

ಸಿದ್ದಾಪುರ: ಕಲೆ, ಕ್ರೀಡೆ, ಸಾಂಸ್ಕೃತಿಕ ಹಾಗೂ ಜಾನಪದಗಳ ಕಲರವವಾದ
ಸಿದ್ದಾಪುರ ಉತ್ಸವಕ್ಕೆ ಶುಕ್ರವಾರ ಸಂಜೆ ವಿದ್ಯುಕ್ತ ಚಾಲನೆ ದೊರೆಯಲಿದೆ.

ಈ ಕುರಿತು ಪಟ್ಟಣದಲ್ಲಿ ಕಚೇರಿಯಲ್ಲಿ ಸಿದ್ದಾಪುರ ಉತ್ಸವ ಸಮಿತಿ ಉಪಾಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಪಕ್ಷಾತೀತವಾಗಿ ಹಬ್ಬದ ರೀತಿಯಲ್ಲಿ ಉತ್ಸವ ಆಚರಿಸಲಾಗುವುದು. ಭುವನಗಿರಿಯಿಂದ ಉತ್ಸವ ಜ್ಯೋತಿ ತಂದು ಸಿದ್ದಾಪುರ ಉತ್ಸವ ಉದ್ಘಾಟಿಸಲಾಗುವುದು. ಫೆ. 17 ರಿಂದ 19 ರವರೆಗೆ ಮೂರು ದಿನಗಳ ಕಾಲ ನಡೆಯುವ ಉತ್ಸವಕ್ಕೆ ಶುಕ್ರವಾರ ಸಂಜೆ 6.30ಕ್ಕೆ ಉಜಿರೆಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.
ಮಿರ್ಜಾನ ಆದಿಚುಂಚನಗಿರಿ ಶಾಖಾ ಮಠದ ನಿಶ್ಚಲಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್ ಅಧ್ಯಕ್ಷತೆ ವಹಿಸುವರು. ಗೌರವಾಧ್ಯಕ್ಷ ಉಪೇಂದ್ರ ಪೈ, ಡಾ. ಕೆ.ಶ್ರೀಧರ ವೈದ್ಯ, ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ, ಸಂಕಲ್ಪ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಬಿ.ಹೊಸೂರ, ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ಎಂ.ಪಾಟೀಲ್ ಉಪಸ್ಥಿತರಿರುವರು ಎಂದರು.

ಶುಕ್ರವಾರ ರಾತ್ರಿ ಭಟ್ಕಳದ ಜೇಂಕಾರ ಮೆಲೋಡಿಸ್ ಇವರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಖ್ಯಾತ ಗಾಯಕರಾದ ಸುಹಾನ ಸೈಯ್ಯದ್, ರಜತ್ ಹೆಗಡೆ, ಐರಾ ಆಚಾರ್ಯ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಈಗಾಗಲೇ 50-60 ಮಳಿಗೆಗೆ ಅವಕಾಶ ನೀಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವ ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಈ ವೇಳೆ ಉತ್ಸವ ಸಮಿತಿ
ಕೋಶಾಧ್ಯಕ್ಷ ವಿನಯ ಹೊನ್ನೆಗುಂಡಿ, ವೇದಿಕೆ ಸಮಿತಿ ಅಧ್ಯಕ್ಷ ರವಿಕುಮಾರ ನಾಯ್ಕ, ಸ್ವಾಗತ ಸಮಿತಿಯ ನಾಗರಾಜ ನಾಯ್ಕ, ಸಮಿತಿ ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ ಕೊಂಡ್ಲಿ, ಪ್ರಚಾರ ಸಮಿತಿಯ ಸುಧೀರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

