


ಸಿದ್ದಾಪುರ: ಸುಸಂಸ್ಕೃತ ವ್ಯಕ್ತಿ ಪರಿವರ್ತನೆಯ ಶಕ್ತಿ, ನುಡಿದಂತೆ ನಡೆದವರು, ನಿಷ್ಕಳಂಕ ವ್ಯಕ್ತಿತ್ವದ ಕಾಗೇರಿ ಎಂಬ ಉದ್ದೇಶವಿಟ್ಟುಕೊಂಡು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಸಾರ್ವಜನಿಕವಾಗಿ ಅಭಿನಂದನೆ ಸಲ್ಲಿಸಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ ಎಂದು ಸಾಮಾಜಿಕ ಮುಖಂಡ ವೀರಭದ್ರ ನಾಯ್ಕ ಟೀಕಿಸಿದರು.
ಈ ಕುರಿತು ಸಿದ್ಧಾಪುರ ಬಾಲಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ವಿಶ್ವೇಶ್ವರ ಹೆಗಡೆ ಕಾಗೇರಿ ಮೂರು ಬಾರಿ ಅಂಕೋಲಾ ಕ್ಷೇತ್ರದಿಂದ ಹಾಗೂ ಮೂರು ಬಾರಿ ಶಿರಸಿ ಸಿದ್ದಾಪುರ ಕ್ಷೇತ್ರದಿಂದ ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಆಗಿದ್ದಾರೆ. ಜತೆಗೆ ವಿಧಾನಸಭಾ ಅಧ್ಯಕ್ಷರಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದರೆ ನಾವು ತುಂಬು ಮನದಿಂದ ಸ್ವಾಗತಿಸುತ್ತಿದ್ದೆವು. ಆದರೆ ನಿಷ್ಕಳಂಕ ವ್ಯಕ್ತಿ, ಜಾತಿ-ಧರ್ಮದ ಬೇಧವಿಲ್ಲದ ರಾಜಕಾರಣಿ, ದ್ವೇಷದ ರಾಜಕಾರಣಿಯಲ್ಲ ಎಂದು ಸಾರುತ್ತಾ ಅಭಿನಂದನಾ ಸಮಿತಿ ಸಾರ್ವಜನಿಕವಾಗಿ ಅಭಿನಂದನೆ ಸಲ್ಲಿಸಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ. ಆರು ಬಾರಿ ಶಾಸಕರಾಗಿ, ಒಮ್ಮೆ ಸಚಿವರು ಹಾಗೂ ಸಭಾಧ್ಯಕ್ಷರಾಗಿದ್ದಾರೆ. ಅವರು ತಾನೊಬ್ಬ ಕಳಂಕ ರಹಿತ ರಾಜಕಾರಣಿ ಎಂದು ಹೇಳಿದ್ದಾರೆ. ಕಳೆದ ಬಾರಿ ಕಾಮಗಾರಿ ಆದೇಶ ನೀಡಬೇಕಾದರೆ ಶಾಸಕರಿಗೆ ಕೊಡಬೇಕೆಂದು ಅಧಿಕಾರಿಗಳು ಪರ್ಸೆಂಟೇಜ್ ತೆಗೆದುಕೊಂಡೆ ಕಾಮಗಾರಿ ಆದೇಶ ನೀಡಿದ್ದಾರೆ. ಈ ಕುರಿತು ಹಲವಾರು ಗುತ್ತಿಗೆದಾರರು ಪರ್ಸೆಂಟೇಜ್ ಕೊಟ್ಟಿದ್ದೇವೆ ಅಡ್ಜಸ್ಟ್ಮೆಂಟ್ ಮಾಡಿಕೊಂಡಿದ್ದೇವೆ ಎಂದು ನಮ್ಮಲ್ಲಿ ಹೇಳಿದ್ದಾರೆ. ಶಾಸಕರಿಗೆ ಪರ್ಸೆಂಟೇಜ್ ಕೊಟ್ಟು ಅಧಿಕಾರಿಗಳಿಗೆ ಪರ್ಸೆಂಟೇಜ್ ಕೊಟ್ಟು ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ. ಕಳಪೆ ಕಾಮಗಾರಿಗೆ ಪರ್ಸೆಂಟೇಜ್ ನೀಡಿರುವುದೇ ಕಾರಣವಾಗಿದೆ ಎಂಬ ಅರ್ಥವನ್ನು ಮೂಡಿಸುತ್ತಿದೆ. ಇನ್ನು ಅಭಿವೃದ್ಧಿ ವಿಚಾರಕ್ಕೆ ಬಂದರೆ ಪಕ್ಕದ ಸೊರಬಾ, ಸಾಗರದಲ್ಲೂ ಸಹ ಇದೇ ರೀತಿಯ ಅಭಿವೃದ್ಧಿಯಾಗುತ್ತಿದೆ. ಕಾಗೇರಿಯವರು ತಮ್ಮ ಸ್ವಂತಃ ಹಣದಿಂದ ಒಬ್ಬ ಬಡವನಿಗೆ ಸಹಾಯ ಮಾಡಿದ್ದನ್ನು ತೋರಸಲಿ. ಸರ್ಕಾರದ ಅನುದಾನದಲ್ಲಿ ಅಭಿವೃದ್ಧಿ ಕೆಲಸವನ್ನು ಯಾರು ಶಾಸಕರಿದ್ದರು ಮಾಡುತ್ತಾರೆ. ಸುಸಂಸ್ಕೃತ ವ್ಯಕ್ತಿ, ಪರಿವರ್ತನೆಯ ಶಕ್ತಿ, ನಿಷ್ಕಳಂಕ ವ್ಯಕ್ತಿ ಎಂದು ಅಭಿನಂದನೆ ಸಲ್ಲಿಸುವುದು ಸಮಂಜಸವಲ್ಲ ಎಂದರು.
