

ಸಿದ್ದಾಪುರ: ಜಿಲ್ಲೆಯ ಶಿರಸಿ ಲೋಕೋಪಯೋಗಿ ವಿಭಾಗದ ಪ್ರಕೃತಿ ವಿಕೋಪ ಮತ್ತು ವಿವಿಧ ಲೆಕ್ಕಶಿರ್ಷಿಕೆಯಲ್ಲಿ ಬಾಕಿ ಇರುವ 17.86 ಕೋಟಿ ಹಣ ಬಿಡುಗಡೆಗೊಳಿಸಿ ಗುತ್ತಿಗೆದಾರರ ಬೇಡಿಕೆ ಇಡೇರಿಸುವಂತೆ ಆಗ್ರಹಿಸಿ ಸಿದ್ದಾಪುರ ತಾಲೂಕಾ ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ಬುಧವಾರ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ ಪ್ರಕೃತಿ ವಿಕೋಪದಿಂದಾದ ತುರ್ತು ಕಾಮಗಾರಿಗಳನ್ನು ಗುತ್ತಿಗೆದಾರರು ಮುತುವರ್ಜಿ ವಹಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಿದ್ದಾರೆ. ಶಿರಸಿ ವಿಭಾಗದಲ್ಲಿ ಈ ಎಲ್ಲಾ ಕಾಮಗಾರಿಗಳ ಬಾಕಿ 17.86 ಕೋಟಿ ಹಾಗೂ 2020-21ನೇ ಸಾಲಿನ ಪ್ರಕೃತಿ ವಿಕೋಪ ಕಾಮಗಾರಿಗಳ ಮೊತ್ತ 10 ಕೋಟಿ ಬಾಕಿ ಉಳಿದಿದ್ದು ಕೂಡಲೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.
ಸರ್ಕಾರದ ಆದೇಶದ ಪ್ರಕಾರ ವರ್ಕ್ಸ್ ಕಾಂಟ್ರಾಕ್ಟಗೆ 12% ಜಿ.ಎಸ್.ಟಿ ನಿಗದಿಪಡಿಸಲಾಗಿತ್ತು. ಈಗಿನ ಜಿ.ಎಸ್.ಟಿ ಕೌನ್ಸಿಲ್ ಪ್ರಕಾರ 18% ವಿಧಿಸಲು ಸೂಚಿಸಲಾಗಿದೆ. ಇದರಿಂದ ಗುತ್ತಿಗೆದಾರರಿಗೆ ತುಂಬಾ ಹೊರೆಯಾಗುತ್ತಿದೆ. ಈ ಕುರಿತು ಗಮನ ಹರಿಸಿ ಗುತ್ತಿಗೆದಾರರ ಬೇಡಿಕೆ ಇಡೇರಿಸುವಂತೆ ಆಗ್ರಹಿಸಿದರು.
ಈ ವೇಳೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸತೀಶ ಗೌಡರ್, ಕಾರ್ಯದರ್ಶಿ ಎ.ಜಿ.ನಾಯ್ಕ, ಗುತ್ತಿಗೆದಾರರಾದ ಎನ್.ಕೆ.ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

