2017ರಲ್ಲಿ ನಡೆದ ಹೊನ್ನಾವರ ಜಿಲ್ಲೆಯಲ್ಲಿ ಕೋಮುಗಲಭೆಗೆ ಕಾರಣವಾಗಿದ್ದ ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಬಹುತೇಕ ಹಿಂದೂ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ 112 ಜನರ ಮೇಲಿನ ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಕಾರವಾರ: 2017ರಲ್ಲಿ ನಡೆದ ಹೊನ್ನಾವರ ಜಿಲ್ಲೆಯಲ್ಲಿ ಕೋಮುಗಲಭೆಗೆ ಕಾರಣವಾಗಿದ್ದ ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಬಹುತೇಕ ಹಿಂದೂ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ 112 ಜನರ ಮೇಲಿನ ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಗಲಭೆಯಲ್ಲಿ 112 ಜನರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯಲು ಸರ್ಕಾರ ಆದೇಶ ಹೊರಡಿಸಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೋಮುಗಲಭೆಗೆ ಸಂಬಂಧಿಸಿದಂತೆ 112 ಮಂದಿ ವಿರುದ್ಧ ದಾಖಲಾಗಿರುವ ಮೂರು ಪ್ರಕರಣಗಳನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.
2017ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮೇಸ್ತಾ (19) ಎಂಬ ಯುವಕ ಶವವಾಗಿ ಪತ್ತೆಯಾಗಿದ್ದ. ಡಿಸೆಂಬರ್ 8 ರಂದು ಹೊನ್ನಾವರದ ಶೆಟ್ಟಿಕೆರೆಯ ಕೆರೆಯಲ್ಲಿ ಆತನ ಮೃತದೇಹ ಕಂಡುಬಂದಿತ್ತು. ಇದಕ್ಕೆ ಕೋಮು ಬಣ್ಣ ಕಟ್ಟಿದ್ದರಿಂದ ರಾಜ್ಯದಲ್ಲಿ ಉದ್ವಿಗ್ನತೆ ಉಂಟಾಗಿತ್ತು.
ಇದೊಂದು ಕೊಲೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು, ಬಜರಂಗದಳ ಹಾಗೂ ಸ್ಥಳೀಯ ಶಾಸಕರು ಸೇರಿದಂತೆ ಬಲಪಂಥೀಯ ಸಂಘಟನೆಗಳು ಮೇಸ್ತಾ ಸಾವಿನ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಶಾಸಕ ಹಾಗೂ ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಕಾರ್ಯಕರ್ತರು, ಬಜರಂಗದಳ ಕಾರ್ಯಕರ್ತರು ಹಾಗೂ ಇತರರ ವಿರುದ್ಧವೂ ಪ್ರಕರಣ ದಾಖಲಾಗಿತ್ತು.
ಇದೀಗ, ಗಲಭೆಗೆ ಸಂಬಂಧಿಸಿದ ಎಲ್ಲಾ 112 ಜನರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಆದೇಶಿಸಿದೆ. ಕಳೆದ ವರ್ಷ, ಕೇಂದ್ರೀಯ ತನಿಖಾ ದಳ (ಸಿಬಿಐ) ಮೆಸ್ತಾ ಪ್ರಕರಣದ ಕುರಿತು ‘ಬಿ’ ರಿಪೋರ್ಟ್ ಸಲ್ಲಿಸಿತು. ಮೇಸ್ತಾ ಸಾವು ಆಕಸ್ಮಿಕ ಎಂದು ಘೋಷಿಸಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದ ನಂತರ ಅವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು ಒತ್ತಾಯಿಸಲಾಯಿತು. ನಮ್ಮ ಸರ್ಕಾರವು ಈ ಮುಗ್ಧ ಜನರಿಗೆ ನ್ಯಾಯ ಒದಗಿಸಿದೆ ಎಂದು ಭಟ್ಕಳ ಶಾಸಕ ಸುನೀಲ್ ನಾಯ್ಕ್ ಮಾಧ್ಯಮಗಳಿಗೆ ತಿಳಿಸಿದರು. ಪ್ರಕರಣದಲ್ಲಿ ದಾಖಲಾಗಿದ್ದ ಹಲವು ಮಂದಿ ನಿರಾಳರಾಗಿದ್ದಾರೆ.
ನಮ್ಮಲ್ಲಿ ಅನೇಕರನ್ನು ಪೊಲೀಸರು ಎತ್ತಿಕೊಂಡು ಹೋಗಿದ್ದಾರೆ ಕೇಸ್ ಬುಕ್ ಮಾಡಿದ್ದಾರೆ. ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಜೀವನೋಪಾಯಕ್ಕಾಗಿ ಶಿರಸಿಯಲ್ಲಿ ಪಾನ್ ಶಾಪ್ ನಡೆಸುತ್ತಿದ್ದೇನೆ. ನಾನು ಕಲ್ಲು ತೂರಾಟದಲ್ಲಿ ಭಾಗಿಯಾಗಿಲ್ಲ. ನನ್ನ ಮೇಲೆ 12 ಕೇಸುಗಳನ್ನು ಹಾಕಿ ರೌಡಿಶೀಟರ್ ಎಂದು ದಾಖಲಿಸಲಾಗಿದೆ. ನಾನು ಆರು ವರ್ಷಗಳಿಂದ ಬಳಲಿದ್ದೇನೆ. ಪ್ರತಿ ತಿಂಗಳು ಐದು ದಿನಗಳ ಕಾಲ ನಾನು ಬೆಳಿಗ್ಗೆಯಿಂದ ಸಂಜೆಯವರೆಗೆ ಸುಮ್ಮನೆ ನ್ಯಾಯಾಲಯಕ್ಕೆ ಹಾಜರಾಗುತ್ತೇನೆ ಎಂದು ಸಂತ್ರಸ್ತರಲ್ಲಿ ಒಬ್ಬರಾದ ಆನಂದ್ ಮುಡಿ ಹೇಳಿದ್ದಾರೆ.
“ಈ ಎಲ್ಲಾ ಪ್ರಕರಣಗಳನ್ನು ಡಿಸೆಂಬರ್ 12, 2017 ರಂದು ಬಸ್ಸಿಗೆ ಕಲ್ಲು ತೂರಾಟದ ಪ್ರಕರಣದ ಸಂದರ್ಭದಲ್ಲಿ ದಾಖಲಿಸಲಾಗಿದೆ, ಪ್ರಕರಣದಲ್ಲಿ ಕಾನೂನು ಅಂಶವಾಗಲೀ ಅಥವಾ ಒಂದು ಹನಿ ರಕ್ತವಾಗಲೀ ಇಲ್ಲ. ಸ್ಥಳೀಯ ಪೊಲೀಸರು ಕೇವಲ ಆಗಿನ ಸರ್ಕಾರದ ಒತ್ತಡಕ್ಕೆ ಮಣಿದು ಕೆಲಸ ಮಾಡಿದರು ಎಂದು ಸಿರಸಿ ವಕೀಲ ಸದಾನಂದ್ ಭಟ್ ತಿಳಿಸಿದ್ದಾರೆ. (kpc)