭರ್ಜರಿ ಸಂಭ್ರಮದ ಘಟನೆ ನಡೆದಿದೆ.
ವಾಸ್ತವ ಏನು?
ವಾಸ್ತವ ಅಂಶಗಳು ಹೀಗಿವೆ: ಭಾರತದ ವನ್ಯಜೀವಿ ಮಂಡಳಿಗೆ ಪ್ರಧಾನಿಯೇ ಅಧ್ಯಕ್ಷರು. ಆದರೆ ಮೋದಿಯವರು ಪ್ರಧಾನಿಯಾದ ಈ ಎಂಟು ವರ್ಷಗಳಿಂದ ಒಮ್ಮೆಯೂ ಈ ಮಂಡಳಿ ಸಭೆ ಸೇರಿಲ್ಲ. ಈ ಅವಧಿಯಲ್ಲಿ ಭಾರತದ ವನ್ಯಜೀವಿಗಳ ಸ್ಥಿತಿಗತಿ ಇನ್ನಷ್ಟು ದಾರುಣವಾಗಿದೆ. ಉದ್ಯಮ ವಲಯದ ಬೆಳವಣಿಗೆಗೆ ಅರಣ್ಯ ರಕ್ಷಣಾ ಕಾನೂನುಗಳು ಅಡ್ಡಿ ಒಡ್ಡುತ್ತಿವೆ ಎಂದು ಹೇಳಿ ಪರಿಸರ ರಕ್ಷಣಾ ಕಾನೂನು(ಇಐಎ) ಗಳನ್ನು ಸಾಕಷ್ಟು ಸಡಿಲಗೊಳಿಸಲಾಗಿದೆ.
ಅದು ಸಾಲದೆಂಬಂತೆ ವನ್ಯ ಸಂರಕ್ಷಣಾ ಸಂಸ್ಥೆಗಳಿಗೆ ಅನುದಾನವನ್ನು ಕಡಿತಗೊಳಿಸಲಾಗುತ್ತಿದೆ. ʼನಿಮಗೆ ಬೇಕಿದ್ದ ಹಣವನ್ನು ನೀವೇ ಹೊಂದಿಸಿಕೊಳ್ಳಿʼ ಎಂದು ಅವಕ್ಕೆ ತಾಕೀತು ಮಾಡಲಾಗುತ್ತಿದೆ. ಈ ಸಂಸ್ಥೆಗಳು ಪ್ರವಾಸೋದ್ಯಮ ಯೋಜನೆಗಳಿಗೆ, ಉದ್ಯಮಿಗಳ ಪ್ರಾಯೋಜಕತ್ವಕ್ಕೆ ಅಂತ ಅದೂ ಇದೂ ಏನೇನೋ ಕಸರತ್ತು ಮಾಡಿ ವನ್ಯ ಸಂರಕ್ಷಣೆಗೆ ಹಣವನ್ನು ಹೊಂದಿಸಬೇಕಾಗಿದೆ.
ಅದೆಷ್ಟೊ ಬಗೆಯ ಪ್ರಾಣಿಪಕ್ಷಿಗಳು ಅವಸಾನದ ಅಂಚಿಗೆ ಬಂದಿವೆ. ನಮ್ಮ ಸಿಂಹಬಾಲದ ಲಂಗೂರಗಳು, ಬಸ್ಟಾರ್ಡ್ ಪಕ್ಷಿಗಳು (ದೊರೆವಾಯನ ಹಕ್ಕಿ), ಕಾಝಿರಂಗಾದ ಒಂಟಿಕೊಂಬಿನ ಘೇಂಡಾಗಳು, ಬೆಂಗಾಲ್ ಫ್ಲೋರಿಕನ್ ಪಕ್ಷಿ ಇವೆಲ್ಲವುಗಳ ಸಂತತಿ ಕ್ಷೀಣಿಸುತ್ತಿದೆ. ಅವುಗಳ ವಾಸಸ್ಥಾನ ಕಿರಿದಾಗುತ್ತಿದೆ. ಇಂಥ ಸಂಗತಿಗಳತ್ತ ಪ್ರಧಾನಿಯವರ ಗಮನ ಸೆಳೆಯುವ ಬದಲು ಅವರನ್ನು ವನ್ಯರಕ್ಷಣಾ ಧುರಂಧರ ಎಂದು ಬಿಂಬಿಸಿದ್ದು ಸರಿಯೆ?
