



ರಾಜಕೀಯದಲ್ಲಿ ಗುಂಪು ಕಟ್ಟುವುದು,ಗುಂಪುಗಾರಿಕೆ ಮಾಡುವುದು ಸಾಮಾನ್ಯ ವಿಚಾರ. ಆದರೆ ಈ ಗುಂಪುಗಾರಿಕೆ ರಾಜಕೀಯ ಪಕ್ಷ, ನಾಯಕರಿಗೆ ಮಾರಕವಾಗುವುದು ಲಾಗಾಯ್ತಿನ ವಾಸ್ತವ. ದೇಶ,ರಾಜ್ಯಗಳಲ್ಲಿ ನಾನಾ ಪಕ್ಷಗಳ ಇಂಥ ಬಣ,ಗುಂಪುಗಳ ಹಲವು ಸುದ್ದಿಗಳಿವೆ. ಆದರೆ ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ಗುಂಪುಗಾರಿಕೆ ಇಲ್ಲಿಯ ಬಹುಸಂಖ್ಯಾತರಿಗೇ ಮಾರಕವಾಗುತ್ತಿರುವುದಕ್ಕೆ ಅನೇಕ ಉದಾಹರಣೆಗಳಿವೆ.

ಜನತಾ ದಳ ವಿಭಾಗವಾಗಲು ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ಬಣ ರಾಜಕೀಯ ಕಾರಣ. ಅದಕ್ಕೂ ಮೊದಲು ದೇವ ರಾಜ್ ಅರಸು, ಬಂಗಾರಪ್ಪ ಸೇರಿದ ಕೆಲವು ನಾಯಕರ ಬಣ ರಾಜಕೀಯದಿಂದ ಕಾಂಗ್ರೆಸ್ ಅನೇಕ ಬಾರಿ ಸೋತಿದೆ.

ಹಿಂದೆ ಜನತಾದಳದಲ್ಲಿದ್ದು ನಂತರ ಕಾಂಗ್ರೆಸ್ ಗೆ ಬಂದಿದ್ದ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಮೂಲಕಾಂಗ್ರೆಸ್ ಗೆ ಪರ್ಯಾಯವಾಗಿ ದೇಶಪಾಂಡೆ ಬಣ ರಚಿಸಿಕೊಂಡು ಕಾಂಗ್ರೆಸ್ ಗೆಲ್ಲಿಸಿದ್ದಕ್ಕಿಂತ ಸೋಲಿಸಿದ್ದೇ ಹೆಚ್ಚು. ಇದೇ ದಾರಿಯಲ್ಲಿ ಸಾಗಿದ್ದ ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವ ಕೂಡಾ ತಮ್ಮ ಬಣ ಬೆಳೆಸಲು ಶ್ರಮಿಸಿ ಬಿ.ಜೆ.ಪಿ.ಗೆ ಸಹಕರಿಸಿದ್ದೇ ಹೆಚ್ಚು. ಇಂಥ ಬಣ.ಗುಂಪುಗಾರಿಕೆಯ ರಾಜಕಾರಣದಿಂದ ಉತ್ತರ ಕನ್ನಡ ಜಿಲ್ಲೆಯ ಅನೇಕ ಉತ್ತಮ ನಾಯಕರಿಗೆ ಅನ್ಯಾಯವಾಗಿದೆ. ಅವರಲ್ಲಿ ದೇವರಾಯ ನಾಯ್ಕ, ಪ್ರಭಾಕರ ರಾಣೆ, ಪ್ರಮೋದ್ ಹೆಗಡೆ, ಭೀಮಣ್ಣ ನಾಯ್ಕ ಪ್ರಮುಖರು!
ಇಂಥ ಇತಿಹಾಸದ ರಾಜಕೀಯ ಚರಿತ್ರೆಯ ಉತ್ತರ ಕನ್ನಡದಲ್ಲಿ ಈಗ ಬಿ.ಜೆ,ಪಿ,ಯ ಬಣ ರಾಜಕೀಯ ವಿಜೃಂಬಿಸುತ್ತಿದೆ. ೨೫ ವರ್ಷಗಳಿಂದ ಜನಪ್ರತಿನಿಧಿಗಳಾಗುತ್ತಿರುವ ಹಿರಿಯ ರಾಜಕಾರಣಿಗಳಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಅನಂತಕುಮಾರ ಹೆಗಡೆಗಳ ಬಣ ರಾಜಕೀಯ ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತರನ್ನು ಮೋಸಗೊಳಿಸುವ ವೈದಿಕ ರಾಜಕೀಯದ ತಂತ್ರ ಎನ್ನುವ ವದಂತಿಗಳಿವೆ. ಇದರ ಮಧ್ಯೆ ಹಿಂದುತ್ವ,ರಾಷ್ಟ್ರೀಯತೆ ಸೋಗಿನಲ್ಲಿ ರಾಜಕೀಯ ಮಾಡಿರುವ ಬಿ.ಜೆ.ಪಿ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬ್ರಾಹ್ಮಣತ್ವ ಪ್ರತಿಪಾದಿಸುತ್ತಿರುವುದಕ್ಕೆ ನೂರಾರು ಜ್ವಲಂತ ಸಾಕ್ಷಿಗಳಿವೆ. ಇದರ ನಡುವೆ ಬಿ.ಜೆ.ಪಿ. ಯ ಹಿರಿಯ ನಾಯಕರು ಉಪಾಯದಿಂದ ಹಿಂದೆ ಸರಿಸಿರುವ ನಾಯಕರಲ್ಲಿ ಹಿಂದುಳಿದ ವರ್ಗದವರೇ ಹೆಚ್ಚಿರುವುದು ದುರಂತ.
ಈಗ ಉತ್ತರ ಕನ್ನಡ ಜಿಲ್ಲೆಯ ವೈದಿಕ ರಾಜಕೀಯಕ್ಕೆ ಬಲಿಯಾಗುತ್ತಿರುವ ಪ್ರಮುಖ ಹೆಸರು ಕೆ.ಜಿ. ನಾಯ್ಕ ಹಣಜಿಬೈಲ್. ಬಿ.ಜೆ.ಪಿ. ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ಕೆ.ಜಿ.ನಾ ವಿರುದ್ಧ ಆಂತರಿಕ,ಬಹಿರಂಗ ಸಂಘರ್ಷಕ್ಕಿಳಿದಿರುವ ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಸಂಘಬಲದಿಂದ ವಿರೋಧಿಗಳನ್ನು ಹಣಿಯುತ್ತ ಕೆ.ಜಿ.ನಾಯ್ಕರನ್ನೇ ಗುರಿಯಾಗಿಸಿದ್ದಾರೆ.

