

ಜಾತ್ರೆ,ಹಬ್ಬಗಳು ಪ್ರತಿ ಊರಿನ ವಿಶೇಶಗಳು. ದಿನದ ಜಂಜಡದಲ್ಲಿರುವ ಜನರ ಮನೋರಂಜನೆ,ಉತ್ಸಾಹಕ್ಕೆ ಹಬ್ಬ,ಜಾತ್ರೆಗಳು ನೆರವಾಗುತ್ತವೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಅಯ್ಯಪ್ಪನ ವಾರ್ಷಿಕ ಜಾತ್ರೆ ಇಂಥ ವಿಶೇಶಗಳಿಗೆ ಒಂದು ಉದಾಹರಣೆ. ಶಬರಿಮಲೆ ಅಯ್ಯಪ್ಪನ ದೇವಸ್ಥಾನದ ಮಾದರಿಯಲ್ಲಿ ಸಿದ್ಧಾಪುರದ ಬಾಲಿಕೊಪ್ಪದ ಬೆಟ್ಟದಲ್ಲಿ ನಿರ್ಮಾಣವಾಗಿರುವ ಅಯ್ಯಪ್ಪ ದೇವಾಲಯದಲ್ಲಿ ಪ್ರತಿವರ್ಷ ಸಂಕ್ರಾತಿಗೆ ವಾರ್ಷಿಕ ಜಾತ್ರೆ ನಡೆಯುತ್ತದೆ. ಮನೋರಂಜನೆ, ಅಂಗಡಿ ಮುಂಗಟ್ಟುಗಳಲ್ಲದೆ ಆನೆಯ ಮೇಲೆ ಅಯ್ಯಪ್ಪನ ಮೆರವಣಿಗೆ ಈ ಜಾತ್ರೆಯ ವಿಶೇಶ. ದಸರಾದ ಆನೆಯ ಅಂಬಾರಿಯಂತೆ ಅಯ್ಯಪ್ಪನ ಜಾತ್ರೆಯ ಆನೆಯ ಮೇಲಿನ ಅಯ್ಯಪ್ಪನ ಮೆರವಣಿಗೆ ಹಲವು ವಿಶೇಶಗಳಿಂದ ಜನಮಾನಸದ ಸಂಭ್ರಮಕ್ಕೆ ಕಾರಣವಾಗುತ್ತದೆ.
ಸಂಕ್ರಾಂತಿಯ ಮೊದಲು ೫ ದಿವಸಗಳ ಕಾಲ ನಡೆಯುವ ಈ ಅಯ್ಯಪ್ಪನ ಜಾತ್ರೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಕೊನೆಯ ದಿನ ಆನೆಯ ಮೇಲೆ ಅಯ್ಯಪ್ಪನ ಮೆರವಣಿಗೆಯ ಅಂಬಾರಿ ನೋಡುವುದೇ ಸೊಬಗು.ವಿಭಿನ್ನ ಪ್ರದೇಶಗಳ ಕಲಾಪ್ರಕಾರಗಳ ಪ್ರದರ್ಶನ,ಸ್ಥಳಿಯರ ಸಹಭಾಗಿತ್ವದ ರಂಗೋಲಿ,ಈ ಮರವಣಿಗೆಯ ಮಹತ್ವ ಹೆಚ್ಚಿಸುತ್ತವೆ.
ದೂರದ ಅಯ್ಯಪ್ಪ ದೇವಾಲಯಕ್ಕೆ ತೆರಳಲು ಸಾಧ್ಯವಾಗದ ಸ್ಥಳೀಯರಿಗೆ ಈ ಅಯ್ಯಪ್ಪ ದೇವಾಲಯ ಸ್ಥಳೀಯವಾಗಿ ಶಬರಿಮಲೆಯಷ್ಟೇ ಮಹತ್ವದ್ದು. ಐದು ದಿವಸಗಳ ಜಾತ್ರೆಯಲ್ಲಿ ಪಾಲ್ಗೊಳ್ಳುವ ಜನರು ಕೊನೆಯ ದಿವಸದ ಆನೆಯ ಮೇಲೆ ಅಯ್ಯಪ್ಪನ ಮೆರವಣಿಗೆಯ ವಿಶೇಶವನ್ನು ತಪ್ಪಿಸುವುದೇ ಇಲ್ಲ.ಸ್ಥಳೀಯರು ಪರ ಊರುಗಳಿಂದ ಬರುವ ಭಕ್ತರು ಈ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಬ್ರಮಿಸುತ್ತಾರೆ.
ಕಳೆದ ಎರಡ್ಮೂರು ವರ್ಷಗಳಿಂದ ಕೋವಿಡ್ ಭಯದ ಆತಂಕದಲ್ಲಿ ಕಳೆಗುಂದಿದ್ದ ಈ ಅಯ್ಯಪ್ಪ ಜಾತ್ರೆ ಈ ವರ್ಷ ಅತಿ ವಿಜೃಂಬಣೆಯಿಂದಲೇ ನಡೆಯಿತು.ಲಕ್ಷಾಂತರ ಜನರು ಪಾಲ್ಗೊಂಡು ಸಂಬ್ರಮಿಸಿದ ಈ ಜಾತ್ರೆಯಲ್ಲಿ ಪ್ರತಿವರ್ಷದಂತೆ ಈ ವರ್ಷ ಕೂಡಾ ಕೊನೆಯ ದಿನದ ಅಯ್ಯಪ್ಪನ ಮೆರವಣಿಗೆಯಲ್ಲಿ ಹೆಚ್ಚು ಜನರು ಪಾಲ್ಗೊಂಡಿದ್ದು ವಿಶೇಶ.