ಚೀತಾಗಳ ಕತೆಯನ್ನು ನೋಡೋಣ. ಇವಕ್ಕೆ ಕನ್ನಡದಲ್ಲಿ ʼಸಿವಂಗಿʼ ಎನ್ನುತ್ತಿದ್ದರು. ಹಾಗಾಗಿ ಈ ಹೆಸರಲ್ಲೇ ಸಿವಂಗಿಗಳ ಕತೆಯನ್ನು ಮುಂದುವರೆಸೋಣ. ಇವು ಚಿರತೆಗಳಿಗಿಂತ ಡಬಲ್ ವೇಗದಲ್ಲಿ (ಗಂಟೆಗೆ 110 ಕಿ.ಮೀ.) ಓಡಿ ಬೇಟೆಯಾಡುತ್ತವೆ. ಚಿರತೆಗಳ ಹಾಗೆ ಹೊಂಚಿ ಕೂತು ಜಂಪ್ ಮಾಡುವುದಿಲ್ಲ. ಚಿರತೆಗಳ ಹಾಗೆ ಮರ ಹತ್ತಲು ಇವಕ್ಕೆ ಬರುವುದಿಲ್ಲ. ಕೂಗಿದರೆ ಬೆಕ್ಕಿನ ಕೂಗಿನಂತೆ, ಕೆಲವೊಮ್ಮೆ ಅಳಿಲಿನಂತೆ/ಪಕ್ಷಿಯಂತೆ ಕ್ಷೀಣ ಧ್ವನಿ. ಪಾಪದ ಪ್ರಾಣಿ.
ಸಿವಂಗಿಗಳು ತಕ್ಕಮಟ್ಟಿಗೆ ಸಭ್ಯ ಪ್ರಾಣಿಗಳು. ಹೊಟ್ಟೆ ತುಂಬಿರುವಾಗ ಇವು ಮನುಷ್ಯರ ಜೊತೆಗೂ ಮೈತ್ರಿಯಿಂದ ಇರುತ್ತವೆ (ಇವು ಮನುಷ್ಯರನ್ನು ಕೊಂದ ಉದಾಹರಣೆ ಆಫ್ರಿಕಾದಲ್ಲಿ ಇಲ್ಲ). ಅದಕ್ಕೇ ಹಿಂದಿನ ರಾಜಮಹಾರಾಜರು, ಮೊಘಲರು, ಬ್ರಿಟಿಷರು ಇವುಗಳನ್ನು ಸೆರೆ ಹಿಡಿಸಿ ತಂದು ತಮ್ಮ ಊಳಿಗದಲ್ಲಿ ಸಾಕಿಕೊಳ್ಳುತ್ತಿದ್ದರು.
ಸಾಮಾನ್ಯ ಸಾಮಂತರು, ಊರ ಪಟೇಲರಿಗೆ ಅದು ಸಾಧ್ಯ ಇರಲಿಲ್ಲ. ಏಕೆಂದರೆ ಅದನ್ನು ಹಿಡಿಯಲು ಭಾರೀ ಶ್ರಮ ಬೇಕು. ಅವುಗಳ ವಾಸದ ನೆಲೆಯನ್ನು ಪತ್ತೆ ಹಚ್ಚಿ, ಅಪ್ಪ-ಅಮ್ಮನನ್ನು ಕೊಂದು, ಮರಿಗಳನ್ನು ಹಿಡಿದು ತರಬೇಕು. ಅದಕ್ಕೆ ತಗಲುವ ವೆಚ್ಚವನ್ನು ದೊಡ್ಡ ರಾಜರುಗಳು ಮಾತ್ರ ಭರಿಸಬಲ್ಲವರಾಗಿದ್ದರು. ಸಾಕಿದ ಸಿವಂಗಿಗೆ ಬೆಲ್ಟ್ ಕಟ್ಟಿ, ಕಾಲ ಬಳಿ ಕೂರಿಸಿ ಬೆನ್ನು ತಟ್ಟಿ ಮೀಸೆ ತಿರುವುತ್ತಿದ್ದರು.
