

ಕರ್ನಾಟಕ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಂತೆಯೇ ಚುನಾವಣಾ ಕಣ ರಂಗೇರುತ್ತಿದ್ದು, ಇದಕ್ಕೆ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟು ಧೂಳೆಬ್ಬಿಸುತ್ತಾರೆಯೇ ಎಂಬ ಮಾತುಗಳು ಕೇಳಿಬರುತ್ತಿವೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಂತೆಯೇ ಚುನಾವಣಾ ಕಣ ರಂಗೇರುತ್ತಿದ್ದು, ಇದಕ್ಕೆ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟು ಧೂಳೆಬ್ಬಿಸುತ್ತಾರೆಯೇ ಎಂಬ ಮಾತುಗಳು ಕೇಳಿಬರುತ್ತಿವೆ. ಕಿಚ್ಚ ಸುದೀಪ್ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಕಣಕ್ಕಿಳಿಸುವ ಪ್ರಯತ್ನಗಳು ನಡೆಯುತ್ತಿವೆ.

ಇದೀಗ ಸರ್ಕಾರದ ವಿರುದ್ಧ ವಿವಿಧ ಅಭಿಯಾನಗಳ ಮೂಲಕ ಕಾಂಗ್ರೆಸ್ ವಿಶ್ವಾಸ ಹೆಚ್ಚಾಗಿದ್ದು, ಅದಕ್ಕೆ ಕಿಚ್ಚ ಸುದೀಪ್ ಬಲ ಸೇರಿದರೆ ಮತ್ತೂ ಶಕ್ತಿ ಸಿಗುತ್ತದೆ. ತಮ್ಮ ಸಿನಿಮಾಗಳ ಮೂಲಕ ರಾಜಕೀಯ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಸಂದೇಶ ನೀಡುವ ಸುದೀಪ್, ಕಾಂಗ್ರೆಸ್‌ಗೆ ಆಗಮಿಸುವುದು ಒಳ್ಳೆಯದು ಎಂದು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ.
ಸುದೀಪ್ ಅವರನ್ನು ಕರೆತರು ಖ್ಯಾತ ಚಿತ್ರನಟಿ ರಮ್ಯಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೂಲಕ ಪ್ರಯತ್ನ ನಡೆಯುತ್ತಿದೆ. ರಾಜ್ಯಾದ್ಯಂತ ಖ್ಯಾತ ನಟನಾಗಿ ಪ್ರಸಿದ್ಧಿಯಾಗಿರುವ ಸುದೀಪ್, ವಾಲ್ಮೀಕಿ ಸಮುದಾಯಕ್ಕೆ ಸೇರಿದವರು ಎಂಬುದನ್ನೂ ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ.
ಈ ಸಂಬಂಧ ನಟಿ ರಮ್ಯಾ ಅವರು ಈಗಾಗಲೇ ಕಿಚ್ಚ ಸುದೀಪ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ನಟಿ ಮಾತನಾಡಿದ್ದಾರೆ ಎನ್ನಲಾಗಿದೆ.
ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿ ವಾಲ್ಮೀಕಿ ಸಮುದಾಯ ಬೃಹತ್ ಸಂಖ್ಯೆಯಲ್ಲಿದೆ. ಬಿಜೆಪಿಯಲ್ಲಿ ವಾಲ್ಮೀಕಿ ಸಮುದಾಯದಿಂದ ಶ್ರೀರಾಮುಲು ಮುಂಚೂಣಿಯಲ್ಲಿದ್ದಾರೆ. ಇತ್ತೀಚೆಗೆ ಮೀಸಲಾತಿ ಪ್ರಮಾಣ ಹೆಚ್ಚಳದಿಂದ ಸಮುದಾಯದ ಮತಗಳು ಬಿಜೆಪಿಯತ್ತ ದೃವೀಕರಣವಾಗಿವೆ. ಕಾಂಗ್ರೆಸ್‌ಗೆ ಸುದೀಪ್ ಆಗಮಿಸಿದರೆ ವಾಲ್ಮೀಕಿ ಮತಗಳನ್ನು ತನ್ನತ್ತ ಸೆಳೆಯಲು ಸಹಕಾರವಾಗುತ್ತದೆ ಎಂಬ ಲೆಕ್ಕಾಚಾರವಿದೆ.
