ಹುಬ್ಬಳ್ಳಿ: ಎಲ್ಲರ ಗಮನ ಸೆಳೆಯುತ್ತಿರುವ ಆನೆ ಆಕೃತಿಯ ಈ ಮರ, ಈಗ ಸೆಲ್ಫಿ ಕೇಂದ್ರ!
ಹುಬ್ಬಳ್ಳಿಯ ದಾಜಿಬಾನ್ ಪೇಟೆಯಲ್ಲಿರುವ ಮರವೊಂದು ಈಗ ಸ್ಥಳೀಯರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಅಂಥದ್ದೇನಿದೆ ಈ ಮರದಲ್ಲಿ ಅಂತೀರಾ?
ಹುಬ್ಬಳ್ಳಿ: ಹುಬ್ಬಳ್ಳಿಯ ದಾಜಿಬಾನ್ ಪೇಟೆಯಲ್ಲಿರುವ ಮರವೊಂದು ಈಗ ಸ್ಥಳೀಯರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಅಂಥದ್ದೇನಿದೆ ಈ ಮರದಲ್ಲಿ ಅಂತೀರಾ? ಆ ಮರ ಆನೆಯ ಆಕೃತಿಯಲ್ಲಿದ್ದು ಸೆಲ್ಫಿ ಪ್ರಿಯರಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವುದಕ್ಕೆ ಅತ್ಯುತ್ತಮ ತಾಣವಾಗಿ ಮಾರ್ಪಾಡಾಗಿದೆ.
ಆನೆಯ ಸೊಂಡಿಲ ಮಾದರಿಯಲ್ಲಿ ಈ ಮರ ಬೆಳೆದಿದ್ದು, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರ ಜೊತೆಗೆ ಈ ಮರಕ್ಕೆ ಪೂಜೆ ಸಲ್ಲಿಸುವ ಭಕ್ತಾದಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಈ ಮರಕ್ಕೆ ಜನರು ಹಣ್ಣು, ಹೂವುಗಳನ್ನು ಅರ್ಪಿಸಲು ಪ್ರಾರಂಭಿಸಿದ್ದಾರೆ.
ಈ ಬೇವಿನ ಮರ ಹಲವು ವರ್ಷಗಳಿಂದ ಇದೆ. ಆದರೆ ಬೆಳೆಯುತ್ತಾ ಅದು ಆನೆಯ ಸೊಂಡಿಲ ಆಕೃತಿ ಪಡೆದಿದ್ದರಿಂದ ಸ್ಥಳೀಯ ವರ್ತಕರು ಅದಕ್ಕೆ ಕಣ್ಣು ಹಾಗೂ ದಂತಗಳನ್ನು ಬರೆದಿದ್ದಾರೆ. ಕೆಲವು ತಿಂಗಳ ಹಿಂದೆ ಬಣ್ಣ ಹಾಕಿದ ನಂತರ ಈ ಮರ ಮತ್ತಷ್ಟು ಜನಪ್ರಿಯತೆ/ ಖ್ಯಾತಿ ಗಳಿಸಿದ್ದು, ಆ ಪ್ರದೇಶದಲ್ಲಿ ಸಂಚರಿಸುವ ಮಂದಿ ವಾಹನ ನಿಲ್ಲಿಸಿ ತಲೆಬಾಗಿ ನಮಿಸಿ ಮುಂದೆ ಸಾಗುತ್ತಾರೆ.
ಈ ಬಗ್ಗೆ ಮಾತನಾಡಿರುವ ಕಲಬುರಗಿ ಮ್ಯಾಚಿಂಗ್ ಸೆಂಟರ್ ನ ಮಾಲಿಕರಾಗಿರುವ ಉದಯ್ ಕಲಬುರಗಿ, ಈ ಮರ ತಮ್ಮ ಮಳಿಗೆಯ ಪಕ್ಕದಲ್ಲೇ ಇದ್ದು, ಬಾಲ್ಯದಿಂದಲೂ ಈ ಮರವನ್ನು ನೋಡುತ್ತಿರುವುದಾಗಿ ಹೇಳಿದ್ದಾರೆ.
ಆನೆ ಆಕೃತಿಯನ್ನು ಹೊಂದಿರುವ ಮರ ಬೇವಿನ ಮರವಾಗಿದ್ದು, ಪಕ್ಕದಲ್ಲೇ ಆಲದ ಮರವೂ ಇದೆ. ಎರಡೂ ಮರಗಳೂ ಕನಿಷ್ಟ 100 ವರ್ಷಗಳಷ್ಟು ಹಳೆಯದ್ದಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆಯೂ ಈ ಮರ ಆನೆಯ ಸೊಂಡಿಲ ಆಕೃತಿಯಲ್ಲಿ ಬೆಳೆಯತ್ತಿರುವುದನ್ನು ಯಾರೂ ಗಮನಿಸಿರಲಿಲ್ಲ. ಏಕಾ ಏಕಿ ಈ ಪ್ರದೇಶದಲ್ಲಿ ಮರ ಇಷ್ಟೊಂದು ಜನಪ್ರಿಯವಾಗಿದೆ ಎನ್ನುತ್ತಾರೆ ಉದಯ್ ಕಲಬುರಗಿ. (ಕಪ್ರಡಾ)