ಈ ದೊಡ್ಡವರಿಗೆ ಸಿವಂಗಿಯನ್ನು ತಂದೊಪ್ಪಿಸಿ ಭಕ್ಷೀಸು ಪಡೆಯುವವರ ಹಾವಳಿಯಿಂದ ಕ್ರಮೇಣ ಅವುಗಳ ಸಂತತಿಯೇ ನಶಿಸಿ ಹೋಯಿತು.
ಈಗ ಆಫ್ರಿಕದ ಸಿವಂಗಿಗಳು ಹುಲಿಯ ಮುಖವರ್ಣಿಕೆಯಿದ್ದ ಬಾಡಿಗೆ ಬೋಯಿಂಗ್ 747 ವಿಮಾನದ ಮೂಲಕ ಮಧ್ಯಪ್ರದೇಶದ ಕುನೋ ಸಂರಕ್ಷಿತ ಅರಣ್ಯಕ್ಕೆ ಬಂದಿವೆ. ಕುನೋ ಎಂದರೆ ಅದು ಉದುರೆಲೆ ಕಾಡು. ಸಿವಂಗಿಗೆ ಬೇಕಾದ ವಿಶಾಲ ಹುಲ್ಲುಗಾವಲು ಅಲ್ಲಿ ಇಲ್ಲ. ಮೂಲತಃ ಅಲ್ಲಿ ಗುಜರಾತಿನ ಗಿರ್ ಅರಣ್ಯದ ಒಂದಿಷ್ಟು ಸಿಂಹಗಳನ್ನು ತಂದು ನೆಲೆಗೊಳಿಸುವ ಯೋಜನೆ ಇತ್ತು.
ಭಾರತದಲ್ಲಿ ಗಿರ್ ಅರಣ್ಯದಂಥ ಒಂದೇ ಕಡೆ ಏಷ್ಯನ್ ಸಿಂಹ ಇರುವುದು ರಿಸ್ಕಿ. ರೋಗರುಜಿನೆ ಬಂದರೆ ಎಲ್ಲವೂ ಏಕಕಾಲಕ್ಕೆ ನಶಿಸಿ ಹೋಗುವ ಸಂಭವ ಇದೆ. ಹಾಗಾಗಿ ಇನ್ನೊಂದು ಕಡೆ ಅದೇ ಸಿಂಹಗಳ ಹೊಸ ಪಡೆಯನ್ನು ನೆಲೆಗೊಳಿಸುವ ಯೋಜನೆ ಇತ್ತು. ಆದರೆ ಗುಜರಾತ್ ಸರಕಾರ ತನ್ನ ಸಿಂಹಗಳ ಒಂದೇ ಒಂದು ಜೋಡಿಯನ್ನೂ ಬೇರೆ ರಾಜ್ಯಕ್ಕೆ ಕೊಡಲು ಒಪ್ಪಿರಲಿಲ್ಲ.
ಈಗ ಅದೇ ಕುನೋ ಅರಣ್ಯಕ್ಕೆ ಸಿವಂಗಿಗಳನ್ನು ತಂದಾಗಿದೆ.
ಸಿವಂಗಿಗಳಿಗೆ ವಿಶಾಲ ಹುಲ್ಲುಗಾವಲು ಬೇಕು. ಅಲ್ಲಿ ಚಿರತೆ, ಕಿರುಬ (ಹೈನಾ)ದಂಥ ಪ್ರಾಣಿಗಳು ಜಾಸ್ತಿ ಇರಬಾರದು. ಕುನೋದಲ್ಲಿನ ಕುರುಚಲು ಕಾಡನ್ನು ಹುಲ್ಲುಗಾವಲನ್ನಾಗಿ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಅಥವಾ ಚಿರತೆ, ಹೈನಾಗಳನ್ನು ದೂರ ಸಾಗಿಸಲೂ ಅವಕಾಶ ಇಲ್ಲ.