ಕಾಗೇರಿಯವರು ತಮ್ಮದು ದ್ವೇಷ ರಾಜಕಾರಣವಲ್ಲ ಎಂದು ಹೇಳುತ್ತಾರೆ. ಆದರೆ ಬಿಜೆಪಿಯ ಕಾರ್ಯಕರ್ತ ಯುವ ಮೋರ್ಚಾ ಅಧ್ಯಕ್ಷರಾಗಿ ಕೆಲಸ ಮಾಡಿದಂತಹ ಹರೀಶ್ ಗೌಡರ್ ಸಾರ್ವಜನಿಕವಾಗಿ ವ್ಯವಸ್ಥೆಯನ್ನು ಅಣಕಿಸಿದಕ್ಕೆ ಅವರ ಕೆಲವು ನಡತೆ ಬಗ್ಗೆ ಧ್ವನಿ ಎತ್ತಿದಾಗ ಹಾಗೂ ಚುನಾವಣೆ ವೇಳೆಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸುವಲ್ಲಿ ಕಾಗೇರಿಯವರು ಸರಿಯಾಗಿ ಕೆಲಸ ಮಾಡಬೇಕೆಂದು ಹೇಳಿಕೆ ನೀಡಿದಾಗ ಅವರನ್ನು ಹುದ್ದೆಯಿಂದ ತೆಗೆಸುವಲ್ಲಿ ಕಾರಣಿಕರ್ತರಾಗಿದ್ದಾರೆ. ಹರೀಶ್ ಗೌಡರ್ ಕರೆಯಿಸಿ ಬುದ್ಧಿವಾದ ಹೇಳಿ ರಾಜಿ ಮಾಡಿ ಸರಿ ಮಾಡಬಹುದಿತ್ತು. ಆದರೆ ಹಾಗೆ ಮಾಡದೆ ತನ್ನ ಪ್ರಭಾವ ಬಳಸಿ ಆತನನ್ನು ಜೈಲಿಗಟ್ಟಿದರು. ಹಂಜಕ್ಕಿ ರಸ್ತೆ ಜನ ಜಾನುವಾರು ಓಡಾಡಲಿಕ್ಕೆ ಯೋಗ್ಯವಾಗಿಲ್ಲ ಇಲ್ಲಿ ಗದ್ದೆ ನಾಟಿ ಮಾಡಲು ಜನ ಬೇಕಾಗಿದ್ದಾರೆ ಅಂತ ವಾಟ್ಸಪ್ ಫೇಸ್ಬುಕ್ ಗಳಲ್ಲಿ ವ್ಯಂಗ್ಯಚಿತ್ರ ಹಾಕಿ ವಾಸ್ತು ಸ್ಥಿತಿಯನ್ನು ಪ್ರಕಟಿಸಿದರೆ ತಪ್ಪೇನಿದೆ. ಪ್ರಧಾನಮಂತ್ರಿ ಮುಖ್ಯಮಂತ್ರಿಗಳನ್ನೇ ನಿಂದಿಸುತ್ತಾರೆ. ಅದರಲ್ಲಿ ತಪ್ಪೇನಿದೆ ವಾಟ್ಸಪ್ ಹಾಗೂ ಫೇಸ್ಬುಕ್ ಗಳಲ್ಲಿ ಕಾಗೇರಿಯವರ ಭಾವಚಿತ್ರದೊಂದಿಗೆ ಗದ್ದೆ ನಾಟಿ ಮಾಡಲು ಜನ ಬೇಕಾಗಿದ್ದಾರೆ ಅಂತ ಹಾಕಿದ್ದಕ್ಕೆ ಇವರ ಮೇಲೆ ಪ್ರಕರಣ ದಾಖಲಾಗುವಂತೆ ನೋಡಿಕೊಂಡು ಇವರನ್ನು ಜೈಲಿಗೆಟ್ಟಿಸಿದರಲ್ಲಾ ಇದು ದ್ವೇಷದ ರಾಜಕಾರಣವಲ್ಲವಾ ಎಂದು ಪ್ರಶ್ನಿಸಿದರು.
