

ಮಾಂಡೌಸ್ ಚಂಡಮಾರುತ ಎಫೆಕ್ಟ್: ಬೆಂಗಳೂರು ಕೂಲ್ ಕೂಲ್, ರಾಜ್ಯ ರಾಜಧಾನಿಯಲ್ಲಿ ಮುಂದುವರೆದ ಜಿಟಿ ಜಿಟಿ ಮಳೆ
ತಮಿಳುನಾಡಿನ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿಗೂ ಮಾಂಡೌಸ್ ಎಫೆಕ್ಟ್ ತಟ್ಟಿದ್ದು, ಇದೀಗ ಸಿಲಿಕಾನ್ ಸಿಟಿ ಬೆಂಗಳೂರು ಕೂಲ್ ಕೂಲ್ ಆಗಿದೆ.

ಕರಾವಳಿ,ಮಲೆನಾಡು ಸೇರಿದಂತೆ ಬಹುತೇಕ ರಾಜ್ಯಾದ್ಯಂತ ಇಂದು ನಿನ್ನೆ,ನಾಳೆ ವರೆಗೆ ವಾತಾವರಣ ಶೀತವಾಗಿರಲು ಇದೇ ಕಾರಣ ಎನ್ನಲಾಗಿದೆ.
ಬೆಂಗಳೂರು: ತಮಿಳುನಾಡಿನ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿಗೂ ಮಾಂಡೌಸ್ ಎಫೆಕ್ಟ್ ತಟ್ಟಿದ್ದು, ಇದೀಗ ಸಿಲಿಕಾನ್ ಸಿಟಿ ಬೆಂಗಳೂರು ಕೂಲ್ ಕೂಲ್ ಆಗಿದೆ.
ಈಗಾಗಲೇ 3 ದಿನದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ತುಂತುರು ಮಳೆಯು ಇನ್ನೂ ಮುಂದುವರೆದಿದೆ. ಇಂದೂ ಕೂಡ ಹಗುರದಿಂದ ಸಾಧಾರಣೆ ಮಳೆಯು ದಿನವೀಡಿ ಮುಂದುವರೆಯಲಿದೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂಜಾನೆಯಿಂದಲೇ ದಟ್ಟ ಮಂಜು ಕವಿತ ವಾತಾವರಣವಿದ್ದು, ಬೆಂಗಳೂರಿನಲ್ಲಿ ತಾಪಮಾನ 18 ಡಿಗ್ರಿ ಸೆಲ್ಸಿಯಸ್’ಗೆ ಇಳಿಕೆಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಮಳೆಗಿಂತ ಚಳಿಯೇ ಹೆಚ್ಚು ಕಾಡುತ್ತಿದೆ. ಚಂಡಮಾರುತದ ಗಾಳಿ ಕೆಳಭಾಗದಲ್ಲಿ ಬೀಸುತ್ತಿದ್ದು, ಚಳಿ ಜೋರಾಗಿದೆ.
ಚಂಡಮಾರುತದ ಪರಿಣಾಮ ವೀಕೆಂಡ್ ಮೂಡ್‌ನಲ್ಲಿದ್ದ ಬೆಂಗಳೂರಿಗರಿಗೆ ಮಳೆ ಮತ್ತು ಚಳಿಯ ಅಬ್ಬರಕ್ಕೆ ಥಂಡ ಹೊಡೆದಂತಾಗಿದೆ. ಇನ್ನೂ ಮೂರು ದಿನಗಳವರೆಗೆ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಂಡಮಾರುತದ ಎಫೆಕ್ಟ್ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿಗೆ ಇಂದು, ನಾಳೆ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆಯಿದ್ದು, ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಉಳಿದಂತೆ ಕರಾವಳಿ, ಉತ್ತರ ಒಳನಾಡಿಗೆ ಸಾಧಾರಣ ಮಳೆ ಮುನ್ಸೂಚನೆಯಿದೆ. ಮುಂದಿನ 24 ಗಂಟೆಗಳ ಕಾಲ ಕವಿದ ವಾತಾವರಣವ ಇರಲಿದೆ. ಗಾಳಿಯ ಪ್ರಮಾಣ 65 ರಿಂದ 75 ಕೀಮೀ ವೇಗದಲ್ಲಿ ಇರಲಿದ್ದು, ಡಿಸೆಂಬರ್ 14 ರವರೆಗೂ ಮಳೆ ಇರಲಿದೆ.
ಸದ್ಯ ನಗರದಲ್ಲಿ ಕನಿಷ್ಟ ಉಷ್ಣಾಂಶ 18ಡಿಗ್ರಿ ಸೆಲ್ಸಿಯಸ್ ಇದ್ದು ಗರಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇದೆ . ಹೀಗಾಗಿ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. (kpc)
