ಸಾಹಸ ಮೆರೆದು ತಂದೆಯ ಜೀವ ರಕ್ಷಿಸಿದ ಉತ್ತರ ಕನ್ನಡ ಜಿಲ್ಲೆಯ ಬಾಲಕಿ, ಇದೀಗ ರಾಜ್ಯ ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ.
ಕಾರವಾರ: ಸಾಹಸ ಮೆರೆದು ತಂದೆಯ ಜೀವ ರಕ್ಷಿಸಿದ ಉತ್ತರ ಕನ್ನಡ ಜಿಲ್ಲೆಯ ಬಾಲಕಿ, ಇದೀಗ ರಾಜ್ಯ ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರಿನ 11 ವರ್ಷದ ಬಾಲಕಿ ಕೌಸಲ್ಯ ವೆಂಕಟರಮಣ ಹೆಗಡೆ ಪ್ರಶಸ್ತಿಗೆ ಆಯ್ಕೆಯಾದ ಬಾಲಕಿಯಾಗಿದ್ದಾಳೆ.
2021ರ ಮಾರ್ಚ್ 15ರಂದು ಮಾವಿನಗುಂಡಿ ಸಮೀಪದ ಹಳ್ಳಿಯೊಂದಕ್ಕೆ ಅಡುಗೆ ಮಾಡಲು ಹೊರಟಿದ್ದ ತಂದೆ ವೆಂಕಟರಮಣ ಹೆಗಡೆಯವರ ಜೊತೆ ಹನ್ನೊಂದು ವರ್ಷದ ಕೌಸಲ್ಯ ಹಾಗೂ ಅವಳ ತಮ್ಮ ಪ್ರಯಾಣಿಸುತ್ತಿದ್ದರು.
ಈ ವೇಳೆ ದೆ ವೆಂಕಟರಮಣ ಹೆಗಡೆ ಚಲಾಯಿಸುತ್ತಿದ್ದ ಜೀಪು ಆಕಸ್ಮಿಕವಾಗಿ ಪಲ್ಟಿ ಹೊಡೆದಿತ್ತು. ಪರಿಣಾಮ ಜೀಪಿನ ಅಡಿಯಲ್ಲಿ ವೆಂಕಟರಮಣ ಹೆಗಡೆ ಸಿಲುಕಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದರು. ಈ ಸಂದರ್ಭ ಕೌಸಲ್ಯ ಹಾಗೂ ಆಕೆಯ ಐದು ವರ್ಷದ ತಮ್ಮ ತಂದೆಯನ್ನು ಬದುಕಿಸಲು ಹರಸಾಹ ಪಟ್ಟಿದ್ದರು. ಪ್ರಯತ್ನ ಸಫಲವಾಗದಿದ್ದಾಗ ಸಮಯ ಪ್ರಜ್ಞೆ ತೋರಿದ ಕೌಸಲ್ಯ, ಘಟನೆ ನಡೆದ ಸ್ಥಳದಿಂದ ಸುಮಾರು ಎರಡು ಕಿಲೋ ಮೀಟರ್ ದೂರ ಓಡಿ ಹೋಗಿ ಅಲ್ಲಿಂದ ಜನರನ್ನು ಕರೆತಂದು ಜೀಪನ್ನು ಎತ್ತಿಸಿ ತಂದೆಯ ಜೀವವನ್ನು ಉಳಿಸಿದ್ದಳು.
ಕೌಸಲ್ಯ ವೆಂಕಟರಮಣ ಹೆಗಡೆ ಕಾನಸೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದು, ತನ್ನ ಸಣ್ಣ ವಯಸ್ಸಿನಲ್ಲಿಯೇ ಈ ರೀತಿಯ ಸಮಯಪ್ರಜ್ಞೆಯನ್ನು ತೋರಿ ತಂದೆಯನ್ನು ಬದುಕಿಸಿದ ಈಕೆಯ ಸಾಹಸ ಜನ ಮೆಚ್ಚುಗೆಗೆ ಪಾತ್ರವಾಗಿತ್ತು.
ಇದೀಗ ರಾಜ್ಯ ಸರ್ಕಾರವೂ ಈಕೆಯ ಸಾಧನೆಯನ್ನು ಗುರುತಿಸಿದ್ದು, ನವೆಂಬರ್ 14ರಂದು ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿಯನ್ನ ಪ್ರದಾನಿಸಿ ಗೌರವಿಸಲಿದೆ.
ಮಗಳ ಈ ಸಮಯದ ಪ್ರಜ್ಞೆ ಕುರಿತು ಮಾತನಾಡಿರುವ ವೆಂಕಟರಮಣ ಹೆಗಡೆಯವರು, ನನ್ನ ಮಗಳ ಬಗ್ಗೆ ನನಗೆ ಹೆಮ್ಮೆ ಇದೆ. ಅಂದು ನನ್ನ ಪ್ರಾಣ ಉಳಿಸಿದಳು. ಇದು ನನಗೆ ಮರುಜನ್ಮವಾಗಿದೆ ಎಂದಿದ್ದಾರೆ. (kpc)