

ಸಿದ್ದಾಪುರ. ತಾಲೂಕಿನ ಭವನಗಿರಿ ಸಮೀಪದ ಹೊಸಳ್ಳಿಯ ಶ್ರೀರಾಮ ದೇವಸ್ಥಾನದಲ್ಲಿ ವರ್ಷದಂತೆ ಈ ವರ್ಷವೂ ಶರನ್ನವರಾತ್ರಿಯ ಪ್ರಯುಕ್ತ ಸಾಮೂಹಿಕ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಊರಿನ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು 10 ದಿನಗಳ ಸಾಮೂಹಿಕ ಭಜನೆಯಲ್ಲಿ ಪಾಲ್ಗೊಂಡರು. ನವರಾತ್ರಿಯ ಮೊದಲ ದಿನದಿಂದ ಪ್ರಾರಂಭಗೊಂಡು ದಶಮಿಯವರೆಗೆ ಪ್ರತಿದಿನ ಸಂಜೆ ಭಜನಾ ಕಾರ್ಯಕ್ರಮ ನಡೆಯಿತು . ವಿಜಯದಶಮಿ ಯಂದು ಶಾರದಾ ಪೂಜೆ ಮತ್ತು ಪ್ರಸಾದ ವಿತರಣೆಯೊಂದಿಗೆ ಹತ್ತು ದಿನಗಳ ಕಾಲ ನಡೆದ ಸಾಮೂಹಿಕ ಭಜನೆ ನಡೆಯಿತು.
ಭುವನೇಶ್ವರಿಯ ಸನ್ನಿಧಿಯಲ್ಲಿ ಸಂಪನ್ನಗೊಂಡ ಸಂಗೀತ ನವರಾತ್ರಿ.
ಸಿದ್ದಾಪುರ . ತಾಲೂಕಿನ ಭುವನಗಿರಿಯ ಭುವನೇಶ್ವರಿ ದೇವಿಯ ಸನ್ನಿಧಿಯಲ್ಲಿ ಶರನ್ ನವರಾತ್ರಿ ಪೂಜಾ ಕಾರ್ಯಕ್ರಮಗಳು ಪ್ರತಿದಿನದ ಸಂಗೀತ ಕಾರ್ಯಕ್ರಮದೊಂದಿಗೆ ಮೇಳೈಸಿ ಭಕ್ತರಿಗೆ ವಿಶೇಷ ಸಂತೋಷ ನೀಡಿದವು. ಮಹಾನವಮಿಯಂದು ಏರ್ಪಡಿಸಲಾದ ಪಂಡಿತ್ ಪ್ರಕಾಶ್ ಹೆಗಡೆ ಕಲ್ಲಾರೆಮನೆಯವರ ಕೊಳಲು ವಾದನ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ರಾಗ ಮಾರ್ವಾವನ್ನು ವಿಳಂಬಿತ ರೂಪಕ ಮತ್ತು ದೃತ್ ಏಕತಾಳದಲ್ಲಿ ಪ್ರಸ್ತುತಪಡಿಸಿದರು.ನಂತರ ಹಂಸಧ್ವನಿ ರಾಗವನ್ನು ತೀನ್ ತಾಲ್ ದಲ್ಲಿ ನುಡಿಸಿದರು. ಮುಂದುವರಿದು ದೇಸ್ ರಾಗದಲ್ಲಿ ತೀನ್ ತಾಲ್ ಮತ್ತು ಅತಿದೃತ್ ನಲ್ಲಿ ನಿರೂಪಿಸಿ ವೈಷ್ಣವ ಜನತೋ, ಶ್ರೀರಾಮ ಚಂದಿರನೇ, ಜೈ ಜಗದೀಶ ಹರೇ ಭಜನ್ ಗಳನ್ನು ಮನಮುಟ್ಟುವಂತೆ ಪ್ರಸ್ತುತಪಡಿಸಿದರು. ಇವರಿಗೆ ಸಾತ್ ನೀಡಿದ ತಬಲವಾದಕ ಯೋಗೀಶ್ ಭಟ್ ಸಿರಿವಂತೆ ತಬಲ ಮಾಂತ್ರಿಕರಂತೆ ಕಂಡರು. ದೀಪಕ್ ಹೆಗಡೆ ಉಪ್ಪಿನ ಪಟ್ಟಣ ಸಹ ಕೊಳಲು ವಾದಕರಾಗಿ ಸಹಕರಿಸಿದರು.
