

ನಟ ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಬಂದು 37 ವರ್ಷ: ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಹ್ಯಾಟ್ರಿಕ್ ಹೀರೋ
ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಬಣ್ಣಹಚ್ಚಿ ನಟಿಸಲು ಆರಂಭಿಸಿ ಇಂದಿಗೆ 37 ವರ್ಷವಾಗಿದೆ. ಸುದೀರ್ಘ ಪಯಣದಲ್ಲಿ 125 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಬಣ್ಣಹಚ್ಚಿ ನಟಿಸಲು ಆರಂಭಿಸಿ ಇಂದಿಗೆ 37 ವರ್ಷವಾಗಿದೆ. ಸುದೀರ್ಘ ಪಯಣದಲ್ಲಿ 125 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ, ಕೋಟ್ಯಂತರ ಅಭಿಮಾನಿಗಳನ್ನು ಅವರು ಸಂಪಾದಿಸಿದ್ದಾರೆ. ಇಷ್ಟು ವರ್ಷಗಳ ಕಾಲ ತಮಗೆ ಪ್ರೀತಿ ತೋರಿಸಿದ ಅಭಿಮಾನಿಗಳು, ಕುಟುಂಬಸ್ಥರು, ಕೋಟಿ ಕೋಟಿ ಕನ್ನಡಿಗರಿಗೆ ಶಿವರಾಜ್ಕುಮಾರ್ ಧನ್ಯವಾದ ಹೇಳಿದ್ದಾರೆ.
ಶಿವರಾಜ್ಕುಮಾರ್ ಮೊದಲು ಬಣ್ಣ ಹಚ್ಚಿದ ಸಿನಿಮಾ ‘ಆನಂದ್’. ಈ ಚಿತ್ರ ಸೆಟ್ಟೇರಿದ್ದು 1986, ಫೆ.19ರಂದು. ಶಿವಣ್ಣ ಅವರು ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ ದಿನ. ಈ ಬಗ್ಗೆ ಇಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.
‘ಕನ್ನಡ ಚಿತ್ರರಂಗಕ್ಕೆ ನಾನು ಪಾದಾರ್ಪಣೆ ಮಾಡಿ ಇಂದಿಗೆ 37 ವರ್ಷಗಳು. ಆನಂದ್ ಚಿತ್ರದ ಮೊದಲ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆನಂದ್ ಇಂದ ವೇದವರೆಗೂ ನೀವು ಕೊಟ್ಟ ಪ್ರೀತಿ ಬೆಲೆಕಟ್ಟಲಾಗದ್ದು. ನನ್ನನ್ನು ನೀವು ಕೇವಲ ಒಬ್ಬ ನಟನಾಗಿ, ಸ್ಟಾರ್ ಆಗಿ ಮಾತ್ರವಲ್ಲದೆ ನಿಮ್ಮ ಮನೆಮಗನಾಗಿ ಬೆಳೆಸಿದ್ದೀರಿ. ದೇವರ ಸ್ವರೂಪವಾಗಿರುವ ಅಭಿಮಾನಿಗಳಿಗೆ, ಮಾಧ್ಯಮ ಮಿತ್ರರಿಗೆ, ಹಿರಿಯರಿಗೆ, ಕಿರಿಯರಿಗೆ, ಸಹದ್ಯೋಗಿಗಳಿಗೆ ಹಾಗು ನನ್ನ ಇಡೀ ಕುಟುಂಬಕ್ಕೆ ಅನಂತ ವಂದನೆಗಳು’ ಎಂದು ಶಿವಣ್ಣ ಬರೆದುಕೊಂಡಿದ್ದಾರೆ.
ಶಿವರಾಜ್ಕುಮಾರ್ ಅವರ ಮೊದಲ ಸಿನಿಮಾ ‘ಆನಂದ್’ ಯಶಸ್ಸು ಕಂಡಿತು. ಈ ಚಿತ್ರದಿಂದ ಶಿವರಾಜ್ಕುಮಾರ್ ವೃತ್ತಿಜೀವನಕ್ಕೆ ಭದ್ರಬುನಾದಿ ಸಿಕ್ಕಿತು. ಅವರ ನಟನೆಯ 125ನೇ ಚಿತ್ರ ‘ವೇದ’ ಕಳೆದ ವರ್ಷಾಂತ್ಯಕ್ಕೆ ರಿಲೀಸ್ ಆಗಿ ಯಶಸ್ಸು ಕಂಡಿತು. ಈ ಚಿತ್ರವನ್ನು ಗೀತಾ ಪಿಕ್ಚರ್ಸ್ ಮೂಲಕ ನಿರ್ಮಾಣ ಮಾಡಲಾಯಿತು. (kpc)
