

ಸಿದ್ದಾಪುರ: ನಶಿಸಿ ಹೋಗುತ್ತಿರುವ ಕಲಾಪ್ರಕಾರಗಳನ್ನು ನಾಡಿಗೆ ಪರಿಚಯಿಸಲು ಮೂಲ ಸಂಸ್ಕೃತಿ ಮತ್ತು ಕನ್ನಡ ಸಂಸ್ಕೃತಿ ಎಂಬ ವಿನೂತನ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲಕುಮಾರ ತಿಳಿಸಿದರು.
ಪಟ್ಟಣದ ಹಾಳದಕಟ್ಟಾದಲ್ಲಿರುವ ಆಶಾಕಿರಣ ಟ್ರಸ್ಟ್ ನ ಮುರುಘರಾಜೇಂದ್ರ ಅಂಧರ ಶಾಲೆಯ ಜಾನಪದ ಕಲೋತ್ಸವ ಉದ್ಘಾಟಿಸಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗ್ರಾಮೀಣ ಸೊಗಡನ್ನು ನಾಡಿಗೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಮೂಲ ಸಂಸ್ಕೃತಿ ಮತ್ತು ಕನ್ನಡ ಸಂಸ್ಕೃತಿ ಎಂಬ ಅಭಿಯಾನ ಈಗಾಗಲೇ ಪ್ರಾರಂಭಿಸಲಾಗಿದೆ ಎಂದ ಅವರು, ಸಮಾಜದಲ್ಲಿ ಒಳ್ಳೆಯ ಚಟುವಟಿಕೆಗಳಿಗೆ ಧ್ವನಿಯಾಗಿ ಕೆಲಸ ಮಾಡಬೇಕಿದೆ. ಆಶಾಕಿರಣ ಟ್ರಸ್ಟ್ ಸಮಾಜದ ಕಣ್ಣನ್ನು ತೆರೆಸಿದೆ. ಈ ಶಾಲೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಟ್ರಸ್ಟಿನ ಬೆಳ್ಳಿ ಹಬ್ಬದ ಸಂಸ್ಮರಣಾ ಭವನದ ಶಂಕುಸ್ಥಾಪನೆ ನೆರವೇರಿಸಿದ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ವಿಕಲಚೇತನರಿಗೆ ಸದಾ ಆತ್ಮವಿಶ್ವಾಸ ಮೂಡಿಸಬೇಕು. ಒಳ್ಳೆಯ ಕೆಲಸ ಮಾಡುತ್ತಿರುವ ಸಂಘ-ಸಂಸ್ಥೆಗಳನ್ನು ಉತ್ತೇಜಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಆಶಾಕಿರಣ ಟ್ರಸ್ಟನ ಅಧ್ಯಕ್ಷ ರವಿ ಹೆಗಡೆ ಹೂವಿನಮನೆ ಪ್ರಾಸ್ತಾವಿಕ ಮಾತನಾಡಿ, ಕ್ರೀಯಾಶೀಲ ಮನಸ್ಸು ಹಾಗೂ ಸೃಜನಶೀಲ ಚಟುವಟಿಕೆಯೊಂದಿಗೆ ಸಂಸ್ಥೆ ಮುನ್ನಡೆಸುತ್ತಿದ್ದೇವೆ. ಅಂಧ ಮಕ್ಕಳಿಗೆ ಟ್ರಸ್ಟ್ ಆಶಾಕಿರಣವಾಗುತ್ತಿದೆ ಎಂದರು.
ಟ್ರಸ್ಟನ ಗೌರವ ಕಾರ್ಯದರ್ಶಿ ಕೇಶವ ಶಾನಭಾಗ ದಂಪತಿ, ವಿಕಲ ಚೇತನರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶ್ರೀಧರ ಹರಗಿ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಲಕ್ಷ್ಮೀಶ ಮರಾಠಿ ಇವರನ್ನು ಸನ್ಮಾನಿಸಲಾಯಿತು.
ಈ ವೇಳೆ ಚಿತ್ರ ನಟರಾದ ಡಾ.ಶ್ರೀನಾಥ್, ನೀರ್ನಳ್ಳಿ ರಾಮಕೃಷ್ಣ, ಖ್ಯಾತ ಕವಿ ಬಿ.ಆರ್.ಲಕ್ಷ್ಮಣರಾವ್, ಟ್ರಸ್ಟಿನ ಉಪಾಧ್ಯಕ್ಷ ಸಿ.ಎಸ್.ಗೌಡರ್, ಖಜಾಂಚಿ ನಾಗರಾಜ ದೋಶೆಟ್ಟಿ, ಟ್ರಸ್ಟಿಗಳಾದ ವಾಸುದೇವ ಶೇಟ್, ಸುಧೀರ ಬೇಂಗ್ರೆ, ಮಧುಮತಿ ಶೀಗೆಹಳ್ಳಿ, ಉಮಾ ನಾಯಕ ಉಪಸ್ಥಿತರಿದ್ದರು. ಅಂಧರ ಶಾಲೆಯ ಪ್ರಧಾನ ಕಾರ್ಯದರ್ಶಿ ನಾಗರಾಜ ಮರಾಠಿ ಸ್ವಾಗತಿಸಿದರು. ಜಿ.ಜಿ.ಹೆಗಡೆ ಬಾಳಗೋಡ ನಿರೂಪಿಸಿದರು.

