
ಶಿರಸಿಯಲ್ಲಿ ಕಾಣಿಸಿಕೊಳ್ಳುತ್ತಿದೆ ಮಾರಣಾಂತಿಕ ಕ್ಯಾನ್ಸರ್ ರೋಗ : ಸಮೀಕ್ಷೆಗಾಗಿ ಗ್ರಾಮಸ್ಥರ ಆಗ್ರಹ
ಕ್ಯಾನ್ಸರ್ ಎಂಬ ಮಹಾಮಾರಿಯಿಂದ ಶಿರಸಿ ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿಯ ಹಲವು ಹಳ್ಳಿಗಳಲ್ಲಿ ಈಗ ಜನರಲ್ಲಿ ನೋವು ಮುಗಿಲು ಮುಟ್ಟಿದೆ.

ಶಿರಸಿ: ಉತ್ತರಕನ್ನಡ ಜಿಲ್ಲೆಯಲ್ಲಿನ ಕೈಗಾ ಅಣುವಿದ್ಯುತ್ ಸ್ಥಾವರದಿಂದ ರೇಡಿಯೆಷನ್ ಪರಿಣಾಮವಾಗಿ ಆ ಭಾಗದ ಕಳಚೆ, ಮಲವಳ್ಳಿ, ಬಾರೆ, ಬಾಸಲ್, ಭಾಗಿನಕಟ್ಟಾ, ಬೀಗಾರ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳ ಜನತೆ ಕ್ಯಾನ್ಸರ್ ನಂತಹ ಮಾರಣಾಂತಿಕ ಖಾಯಿಲೆಯಿಂದ ಮಕ್ಕಳು ಸಹ ಮೃತಪಡುತ್ತಿರುವುದು ವಿಶೇಷವೇನಲ್ಲ. ಆದರೆ, ಇತ್ತೀಚಿಗೆ ಶಿರಸಿಯಲ್ಲಿ ಯಾವುದೇ ರೆಡಿಯೇಷನ್ ಅಥವಾ ವಿಶೇಷ ಯೋಜನೆ ಇರದ ಭಾಗದಲ್ಲೂ ಕ್ಯಾನ್ಸರ್ ನಂತಹ ಮಾರಕ ರೋಗ ಕಾಣಿಸಿಕೊಳ್ಳುತ್ತಿದ್ದು, ಭಾರಿ ಅಪಾಯಕಾರಿಯಾಗಿ ಪರಿಣಮಿಸಿದೆ.
ಕ್ಯಾನ್ಸರ್ ರೋಗ ಹರಡುತ್ತಿರುವ ಬಗ್ಗೆ ಸ್ಥಳೀಯರಾದ ಕೆ ಆರ್ ಹೆಗಡೆ ಅಮ್ಮಚ್ಚಿ ಅವರು ಮಾತನಾಡಿದರು
ಶಿರಸಿ ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿಯ ಹಲವು ಹಳ್ಳಿಗಳಲ್ಲಿ ಈಗ ನೋವು ಮುಗಿಲುಮುಟ್ಟಿದೆ. ಎತ್ತೆತ್ತರದ ಗುಡ್ಡಗಳ ಮಧ್ಯೆ ನಾಲ್ಕಾರು ಮನೆಗಳ ಪುಟ್ಟ ಹಳ್ಳಿಗಳಾದರೂ ಈ ನೋವು ಎಲ್ಲೆಡೆ ಬಾಧಿಸಿದೆ. ಇದಕ್ಕೆ ಮುಖ್ಯ ಕಾರಣ ಕ್ಯಾನ್ಸರ್ ಎಂಬ ಮಹಾಮಾರಿ.
ಹೌದು, ಇಲ್ಲಿಯ ತಟಗುಣಿ, ತಡಗುಣಿ ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಜಾಸ್ತಿಯಾಗಿದೆ. ಆಗುತ್ತಲೇ ಇದೆ. ಕಳೆದೊಂದು ದಶಕದಲ್ಲಿ ಸಾವಿನ ಮನೆಯ ಕದ ತಟ್ಟಿದವರು ಅನೇಕರಾದರೆ, ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವವರು ಇನ್ನೂ ಅನೇಕ. ಸಣ್ಣ ಹಿಡುವಳಿದಾರರಾಗಿ ಬರುವ ಪುಟ್ಟ ಆದಾಯವನ್ನೂ ಮಹಾನಗರಗಳ ದೊಡ್ಡಾಸ್ಪತ್ರೆಗೆ ಸುರಿಯುತ್ತಿದ್ದಾರೆ.
