

ಕೋಮುವಾದಿ ಶಕ್ತಿಗಳನ್ನು ನಿಷೇಧಿಸುವುದಾದರೆ ಮೊದಲು ಆರ್ ಎಸ್ಎಸ್ ಅನ್ನು ನಿಷೇಧಿಸಿ: ಸಿಪಿಐ(ಎಂ)
ಉಗ್ರಗಾಮಿ ಸಂಘಟನೆ ಅಥವಾ ಕೋಮುವಾದಿ ಶಕ್ತಿಗಳ ಮೇಲೆ ನಿಷೇಧ ಹೇರುವುದರಿಂದ ಅದರ ಚಟುವಟಿಕೆಗಳನ್ನು ಕೊನೆಗಾಣಿಸಲು ಸಾಧ್ಯವಿಲ್ಲ. ಒಂದು ವೇಳೆ ಅಂತಹ ಕ್ರಮ ಕೈಗೊಳ್ಳುವುದಾದರೆ ಮೊದಲು ಆರ್‌ಎಸ್‌ಎಸ್ ಅನ್ನು…

ತಿರುವನಂತಪುರಂ: ಉಗ್ರಗಾಮಿ ಸಂಘಟನೆ ಅಥವಾ ಕೋಮುವಾದಿ ಶಕ್ತಿಗಳ ಮೇಲೆ ನಿಷೇಧ ಹೇರುವುದರಿಂದ ಅದರ ಚಟುವಟಿಕೆಗಳನ್ನು ಕೊನೆಗಾಣಿಸಲು ಸಾಧ್ಯವಿಲ್ಲ. ಒಂದು ವೇಳೆ ಅಂತಹ ಕ್ರಮ ಕೈಗೊಳ್ಳುವುದಾದರೆ ಮೊದಲು ಆರ್‌ಎಸ್‌ಎಸ್ ಅನ್ನು ನಿಷೇಧಿಸಬೇಕು ಎಂದು ಕೇರಳದ ಆಡಳಿತಾರೂಢ ಸಿಪಿಐ(ಎಂ) ಮಂಗಳವಾರ ಹೇಳಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಅನ್ನು ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂಬ ವರದಿಗಳ ನಡುವೆ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ ವಿ ಗೋವಿಂದನ್ ಅವರು ಈ ಹೇಳಿಕೆ ನೀಡಿದ್ದಾರೆ.
ಕೇರಳವು ಈಗ ಭಯೋತ್ಪಾದನೆ ಮತ್ತು ಸಮಾಜಘಾತುಕ ಶಕ್ತಿಗಳ “ಹಾಟ್‌ಸ್ಪಾಟ್” ಆಗಿದೆ. ಈ ದಕ್ಷಿಣ ರಾಜ್ಯದ ಜನರ ಜೀವನ ಸುರಕ್ಷಿತವಾಗಿಲ್ಲ ಎಂದು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಆರೋಪಿಸಿದ ಮಾರನೇ ದಿನವೇ ಸಿಪಿಐ(ಎಂ) ಕೋಮುವಾದಿ ಶಕ್ತಿಗಳನ್ನು ನಿಷೇಧಿಸುವುದಾದರೆ ಮೊದಲು ಆರ್ ಎಸ್ ಎಸ್ ನಿಷೇಧಿಸಿ ಎಂದು ಹೇಳುವ ಮೂಲಕ ತಿರುಗೇಟು ನೀಡಿದೆ.
“ಆರ್ ಎಸ್ಎಸ್ ಕೋಮುವಾದಿ ಚಟುವಟಿಕೆಗಳನ್ನು ನಡೆಸುವ ಪ್ರಮುಖ ಸಂಘಟನೆಯಾಗಿದೆ. ಅದನ್ನು ನಿಷೇಧಿಸಲಾಗುತ್ತದೆಯೇ? ಉಗ್ರಗಾಮಿ ಸಂಘಟನೆಯನ್ನು ನಿಷೇಧಿಸುವುದರಿಂದ ಸಮಸ್ಯೆಗೆ ಪರಿಹಾರವಿಲ್ಲ. ಆರ್‌ಎಸ್‌ಎಸ್ ಅನ್ನು ಈ ಹಿಂದೆ ನಿಷೇಧಿಸಲಾಗಿದೆ. ಸಿಪಿಐ ಅನ್ನು ನಿಷೇಧಿಸಲಾಗಿದೆ, ”ಸಂಘಟನೆಯನ್ನು ನಿಷೇಧಿಸುವುದರಿಂದ ಅದು ಅಥವಾ ಅದರ ಸಿದ್ಧಾಂತ ಕೊನೆಗೊಳ್ಳುವುದಿಲ್ಲ. ಅವರು ಹೊಸ ಹೆಸರು ಅಥವಾ ಗುರುತಿನೊಂದಿಗೆ ಮತ್ತೆ ಹಿಂತಿರುಗುತ್ತಾರೆ. ಇಂತಹ ಗುಂಪುಗಳ ವಿರುದ್ಧ ಜಾಗೃತಿ ಮೂಡಿಸಿ ಅಕ್ರಮ ಎಸಗಿದಾಗ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’’ ಎಂದು ಎಂ ವಿ ಗೋವಿಂದನ್ ಅವರು ಹೇಳಿದ್ದಾರೆ. (kpc)
