
ಸಿದ್ದಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿ., ಸಿದ್ದಾಪುರ (ಟಿ.ಎಂ.ಎಸ್) ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ಜಂಟಿ ಸಹಯೋಗದಲ್ಲಿ ಡಿ.31 ರ ಶನಿವಾರ ಅಡಿಕೆ ಬೆಳೆಗಾರರ ಹಕ್ಕೋತ್ತಾಯ ಸಮಾವೇಶವನ್ನು ನಡೆಸಲಾಗುತ್ತಿದೆ.
ಬೆಳಿಗ್ಗೆ ೧೦.೦೦ ಘಂಟೆಗೆ ಕಾರ‍್ಯಕ್ರಮ ಪ್ರಾರಂಭವಾಗಲಿದ್ದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದಾರೆ. ಟಿ.ಎಂ.ಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅಧ್ಯಕ್ಷತೆ ವಹಿಸಲಿದ್ದು, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ಕುಮಾರ ಕೊಡ್ಗಿ, ಅಡಿಕೆ ಮಹಾಮಂಡಳದ ನಿರ್ದೇಶಕ ಹೆಚ್.ಎಸ್.ಮಂಜಪ್ಪ, ಆಶಾಕಿರಣ ಟ್ರಸ್ಟ್ ಸಿದ್ದಾಪುರ ಅಧ್ಯಕ್ಷ ಡಾ.ರವಿ ಆರ್ ಹೆಗಡೆ ಹೂವಿನಮನೆ, ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತಿç ಹಾಗೂ ಕ್ಯಾಂಪ್ಕೊ ನಿರ್ದೇಶಕ ಶ್ರೀ ಶಂಭುಲಿಂಗ ಹೆಗಡೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇತ್ತೀಚೆಗೆ ಅಡಿಕೆಗೆ ಎಲೆ ಚುಕ್ಕೆ ರೋಗ ಹಾಗೂ ಇನ್ನಿತರ ರೋಗಗಳ ಬಾಧೆ ಕಾಡುತ್ತಿದ್ದು ಇದರ ನಿವಾರಣೆಗೆ ಸಿ.ಪಿ.ಸಿ.ಆರ್.ಆಯ್ ಕಾಸರಗೋಡಿನ ಪ್ರಧಾನ ವಿಜ್ಞಾನಿ ಡಾ.ರವಿ ಭಟ್ಟ ಹಾಗೂ ನಿವೃತ್ತ ತೋಟಗಾರಿಕಾ ಅಧಿಕಾರಿ ವಿ.ಎಂ ಹೆಗಡೆ ರೋಗಗಳ ಪರಿಹಾರಕ್ಕಾಗಿ ಕ್ರಮವನ್ನು ಸೂಚಿಸಲಿದ್ದಾರೆ.
ಅಡಿಕೆ ಬೆಳೆಗಾರರ ಹಕ್ಕೋತ್ತಾಯ ಸಮಾವೇಶದ ನಂತರ ಮಧ್ಯಾಹ್ನ ೩.೦೦ ಗಂಟೆಯಿಂದ “ಶರಸೇತು ಬಂಧನ” ತಾಳಮದ್ದಲೆ ನಡೆಯಲಿದ್ದು, ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ್ ಯಲ್ಲಾಪುರ, ಮುಮ್ಮೇಳದಲ್ಲಿ ಉಮಾಕಾಂತ ಭಟ್ಟ ಕೆರೆಕೈ, ಉಜಿರೆ ಅಶೋಕ ಭಟ್ಟ ಮುಂತಾದ ಹಿರಿಯ ಕಲಾವಿದರು ಭಾಗವಹಿಸಲಿದ್ದಾರೆ.
ಅಡಿಕೆ ಬೆಳೆಗಾರ ರೈತರು ಸಮಾವೇಶದ ಸದುಪಯೋಗ ಪಡೆದುಕೊಳ್ಳಬೇಕೆಂದು ಟಿ.ಎಂ.ಎಸ್ ಅಧ್ಯಕ್ಷರಾದ ಆರ್ ಎಂ ಹೆಗಡೆ ಬಾಳೇಸರ ತಿಳಿಸಿದ್ದಾರೆ.