ಕಾಗೇರಿ ನುಡಿದಂತೆ ನಡೆಯುತ್ತಾರೆ ಅಂತ ಹೇಳುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಹು ಸಂಖ್ಯಾತ ಈಡಿಗರು ಭೀಮಣ್ಣನ ಪರವಾಗಿದ್ದಾರೆ ಎಂದು ಪ್ಲಾನಿಂಗ್ ಮಾಡಿ ಈಡಿಗರ ಮತವನ್ನು ಪಡೆಯುವ ನಿಟ್ಟಿನಲ್ಲಿ ತಾನು ಆಯ್ಕೆಯಾದಲ್ಲಿ ಈಡಿಗ ಸಮಾಜದ ಕೆ.ಜಿ.ನಾಯ್ಕ ಹಣಜಿಬೈಲ್ ಅವರನ್ನು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡುತ್ತೇನೆ. ಎಂಎಲ್ಸಿ ಮಾಡುತ್ತೇನೆ ಅಂತ ಮಾತು ಕೊಟ್ಟರು ಆದರೆ ಈವರೆಗೂ ಯಾಕೆ ಮಾಡಿಲ್ಲ. ಇದು ನುಡಿದಂತೆ ನಡೆದಂತಾಗುತ್ತದಾ!
ನಮ್ಮೂರಿನ ದೇವಸ್ಥಾನಕ್ಕೆ ನಿಮ್ಮ ಬಿಜೆಪಿ ಕಾರ್ಯಕರ್ತರು ಅಧ್ಯಕ್ಷರಿದ್ದಾಗ 5 ಲಕ್ಷ ರೂಪಾಯಿ ಹಣವನ್ನು ಶಾಸಕರ ನಿಧಿಯಿಂದ ನೀಡಿದ್ದೀರಿ. ಗ್ರಾಮಸ್ಥರ ಕೋರಿಕೆಯಂತೆ ನಾನು ದೇವಸ್ಥಾನದ ಅಧ್ಯಕ್ಷನಾಗುತ್ತಿದ್ದಂತೆ 5 ಲಕ್ಷ ಅನುದಾನವನ್ನು ವಾಪಸ್ ಪಡೆದುಕೊಂಡಿದ್ದೀರಿ ಇದು ದ್ವೇಷದ ರಾಜಕಾರಣವಲ್ಲವೇ? ಎಂದು ಪ್ರಶ್ನಿಸಿದರು.
ಕಾಗೇರಿಯವರು ಯಾರಿಗೂ ವೈಯಕ್ತಿಕವಾಗಿ ಹತ್ತು ರೂಪಾಯಿಯನ್ನು ಸಹ ಕೊಟ್ಟಿಲ್ಲ. ದೇವಸ್ಥಾನ ಹಾಗೂ ಕ್ರೀಡಾಕೂಟಗಳಿಗೂ ಸಹ ವೈಯಕ್ತಿಕವಾಗಿ ಹಣ ನೀಡಿಲ್ಲ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಸರ್ಕಾರದ ಅನುದಾನದ ಹಣ ಬರುತ್ತೆ ಹೋಗುತ್ತೆ. ಸರ್ಕಾರದ ಅನುದಾನದ ಹಣದಿಂದ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಗತಿ ಆಗುತ್ತಿದೆ. ಆದರೆ ಸಿದ್ದಾಪುರದಲ್ಲಿ ಸಾಕಷ್ಟು ಕಾಮಗಾರಿಗಳು ಕಳಪೆಯಾಗಿವೆ. ಇಷ್ಟೊಂದು ಕಳಂಕಗಳನ್ನು ಹೊತ್ತಿಕೊಂಡಿರುವ ಕಾಗೇರಿಯವರನ್ನು ಪ್ರಾಮಾಣಿಕರು ಅಂತ ಯಾವ ರೀತಿ ಗೌರವಿಸುತ್ತಾರೋ ನನಗಂತೂ ಅರ್ಥವಾಗುತ್ತಿಲ್ಲ ಎಂದು ಲೇವಡಿ ಮಾಡಿದರು.
