ರಾಜ್ಯದಲ್ಲಿ ಚುನಾವಣೆ ನಡೆಯಲು ದಿನಗಣನೆ ಆರಂಭವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡುತ್ತಿದ್ದಾರೆ. 2ನೇ ಬಾರಿಗೆ ಮುಖ್ಯಮಂತ್ರಿ ಬಜೆಟ್ ಮಂಡಿಸುತ್ತಿದ್ದು, ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ ಎಂಬ ಧ್ಯೇಯದೊಂದಿಗೆ ಯೋಜನೆಗಳನ್ನು ಘೋಷಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ನಡೆಯಲು ದಿನಗಣನೆ ಆರಂಭವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡುತ್ತಿದ್ದಾರೆ. 2ನೇ ಬಾರಿಗೆ ಮುಖ್ಯಮಂತ್ರಿ ಬಜೆಟ್ ಮಂಡಿಸುತ್ತಿದ್ದು, ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ ಎಂಬ ಧ್ಯೇಯದೊಂದಿಗೆ ಯೋಜನೆಗಳನ್ನು ಘೋಷಿಸಿದ್ದಾರೆ.
ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಉನ್ನತ ತಂತ್ರಜ್ಞಾನ ಆಧಾರಿತ ಹೈಟೆಕ್ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಹೈಪರ್ ಬ್ಯಾಂಕ್ ಆಮ್ಲಜನಕ ಥೆರಪಿ, CADCAM, Cone Beam, CT scan ದಂತ ಚಿಕಿತ್ಸೆಗೆ ಸಂಬಂಧಿಸಿದಂತೆ Piezosurgery ಮುಂತಾದ ಹೈಟೆಕ್ ಚಿಕಿತ್ಸಾ ಸೌಲಭ್ಯಗಳನ್ನು ವೈದ್ಯಕೀಯ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತಿದೆ.
ರಾಯಚೂರಿನಲ್ಲಿ AIIMS ಆಸ್ಪತ್ರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು. ಬೆಂಗಳೂರು, ಹುಬ್ಬಳ್ಳಿ, ಮೈಸೂರು ಮತ್ತು ಕಲಬುರಗಿಯ 4 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಐವಿಎಫ್ ಕ್ಲಿನಿಕ್‌ಗಳನ್ನು 6 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಸ್ವಯಂಚಾಲಿತ ಮತ್ತು ಕೈಂದ್ರೀಕೃತ ರಕ್ತನಿಧಿ ನಿರ್ವಹಣಾ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು. ಪ್ರಸಕ್ತ ವರ್ಷ ನಿಮ್ಹಾನ್ಸ್ ಸಂಸ್ಥೆಯ ಆವರಣದಲ್ಲಿ 146 ಕೋಟಿ ರೂ.ಗಳ ವೆಚ್ಚದಲ್ಲಿ ಅಂಗಾಂಗ ಜೋಡಣೆಗೆ ಮೀಸಲಾದ ದೇಶದ ಪ್ರಥಮ ಸಾರ್ವಜನಿಕ ಆಸ್ಪತ್ರೆಯನ್ನು ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದರು. (kpc)