ಮೊಗೆದಷ್ಟೂ ಬೆರಗು ನಿಮ್ಮನ್ನು ನೀವೇ ನೋಡಿಕೊಳ್ಳಿ…….
ಸಿದ್ದಾಪುರ: ಹಳ್ಳಿ ಹಳ್ಳಿಗಳಲ್ಲಿ ಯಕ್ಷಗಾನದ ಪ್ರೀತಿ ಬೆಳೆಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ನೀಡುವ ಯಕ್ಷಸಿರಿ ಪ್ರಶಸ್ತಿ ಪಡೆದ ಯಕ್ಷಗಾನ ಕಲಾವಿದ ಕೃಷ್ಣಾಜಿ ಬೇಡ್ಕಣಿ ಇವರನ್ನು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೇಡ್ಕಣಿಯ ರಾಮಾಂಜನೇಯ ಕಲಾ ಬಳಗದ ವತಿಯಿಂದ ಹೃದಯಸ್ಪರ್ಷಿಯಾಗಿ ಅಭಿನಂದಿಸಲಾಯಿತು.
ಬೇಡ್ಕಣಿಯ ಕೋಟೆ ಆಂಜನೇಯ ಸಭಾಭವನದಲ್ಲಿ ಶನಿವಾರ ಸಂಜೆ ನಡೆದ ಸಮಾರಂಭದಲ್ಲಿ ಕೃಷ್ಣಾ ನಾಯ್ಕ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಕೃಷ್ಣಾಜಿ ಬೇಡ್ಕಣಿ ಮಾತನಾಡಿ, ಯಕ್ಷಗಾನವನ್ನೆ ಉಸಿರಾಗಿಸಿಕೊಂಡ ನನಗೆ ಸಂದ ಸನ್ಮಾನ ಹಾಗೂ ಪ್ರಶಸ್ತಿಗಳು ಯಕ್ಷಗಾನ ಕಲಿಸಿದ ಗುರುವಿಗೆ ಸಲ್ಲಬೇಕು. ಅಂದು ನಾ ಪಟ್ಟ ಪರಿಶ್ರಮಕ್ಕೆ ಇವತ್ತು ಫಲ ಸಿಕ್ಕಿದೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದ್ದು, ಜೀವ ಇರುವವರೆಗೂ ಗೆಜ್ಜೆ ಕಟ್ಟಿ ಕುಣಿಯುತ್ತೇನೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಟೀಮ್ ಪರಿವರ್ತನೆಯ ಸಂಸ್ಥಾಪಕ ಹಿತೇಂದ್ರ ನಾಯ್ಕ ಮಾತನಾಡಿ, ತೆರೆಯ ಮೇಲೆ ಪ್ರೇಕ್ಷಕರನ್ನು ನಗಿಸುವ ಕಲಾವಿದರ ಜೀವನ ಶೋಚನೀಯವಾಗಿದೆ. ಸರ್ಕಾರ ಯಕ್ಷಗಾನವನ್ನು ಒಂದು ವಿಷಯವಾಗಿ ಪರಿಗಣಿಸಬೇಕು. ಯಕ್ಷಗಾನದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
ಕೃಷ್ಣಾಜಿ ಕುರಿತು ಬನವಾಸಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಎಂ.ಕೆ.ನಾಯ್ಕ ಅಭಿನಂದನಾ ನುಡಿಗಳನ್ನಾಡಿ, ಬೇಡ್ಕಣಿಯ ಪರಿಸರದಲ್ಲಿ ಯಕ್ಷಗಾನದ ಪ್ರೀತಿ ಬೆಳೆಯಲು ಕೃಷ್ಣಾಜಿ ಬೇಡ್ಕಣಿ ಪಾತ್ರ ದೊಡ್ಡದಿದೆ. ಕಡಿಮೆ ವೆಚ್ಚದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಯಕ್ಷಗಾನ ಪ್ರದರ್ಶಿಸಿ ಕ್ರಾಂತಿಯನ್ನುಂಟು ಮಾಡಿದರು. ಯಕ್ಷಗಾನದ ಎಲ್ಲಾ ಪಾತ್ರಗಳನ್ನು ಮಾಡಬಲ್ಲ ಕಲಾವಿದ ಕೃಷ್ಣಾಜಿ ಬೇಡ್ಕಣಿಯಾಗಿದ್ದರು. ಕಲಾವಿದರಿಗೆ ಕೃಷ್ಣಾಜಿ ರೋಲ್ ಮಾಡೆಲ್ ಆಗಿದ್ದವರು. ಅವರಿಗೆ ಇನ್ನು ಹೆಚ್ಚಿನ ಪ್ರಶಸ್ತಿಗಳು ದೊರಕಲಿ ಎಂದರು.
ಕೋಟೆ ಆಂಜನೇಯ ದೇವಾಲಯದ ಅಧ್ಯಕ್ಷ ವಿ.ಎನ್.ನಾಯ್ಕ ಬೇಡ್ಕಣಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ತಾಲೂಕಾ ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ, ಬನವಾಸಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಎಂ.ಕೆ.ನಾಯ್ಕ ಹೊಸಳ್ಳಿ, ಬೇಡ್ಕಣಿ ಗ್ರಾಮ ಪಂಚಾಯ್ತಿ ಸದಸ್ಯರಾದ ಪದ್ಮಪ್ರಿಯಾ ನಾಯ್ಕ, ಗೋವಿಂದ ನಾಯ್ಕ, ಪತ್ರಕರ್ತ ಗಣೇಶ ಭಟ್, ತಾಲೂಕಾ ಪಂಚಾಯ್ತಿ ಮಾಜಿ ಸದಸ್ಯ ಬಸೀರ್ ಸಾಬ್ ಬೇಡ್ಕಣಿ, ರಾಮಾಂಜನೇಯ ಕಲಾ ಬಳಗದ ಅಧ್ಯಕ್ಷ ರಾಮಕೃಷ್ಣ ನಾಯ್ಕ ಉಪಸ್ಥಿತರಿದ್ದರು. ಕಸಾಪದ ಚಂದ್ರಶೇಖರ ಕುಂಬ್ರಿಗದ್ದೆ ಸ್ವಾಗತಿಸಿದರು. ಗಣಪತಿ ಹೆಗಡೆ ಗುಂಜಗೋಡ ನಿರೂಪಿಸಿದರು. ಕಸಾಪ ಕೋಶಾಧ್ಯಕ್ಷ ಪಿ.ಬಿ.ಹೊಸೂರ ವಂದಿಸಿದರು.
ಲೀಫ್ ಆರ್ಟಿನಲ್ಲಿ ರಾಷ್ಟ್ರಗೀತೆ ಬರೆದ ತಾಲೂಕಿನ ಹೊಸಮಂಜುವಿನ ತೃಪ್ತಿ ಮಂಜುನಾಥ ನಾಯ್ಕ ಇವರನ್ನು ಸನ್ಮಾನಿಸಲಾಯಿತು.