25ಕ್ಕೂ ಅಧಿಕ ಕ್ಯಾನ್ಸರ್ ರೋಗಿಗಳಿದ್ದಾರೆ: ಒಂದೆಡೆ ಆತಂಕ, ಇನ್ನೊಂದೆಡೆ ಭರಿಸಲಾಗದ ಆಸ್ಪತ್ರೆ ಬಿಲ್ ಇಲ್ಲಿಯ ಕೃಷಿಕರನ್ನು ಹಸಿ ಬಟ್ಟೆ ಹಿಂಡಿದಂತೆ ಹಿಂಡುತ್ತಿವೆ. ನೆಗ್ಗು ಪಂಚಾಯಿತಿ ವ್ಯಾಪ್ತಿಯ ಈ ಭಾಗದ ಇಪ್ಪತ್ತಕ್ಕೂ ಅಧಿಕ ಹಳ್ಳಿಗಳಲ್ಲಿ ಸುಮಾರು 25ಕ್ಕೂ ಅಧಿಕ ಕ್ಯಾನ್ಸರ್ ರೋಗಿಗಳಿದ್ದಾರೆ. ಆದರೆ, ಕಾರಣ ಮಾತ್ರ ನಿಗೂಢವಾಗಿದೆ.
ಇಲ್ಲಿನ ಗ್ರಾಮಗಳಲ್ಲಿ ತಂಬಾಕು ತಿನ್ನದವರಿಗೂ ಕ್ಯಾನ್ಸರ್ ಆವರಿಸಿದೆ. ಬ್ರೆಸ್ಟ್ ಕ್ಯಾನ್ಸರ್, ಬೋನ್ ಕ್ಯಾನ್ಸರ್ ಇಂತಹ ತಂಬಾಕು ಚಟಕ್ಕೆ ಸಂಬಂಧವಿಲ್ಲದ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿವೆ. ನೆಗ್ಗು ಪಂಚಾಯಿತಿ ಕೈಗಾದಿಂದ ನೇರವಾಗಿ 50 ಕಿ.ಮೀ ವ್ಯಾಪ್ತಿಯಲ್ಲಿ ಸುರಕ್ಷಿತ ಸ್ಥಳದಲ್ಲಿದೆ. ಅಣು ವಿಕಿರಣಗಳು ಇಲ್ಲಿಯವರೆಗೂ ತಲುಪುತ್ತಿವೆಯೆ ? ಅದೇ ಕಾರಣದಿಂದಾಗಿಯೇ ಮಹಾಮಾರಿ ರೋಗ ಹೆಚ್ಚುತ್ತಿದೆಯೇ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡತೊಡಗಿದೆ.
ಕಲುಷಿತ ಗಾಳಿಯ ವಾತಾವರಣ ಇಲ್ಲ: ಅಲ್ಲದೇ, ತಾಲೂಕಿನ ಗ್ರಾಮೀಣ ಪ್ರದೇಶ ಉತ್ತಮ ವಾತಾವರಣ ಹೊಂದಿದೆ. ಕಲುಷಿತ ಗಾಳಿಯ ವಾತಾವರಣ ಇಲ್ಲ. ಇಲ್ಲಿಯ ಬದುಕು ನೈಸರ್ಗಿಕವಾಗಿಯೇ ಆರೋಗ್ಯಯುತ ಜೀವನ ಆಗಬೇಕಿತ್ತು. ಆದರೆ, ಈ ಭಾಗದಲ್ಲಿ ಏಕೆ ಈ ರೀತಿ ಕ್ಯಾನ್ಸರ್ ಹಬ್ಬುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಒಟ್ಟಾರೆಯಾಗಿ ನೆಗ್ಗು ಗ್ರಾಪಂ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕ್ಯಾನ್ಸರ್ ಕಾಣಿಸಿಕೊಂಡಿದೆ. ಇಬ್ಬರು ಮೃತಪಟ್ಟಿದ್ದಾರೆ. ಕೆಲವರಲ್ಲಿ ಸಂಶಯಾತ್ಮವಾಗಿ ಕೆಲವರಲ್ಲಿ ನಿಗೂಢವಾಗಿಯೂ ಇದೆ. ಆರ್ಥಿಕವಾಗಿ ಹಿಂದುಳಿದ ಈ ಗ್ರಾಮದಲ್ಲಿನ ಜನರ ಸ್ಥಿತಿ ಚಿಂತಾಜನಕವಾಗಿದೆ. ಈ ಭಾಗದಲ್ಲಿ ಏಕೆ ಈ ರೀತಿ ಆಗುತ್ತಿದೆ ಎನ್ನುವ ಸಮೀಕ್ಷೆಯನ್ನು ಆರೋಗ್ಯ ಇಲಾಖೆ ಮಾಡಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.(ಈಟಿಬಿಕೆ)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
