ಸಿದ್ಧಾಪುರ,ಫೆ.೧೭- ನಾರಾಯಣ ಗುರುಗಳ ಏಕದೇವ, ಏಕಜಾತಿ ಪರಿಕಲ್ಪನೆ,ವಸುದೈವ ಕುಟುಂಬಕಂ ಕಲ್ಪನೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಾಕಾರವಾಗುತ್ತವೆ ಎಂದು ಪ್ರತಿಪಾದಿಸಿರುವ ಕನ್ಯಾಡಿ ಶ್ರೀರಾಮ ಕ್ಷೇತ್ರದ ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸ್ವಾಸ್ಥ ಸಮಾಜಕ್ಕೆ ಇಂಥ ಚಟುವಟಿಕೆಗಳೇ ಅವಶ್ಯ ಎಂದಿದ್ದಾರೆ. ಮೂರು ದಿವಸಗಳ ಸಿದ್ಧಾಪುರ ಉತ್ಸವ ೨೦೨೩ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಸಿದ್ಧಾಪುರ ಉತ್ಸವ ಸಮೀತಿ ಗೌರವಾಧ್ಯಕ್ಷ ಉಪೇಂದ್ರ ಪೈ ಸರ್ವರನ್ನೂ ಸ್ವಾಗತಿಸಿದರು. ಅಧ್ಯಕ್ಷ ಕೆ.ಜಿ. ನಾಯ್ಕ ಹಣಜಿಬೈಲ್ ಮಾತನಾಡಿ ಸಾರ್ವಜನಿಕ ಸಹಕಾರವಿದ್ದರೆ ಇತರ ತಾಲೂಕುಗಳಂತೆ ಸಿದ್ಧಾಪುರದಲ್ಲೂ ಪ್ರತಿವರ್ಷ ನಿರಂತರವಾಗಿ ಸಿದ್ಧಾಪುರ ಉತ್ಸವ ಮಾಡಬಹುದು. ತಾಲೂಕಿನ ಜನತೆಗೆ ಈ ಉತ್ಸವ ಸಾಂಸ್ಕೃತಿಕ ಹಬ್ಬದಂತೆ ಭಾಸವಾಗಬೇಕು ಎಂದು ಆಶಿಸಿದರು.