



ಸಿದ್ದಾಪುರ : ಹೊನ್ನೇಘಟಗಿ ಉಪವಲಯ ಅರಣ್ಯ ಅಧಿಕಾರಿ ಶ್ರೀಕಾಂತ್ ವಾಲ್ಮೀಕಿ ಹಾಗೂ ಗಾರ್ಡ್ ಇಸ್ಮಾಯಿಲ್ ರನ್ನು ವರ್ಗಾಯಿಸುವಂತೆ ಬ್ಲಾಕ್ ಕಾಂಗ್ರೆಸ್ ಸಮಿತಿ ಸಿದ್ದಾಪುರ ಕ್ಯಾದಗಿ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿತು. ಇನ್ನು 15 ದಿನಗಳ ಒಳಗಾಗಿ ವರ್ಗಾವಣೆ ಮಾಡದಿದ್ದರೆ ಇದೇ ಸ್ಥಳದಲ್ಲಿ ಉಪವಾಸ ಸತ್ಯಾಗ್ರಹವನ್ನ ಹಮ್ಮಿಕೊಳ್ಳುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ್ ತಿಳಿಸಿದರು.
ಈ ಅಧಿಕಾರಿಗಳು ದಿನನಿತ್ಯ ಜನಸಾಮಾನ್ಯರಿಗೆ ರೈತರಿಗೆ ಹಿಂಸೆ, ಕಿರುಕುಳವನ್ನು ನೀಡುತ್ತಿದ್ದು ರೈತರು ಜೀವನ ನಡೆಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ ಕೂಡಲೇ ಇವರನ್ನು ಇಲ್ಲಿಂದ ವರ್ಗಾವಣೆ ಮಾಡಿ ಜನರು ನೆಮ್ಮದಿಯಿಂದ ಜೀವನ ನಡೆಸುವಂತಹ ವಾತಾವರಣ ಸೃಷ್ಟಿಯಾಗಬೇಕು ಎಂದರು ಮತ್ತು ಇವರು ಹಣ ಕೊಟ್ಟವರಿಗೆ ಯಾವುದೇ ತಕರಾರುಗಳು ಇಲ್ಲದೆ ಕೆಲಸಗಳನ್ನು ಮಾಡಿಕೊಳ್ಳಲು ಅನುಮತಿಯನ್ನು ನೀಡುತ್ತಾರೆ ಅದೇ ಹಣ ನೀಡಲಾಗದಂತಹ ಬಡವರಿಗೆ ಹಿಂಸೆಯನ್ನು ನೀಡುತ್ತಿದ್ದಾರೆ ಇಂತಹ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು.
ಸ್ಥಳಕ್ಕೆ ಎ. ಸಿ. ಎಫ್ ಬರುವಂತೆ ಪ್ರತಿಭಟನಾಕಾರರು ಒತ್ತಾಯವನ್ನ ಮಾಡಿದರು ಕೆಲ ಸಮಯ ಪ್ರತಿಭಟನಕಾರರು ಕಛೇರಿ ಎದುರು ಕುಳಿತು ಕೆಲ ಕಾಲ ಧರಣಿಯನ್ನು ಮುಂದುವರಿಸಿದರು ಎ ಸಿ ಎಫ್ ಹರೀಶ್ ಸ್ಥಳಕ್ಕೆ ಬಂದು ಪ್ರತಿಭಟನಾ ಕಾರರ ಮನವಿಯನ್ನು ಪಡೆದು ಮೇಲಧಿಕಾರಿಗಳ ನಿರ್ದೇಶನದಂತೆ ಕ್ರಮ ಕೈಗೊಳ್ಳುತ್ತೇವೆ ಸಿಬ್ಬಂದಿಗಳಿಗೆ ಸೌಜನ್ಯ ವಾಗಿ ವರ್ತಿಸಲು ಸೂಚನೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಉಪತಹಸೀಲ್ದಾರ್ ಡಿ ಎಂ ನಾಯ್ಕ್ ತಹಸೀಲ್ದಾರ್ ಪರವಾಗಿ ಮನವಿ ಸ್ವೀಕರಿಸಿದರು. ಕಾಂಗ್ರೆಸ್ ನ ಪ್ರಮುಖ ನಾಯಕರು ಸ್ಥಳೀಯ ಶಾಸಕರು ಸಂಸದರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
