

ಚುನಾವಣೆಯ ಹೊಸ್ತಿಲಲ್ಲೇ ಸಕ್ರಿಯ ರಾಜಕೀಯಕ್ಕೆ ಮಾಜಿ ಸಿಎಂ ಎಸ್ಎಂ ಕೃಷ್ಣ ಗುಡ್ ಬೈ!
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲ ತಿಂಗಳುಗಳು ಬಾಕಿ ಇರುವಂತೆಯೇ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಎಂಎಸ್ ಕೃಷ್ಣ ರಾಜಕೀಯ ನಿವೃತ್ತಿ ಘೋಷಣೆ ಮಾಡಿರುವುದು ಅಚ್ಚರಿಕೆ ಕಾರಣವಾಗಿದೆ.

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲ ತಿಂಗಳುಗಳು ಬಾಕಿ ಇರುವಂತೆಯೇ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಎಂಎಸ್ ಕೃಷ್ಣ ರಾಜಕೀಯ ನಿವೃತ್ತಿ ಘೋಷಣೆ ಮಾಡಿರುವುದು ಅಚ್ಚರಿಕೆ ಕಾರಣವಾಗಿದೆ.
ಬೆಂಗಳೂರಿನ ಚಿತ್ರಕಲಾ ಪರಿಷತ್ತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೀಗ 90 ವರ್ಷ, ವಯಸ್ಸಿನ ಬಗ್ಗೆ ನಮಗೆ ಅರಿವು ಇರಬೇಕು. 90ರಲ್ಲಿ 50 ವರ್ಷದ ರೀತಿ ನಟನೆ ಮಾಡಲು ಆಗುವುದಿಲ್ಲ. ಅದಕ್ಕಾಗಿ ಕ್ರಮೇಣವಾಗಿ ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಎಸ್ಎಂ ಕೃಷ್ಣ ಹೇಳಿದ್ದಾರೆ.
ಪಕ್ಷ ನಿಮ್ಮನ್ನು ಕಡೆಗಣಿಸುತ್ತಿದೆ ಎಂದು ನಿವೃತ್ತಿ ಘೋಷಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್ಎಂ ಕೃಷ್ಣ ಅವರು, ನಾನೇ ನಿವೃತ್ತಿ ತೆಗೆದುಕೊಳ್ಳುತ್ತಿರುವಾಗ ಬಿಜೆಪಿ ಪಕ್ಷ ನನ್ನನ್ನು ಕಡೆಗಣಿಸಿದೆ ಎಂಬ ಪ್ರಶ್ನೆ ಬರುವುದಿಲ್ಲ. ಇನ್ನು ನನ್ನ ರಾಜಕೀಯ ನಿವೃತ್ತಿ ಬಗ್ಗೆ ಹೈಕಮಾಂಡ್ ಗೆ ತಿಳಿಸುವ ಅಗತ್ಯವಿಲ್ಲ. ಏಕೆಂದರೆ ರಾಜಕೀಯದಲ್ಲಿ ಯಾರೂ ಪಿಂಚಣಿ ಕೊಡುವುದಿಲ್ಲ. ಆದ್ದರಿಂದ ನನ್ನ ನಿವೃತ್ತಿ ನಿರ್ಧಾರವನ್ನು ಹೈಕಮಾಂಡ್ ಗಮನಕ್ಕೆ ತರುವ ಅವಶ್ಯಕತೆ ಇಲ್ಲ ಎಂದರು.
ಎಸ್ ಎಂ ಕೃಷ್ಣ ಅವರು 1999ರಿಂದ 2004ರ ಅವಧಿಗೆ ರಾಜ್ಯದ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿದ್ದರು. ನಂತರ 2004ರಿಂದ 2008ರವರೆಗೆ ಮಹಾರಾಷ್ಟ್ರದ 19ನೇ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ 2009ರಿಂದ ಅಕ್ಟೋಬರ್ 2012ರವರೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಇನ್ನು 2017ರ ಮಾರ್ಚ್ ನಲ್ಲಿ ಕಾಂಗ್ರೆಸ್ ತೊರೆದ ಎಂಎಸ್ ಕೃಷ್ಣ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು. (kpc)