ಇಲ್ಲಿ ಸಿವಂಗಿಗಳಿಗೆ ಬೇಕಾದ ಚುಕ್ಕಿಜಿಂಕೆ, ಚಿಂಕಾರಾ/ ಕೃಷ್ಣ ಮೃಗ, ಸಾಂಬಾರ್ ಜಿಂಕೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತಂದು ಸಾಕೋಣವೆಂದರೆ, ಅವಕ್ಕೂ ಹುಲ್ಲುಗಾವಲು ಬೇಕಲ್ಲ? ಈಗಿರುವ ಕುರುಚಲು ಅರಣ್ಯದಲ್ಲೇ ಅವು ಬದುಕಲು ಕಲಿತರೂ ಅವು ಸಿವಂಗಿ ದಾಳಿಯ ಸೂಕ್ಷ್ಮ ಅರಿತು ಪೊದೆಯೊಳಗೆ ಅವಿತು ಕಣ್ಮರೆಯಾದರೆ ಅವನ್ನು ಸಿವಂಗಿ ಅಟ್ಟಾಡಿಸಿ ಹಿಡಿಯಲಾರದು.
ಹಾಗಾಗಿ ಇಂಥ ಗೊರಸು ಪ್ರಾಣಿಗಳೆಲ್ಲ ಚಿರತೆಗಳ ಪಾಲಾಗಿ, ಚಿರತೆ ಸಂತತಿ ಬಲುಶೀಘ್ರ ಜಾಸ್ತಿಯಾಗಬಹುದು. ಅವುಗಳ ಜೊತೆ ಸಿವಂಗಿಗಳು ಹೋರಾಡಿ ಗೆಲ್ಲುವುದು ಕಷ್ಟ. ಚಿರತೆ ಮತ್ತು ಕಿರುಬಗಳು ಸೇರಿ ಸಿವಂಗಿಗಳನ್ನು ಹಿಡಿದು ಕೊಂದೇ ಹಾಕಬಹುದು.
ಸಿವಂಗಿ ತುಂಬಾ ಸೂಕ್ಷ್ಮ ಪ್ರಾಣಿ. ಆಫ್ರಿಕದ ಸೆರೆಂಗಿಟಿಯಲ್ಲಿ ಹೆಣ್ಣು ಚೀತಾ (ಸಿವಂಗಿ)ಗಳಿಗೆ ರೇಡಿಯೊ ಕಾಲರ್ ಹಾಕಿ ನಡೆಸಿದ ಅಧ್ಯಯನದ ಪ್ರಕಾರ, ಶೇ65 ರಷ್ಟು ಎಳೇ ಮರಿಗಳು ತಾಯಿಯ ಆಸರೆಯಲ್ಲೇ ಸಾಯುತ್ತವೆ. ಇನ್ನುಳಿದ ಶೇ. 35ರಷ್ಟು ತುಸು ದೊಡ್ಡವಾಗಿ ಅಮ್ಮನಿಂದ ದೂರ ಸರಿದರೂ ಕೊನೆಗೆ ಪ್ರೌಢಾವಸ್ಥೆಗೆ ಬರುವುದು ಶೇ. 5ರಷ್ಟು ಮಾತ್ರ. ಭಾರತದಲ್ಲಿ ಅವುಗಳ ಬದುಕುಳಿಯುವ ಸಾಮರ್ಥ್ಯ ಹೆಚ್ಚೀತೆ? ಗೊತ್ತಿಲ್ಲ.