ಕೇ.ಜಿ. ನಾಯ್ಕರ ಆಪ್ತರು, ಶಿಷ್ಯರನ್ನೇ ಅವರ ವಿರುದ್ಧ ಎತ್ತಿಕಟ್ಟುತ್ತಿರುವ ಕಾಗೇರಿ ಸರ್ಕಾರಿ ನೇಮಕಾತಿಗಳಲ್ಲಿ,ಪಕ್ಷದ ಹುದ್ದೆಗಳಲ್ಲಿ ಕೆಲವರನ್ನು ಪ್ರತಿಷ್ಠಾಪಿಸಿ ಕೆ.ಜಿ.ನಾಯ್ಕ ಬಣಕ್ಕೆ ಏಟುಕೊಡತೊಡಗಿದ್ದಾರೆ. ಇದರ ಮುಂದುವರಿದ ಭಾಗವಾಗಿ ಸಿದ್ಧಾಪುರದಲ್ಲಿ ಬಿ.ಜೆ.ಪಿ. ಮಂಡಳದ ಅಧ್ಯಕ್ಷರ ಬದಲಾವಣೆಯಾಗಿದೆ. ಕೆ.ಜಿ.ನಾಯ್ಕರ ನಂತರ ಕಾಗೇರಿಯವರ ಗುರಿಯಾದ ಜಿ.ಪಂ. ಮಾಜಿ ಸದಸ್ಯ ನಾಗರಾಜ್ ನಾಯ್ಕ ತಮ್ಮ ಹುದ್ದೆ ಕಳೆದುಕೊಳ್ಳುವುದರೊಂದಿಗೆ ಕಾಗೇರಿ ಬಣದ ಪ್ರಮುಖ ಮಾರುತಿ ನಾಯ್ಕ ಈ ಹುದ್ದೆ ಅಲಂಕರಿಸಿದ್ದಾರೆ. ಹೀಗೆ ಮನೆಯ ಕಿಚ್ಚು ಮನೆಯ ಸುಟ್ಟಿತಲ್ಲದೆ ..ಎನ್ನುವಂತೆ ಬಿ.ಜೆ.ಪಿ. ಒಳಬೆಂಕಿ ಬಿ.ಜೆ.ಪಿ.ಗೆ ಮಾರಕವಾಗುತ್ತಿದೆ. ಈ ಅವಕಾಶವನ್ನು ಬಳಸಿಕೊಳ್ಳಬೇಕಾಗಿದ್ದ ಕಾಂಗ್ರೆಸ್ ನಲ್ಲಿ ಯುದ್ದೋತ್ಸಾಹ ಕಾಣುತ್ತಿಲ್ಲ. ಆಪ್, ಜೆ.ಡಿ.ಎಸ್. ಇತರ ಪಕ್ಷಗಳು ಇಲ್ಲಿ ಆಟಕ್ಕಿದ್ದರೂ ಲೆಕ್ಕಕ್ಕಿಲ್ಲ. ಕಾಗೇರಿ ಎನ್ನುವ ಸೋಲಿಲ್ಲದ ಸರದಾರನನ್ನು ಸೋಲಿಸುವ ವಿಚಾರದಲ್ಲಿ ಮಾತ್ರ ಸಾರ್ವತ್ರಿಕ ಏಕತೆ ಮೂಡುತ್ತಿರುವುದು ೨೫ ವರ್ಷಗಳ ಬಿ.ಜೆ.ಪಿ. ಆಡಳಿತದ ಸಾಧನೆಯ ಫಲಶೃತಿ!

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