ಬಿಜೆಪಿ ಕಾರ್ಯಕರ್ತ ಹರೀಶ್ ಗೌಡರ್ ಮಾತನಾಡಿ, ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಕಾಗೇರಿಯವರು ಸರ್ಕಾರದಿಂದ ಸಿಗುವ ಟಿಎ, ಡಿರ ಸೇರಿದಂತೆ ಎಲ್ಲಾ ಗರಿಷ್ಠ ಸೌಲಭ್ಯಗಳನ್ನು ಪಡೆದುಕೊಂಡಿರುವ ಏಕೈಕ ಶಾಸಕ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ತನ್ನ 30 ವರ್ಷಗಳ ಅಧಿಕಾರದ ಅವಧಿಯಲ್ಲಿ ವೈಯಕ್ತಿಕವಾಗಿ ನಯಾಪೈಸೆಯನ್ನು ಬಡವ ಬಲ್ಲಿದವರಿಗೆ, ಕಾರ್ಯಕರ್ತರಿಗೆ, ದೇವಾಲಯಗಳಿಗೆ ಹಾಗೂ ಶೈಕ್ಷಣಿಕ ಕ್ಷೇತ್ರಗಳಿಗೆ ನೀಡಿಲ್ಲ. ತಾಲೂಕಿನ ಹಲವೆಡೆ ಜನರು ಪ್ರವಾಹ ಸಂತ್ರಸ್ತರಾದಾಗ ಸಾಮಾಜಿಕ ಕಳಕಳಿಯ ಅನೇಕ ವ್ಯಕ್ತಿಗಳು, ಸಂಘಟನೆಗಳು ಅವರ ಸಂಕಷ್ಟಕ್ಕೆ ಸ್ಪಂದಿಸಿದರು. ಆದರೆ ಕಾಗೇರಿ ಮಾತ್ರ ಏನನ್ನು ನೀಡಿಲ್ಲ. ತನ್ನ ಅಧಿಕಾರ ಅವಧಿಯಲ್ಲಿ ಜನರಿಗೆ ಉದ್ಯೋಗವನ್ನು ಕೊಡುವಂತಹ ಯಾವುದೇ ಚಟುವಟಿಕೆಯನ್ನು ಕೈಗೊಂಡಿಲ್ಲ. ಶಾಲೆ, ಅಂಗನವಾಡಿಗಳ ಅಭಿವೃದ್ಧಿಗೆ ವೈಯಕ್ತಿಕವಾಗಿ ಸಹಕರಿಸದ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹ ಹಣ ನೀಡದ ಇಂತಹ ವ್ಯಕ್ತಿಗೆ ಅಭಿನಂದನೆ ಮಾಡುವುದಕ್ಕಿಂತ ಬಡವರ ಪರವಾಗಿ ಹೋರಾಟ ಮಾಡುತ್ತಿರುವಂತಹ, ಶಿರಸಿ ಜಿಲ್ಲೆ ಮಾಡುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿರುವ, ಶಾಲಾ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಣೆ ಮಾಡಿ ಶೈಕ್ಷಣಿಕ ಸಹಾಯ ನೀಡುತ್ತಿರುವ, ಕರೋನಾ ಸಮಯದಲ್ಲಿ ವೈಯಕ್ತಿಕ ಹಣದಿಂದ ಆಹಾರ ಕಿಟ್ ವಿತರಣೆ ಮಾಡಿದವರಿದ್ದಾರೆ. ಅಂತವರಿಗೆ ಬೇಕಾದರೆ ಸನ್ಮಾನ ಮಾಡಲಿ. ನಮ್ಮ ಹೆಮ್ಮೆ ನಮ್ಮ ಕಾಗೇರಿ ಎಂದು ಇವರು ಮಾಡುತ್ತಿರುವಂತಹ ಕಾರ್ಯಕ್ರಮ ಸರಳ ಸಜ್ಜನ ಎಂಬ ಹೆಸರಿಗೆ ಕಳಂಕವಾಗಿದೆ ಎಂದು ಟೀಕಿಸಿದರು.
ಈ ವೇಳೆ ಸಾಮಾಜಿಕ ಮುಖಂಡರಾದ ಲಕ್ಷ್ಮಣ ಬೇಡ್ಕಣಿ, ಆಕಾಶ್ ಕೊಂಡ್ಲಿ ಮತ್ತಿತರರು ಉಪಸ್ಥಿತರಿದ್ದರು.