ಕುನೋ ಅರಣ್ಯ ಪ್ರದೇಶದಲ್ಲಿ ಆದಿವಾಸಿಗಳ, ಗಿರಿಜನರ ಸುಮಾರು 150 ಹಳ್ಳಿಗಳಿವೆ. ಮೋದಿಯವರ ಈ ಯೋಜನೆಗೆ ಭರ್ಜರಿ ಜಯ ಸಿಗಬೇಕೆಂಬ ಉದ್ದೇಶದಿಂದ ಸಿವಂಗಿಗಳ ಓಡಾಟಕ್ಕೆ ಜಾಗ ಮಾಡಬೇಕೆಂಬ ರಣೋತ್ಸಾಹದಲ್ಲಿ ಅವರನ್ನೆಲ್ಲ ಅವಸರದಲ್ಲಿ ಎತ್ತಂಗಡಿ ಮಾಡಲು ಹೋದರೆ ಪ್ರತಿಭಟನೆ, ಹೋರಾಟ ಎಲ್ಲ ಹೆಚ್ಚಾಗಬಹುದು. ಮರುವಸತಿಗೆ ಒಪ್ಪಿದರೆ ನಿಮ್ಮ ಬದುಕು ಈಗಿಗಿಂತ ಒಳ್ಳೆಯದಾಗುತ್ತದೆಂದು ಅವರನ್ನು ನಂಬಿಸಬೇಕು. ಅಂಥ ಮಾದರಿಯನ್ನು ಅವರಿಗೆ ತೋರಿಸಬೇಕು. ಎಲ್ಲಿದೆ ಅಂಥ ಮಾದರಿ?
ಮುಂದಿನ ತಿಂಗಳು ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಸಿವಂಗಿಗಳು ಬರಲಿವೆ. ಹೀಗೆ ಈ ಯೋಜನೆ ಇನ್ನೂ 13 ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ.
ಪ್ರಶ್ನೆ ಏನೆಂದರೆ, ನಮ್ಮಲ್ಲಿ ಅಳಿವಿನಂಚಿನಲ್ಲಿರುವ ಅನೇಕ ಪ್ರಾಣಿ-ಪಕ್ಷಿಗಳು ಸರಕಾರಿ ನೆರವಿಗೆ ಕಾದು ಕೂತಿವೆ. ಗಣಿಗಾರಿಕೆಯ ಅಬ್ಬರ, ನದಿಮೂಲಗಳ ನಾಶ, ಹೆದ್ದಾರಿಗಳ ವಿಸ್ತರಣೆ, ದಟ್ಟ ಅರಣ್ಯವನ್ನು ಸೀಳಿ ಹುಬ್ಬಳ್ಳಿ- ಅಂಕೋಲಾದಂಥ ನಿಷ್ಪ್ರಯೋಜಕ ರೈಲುಮಾರ್ಗ ಯೋಜನೆಗೆ ಸಿದ್ಧತೆ ಎಗ್ಗಿಲ್ಲದೆ ನಡೆಯುತ್ತಿವೆ. ಪ್ರಧಾನಿ ಮೋದಿಯವರಿಗೆ ವನ್ಯಜೀವಿ ಮಂಡಳಿಯ ಸಭೆ ಕರೆಯಲು ಪುರುಸೊತ್ತೇ ಆಗಿಲ್ಲ.
ನಮ್ಮ ಈ ವಿಶಾಲ ದೇಶದಲ್ಲಿ ವನ್ಯಜೀವಿಗಳಿಗೆ ಉಳಿದಿರುವುದೇ ಶೇಕಡಾ 3ಕ್ಕಿಂತ ಕಡಿಮೆ ಸ್ಥಳ. ಅದನ್ನೂ ಕೆಡಿಸಲು, ಕಬಳಿಸಲು ಅಹೋರಾತ್ರಿ ಹುನ್ನಾರ ನಡೆಯುತ್ತಿದೆ. ಅಂಥ ವಾಸ್ತವಗಳನ್ನೆಲ್ಲ ಮರೆಮಾಚಿ, ಪ್ರಧಾನ ಮಂತ್ರಿಯವರನ್ನು “ಸಿವಂಗಿಗಳ ಭಾಗ್ಯ ವಿಧಾತ” ಎಂದು ಬಿಂಬಿಸುವ ಕೆಲಸ ನಡೆದಿದೆ.
ಪಾಪ ಮೋದಿ. ಯಾರ್ಯಾರದೋ ಒತ್ತಾಯಕ್ಕೆ ವನ್ಯಪ್ರೇಮಿಯ ವೇಷ ತೊಟ್ಟು, ಕ್ಯಾಮರಾ ಹಿಡಿದು ಮೆರೆಯಬೇಕು.
(ಚಿತ್ರಕೃಪೆ: ಔಟ್‌ಲುಕ್)