

ಸಿದ್ದಾಪುರ
ನಾಟಕಗಳು ಸಮಾಜದ ನೈಜ ಸ್ಥಿತಿಯನ್ನು ತಿಳಿಸುವುದರ ಜತೆಗೆ ಉತ್ತಮ ಸಂದೇಶವನ್ನು ನೀಡುತ್ತವೆ. ನಮ್ಮ ಭಾಷೆ, ಸಂಸ್ಕೃತಿಯ ಮಹತ್ವವನ್ನು ನಾಟಕಗಳು ಸಾದರಪಡಿಸುತ್ತದೆ ಎಂದು ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯಲ್ಲಿ ರಂಗ ಸೌಗಂಧ ಸಿದ್ದಾಪುರ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಕಾರದಲ್ಲಿ ಆಯೋಜಿಸಿದ್ದ ಧರ್ಮಸಾಮ್ರಾಜ್ಯ ಪೌರಾಣಿಕ ನಾಟಕಕ್ಕೆ ಚಾಲನೆ ನೀಡಿ ಅವರು ಸೋಮವಾರ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನರೇಂದ್ರ ನಾಯಕ ಮಾತನಾಡಿ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಉಳಿವಿಗಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಜಿಲ್ಲಾ ಕೇಂದ್ರದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮಗಳು ಘಟ್ಟದ ಕೆಳಗಿನ ತಾಲೂಕಿನ ಸಂಘಟಕರಿಗೆ ಹೆಚ್ಚು ಕಾರ್ಯಕ್ರಮ ನೀಡುತ್ತಿದೆ ಎನ್ನುವ ಆಪಾದನೆ ಇದೆ. ಮುಂದಿನ ದಿನದಲ್ಲಿ ಹಾಗಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ಯಕ್ಷಗಾನ ಕಲಾವಿದ ಪಿ.ವಿ.ಹೆಗಡೆ ಹೊಸಗದ್ದೆ ಅಧ್ಯಕ್ಷತೆವಹಿಸಿದ್ದರು. ಟಿಎಸ್‌ಎಸ್ ಮಾಜಿ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ, ವರ್ತಕ ಅನಂತ ಶಾನಭಾಗ ಉಪಸ್ಥಿತರಿದ್ದರು. ಗಣಪತಿ ಹೆಗಡೆ ಹುಲಿಮನೆ, ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.
ನಂತರ ರಂಗ ಸೌಗಂಧ ತಂಡದಿಂದ ದಿ.ಸೀತಾರಾಮ ಶಾಸ್ತಿç ಹುಲಿಮನೆ ರಚನೆಯ ಗಣಪತಿ ಹೆಗಡೆ ಹುಲಿಮನೆ ನಿರ್ದೇಶನದ ಧರ್ಮಸಾಮ್ರಾಜ್ಯ ನಾಟಕ ಪ್ರದರ್ಶನಗೊಂಡಿತು.
ಸಂಗೀತದಲ್ಲಿ ರಾಜೇಂದ್ರ ಕೊಳಗಿ,ಜಯರಾಮ ಭಟ್ಟ ಹೆಗ್ಗಾರಳ್ಳಿ,ಶುಭಾ ರಮೇಶ, ಭೂಮಿಕಾ ಹೆಗಡೆ ಹೊಸಗದ್ದೆ ಸಹಕರಿಸಿದರು.
ಗಣಪತಿ ಹೆಗಡೆ ಗುಂಜಗೋಡು, ರಾಜಾರಾಮ ಭಟ್ಟ ಹೆಗ್ಗಾರಳ್ಳಿ, ರಾಮ ಅಂಕೋಲೇಕರ,ನಾಗಪತಿ ಭಟ್ಟ ವಡ್ಡಿನಗದ್ದೆ, ಶ್ರೀಪಾದ ಹೆಗಡೆ ಕೋಡನಮನೆ, ಅಜಿತ ಭಟ್ಟ ಹೆಗ್ಗಾರಳ್ಳಿ, ಜನಾರ್ಧನ ಭಟ್ಟ ಗೋಕರ್ಣ, ನಂದನ ನಾಯ್ಕ ಅರಶಿನಗೋಡ,ಪ್ರವೀಣಾ ಹೆಗಡೆ ಗುಂಜಗೋಡು, ಜಯಶ್ರೀ ಹೆಗಡೆ ವಡ್ಡಿನಗದ್ದೆ ವಿವಿಧ ಪಾತ್ರನಿರ್ವಹಿಸಿ ಮೆಚ್ಚುಗೆಗಳಿಸಿದರು.