ನವರಾತ್ರಿಯ ಪ್ರಾರಂಭದ ದಿನದಂದು ಸ್ವರಗಂಗಾ ತಂಡದ ಭಕ್ತಿ ಸಂಗೀತ, ಎರಡನೇ ದಿನ ಸುನೀತಾ ಭಟ್ ಶಿರಸಿಯವರ ಗಾಯನ, ಮೂರನೇ ದಿನ ಭುವನೇಶ್ವರಿ ತಾಳಮದ್ದಳೆ ಕೂಟದಿಂದ ನಡೆಸಲ್ಪಟ್ಟ ತಾಳಮದ್ದಳೆ, ನಾಲ್ಕನೆಯ ದಿನ ಮೂಡಿ ಬಂದ ವಸುಧಾ ಹೆಗಡೆ ವಡಗೆರೆ ಅವರ ಗಾಯನ ಪಂಚಮಿಯಂದು ಪ್ರಸ್ತುತಪಡಿಸಲಾದ ಚೇತನಾ ಹೆಗಡೆ ಮತ್ತು ಸಂಗಡಿಗರ ಶಂಕರ ಸ್ತೋತ್ರ ಮತ್ತು ಭಜನೆಗಳು, ಆರನೆಯ ರಾತ್ರಿ ಪ್ರಸ್ತುತಗೊಂಡ ವಿದುಷಿ ವಾಣಿ ರಮೇಶ್ ಹೆಗಡೆ ಯಲ್ಲಾಪುರ ಹಾಗೂ ಕುಮಾರಿ ವಿಭಾ ಹೆಗಡೆಯವರ ಗಾಯನ ಏಳನೆಯ ರಾತ್ರಿ ಮೂಡಿಬಂದ ತೇಜಸ್ವಿನಿ ವರ್ಣೇಕರ್ ಕಲ್ಕತ್ತಾ ಇವರ ಗಾಯನ, ಎಂಟನೆಯ ರಾತ್ರಿ ಮೊಳಗಿದ ಪ್ರಕಾಶ್ ಹೆಗಡೆ ಯಡಳ್ಳಿ ಮತ್ತು ಮಧುಶ್ರೀ ಶೆಟ್ಟಿ ಸಿರಸಿ ಅವರ ಸಂಗೀತ ನವರಾತ್ರಿಯನ್ನು ಭಕ್ತಿ ಸಂಗೀತಮಯವಾಗಿಸುವಲ್ಲಿ ಯಶಸ್ವಿಯಾದವು. ಕಲಾವಿದರಿಗೆ ಸಾತ್ ನೀಡಿದ ತಬಲ ಮತ್ತು ಹಾರ್ಮೋನಿಯಂ ಕಲಾವಿದರಾದ ಪಂ.ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ ,ಸುಧಾಕರ್ ನಾಯ್ಕ ಶಿರ್ಸಿ, ಮಂಜುನಾಥ್ ಹೆಗಡೆ ಮೋಟಿನಸರ, ಪ್ರಕಾಶ್ ಹೆಗಡೆ ಯಡಳ್ಳಿ ಮುಂತಾದವರ ಕೊಡುಗೆ ಸಂಗೀತರಾತ್ರಿಯ ಯಶಸ್ಸಿಗೆ ಕಾರಣವಾಯಿತು. ಕಾರ್ಯಕ್ರಮವನ್ನು ಭುವನೇಶ್ವರಿ ದೇವಾಲಯದ ಆಡಳಿತ ಸಮಿತಿ ಮತ್ತು ಸುಷಿರ ಸಂಗೀತ ಪರಿವಾರ ಕಲ್ಲರೆಮನೆ ಸಂಯುಕ್ತವಾಗಿ ಸಂಘಟಿಸಿದ್ದವು.



