

ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭೂಮಿ ಸಾಗುವಳಿದಾರರ ಬೇಡಿಕೆಗಳಿಗೆ ಇಲ್ಲಿಯ ರಾಜಕಾರಣಿಗಳು ಸ್ಪಂದಿಸುತ್ತಿಲ್ಲವೆ? ಎನ್ನುವ ಪ್ರಶ್ನೆ ಈಗ ಹಳೆದಾದರೂ ಚಾಲ್ತಿಯಲ್ಲಿದೆ. ಮಾಜಿ ಸಂಸದ ಕರ್ಮಯೋಗಿ ಡಾ. ದಿನಕರ ದೇಸಾಯಿ ೫೦-೬೦ ವರ್ಷಗಳ ಹಿಂದೆ ಅರಣ್ಯ ಅತಿಕ್ರಮಣದಾರರ ಪರವಾಗಿ ಕಾಳಜಿವಹಿಸಿ ಹೋರಾಟ ಮಾಡಿದ್ದರು. ಅವರ ನಂತರ ಅನೇಕರು ಉತ್ತರ ಕನ್ನಡ ಜಿಲ್ಲೆಯ ಸಂಸದರು, ಕೇಂದ್ರಸಚಿವರೂ, ರಾಜ್ಯ ಸರ್ಕಾರದಲ್ಲಿ ಮಂತ್ರಿಗಳೂ ಆಗಿ ಹೋಗಿದ್ದಾರೆ.

ಆದರೆ ಎಂದೂ ಮುಗಿಯದ ಸಮಸ್ಯೆಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಪರವಾಗಿ ಸರ್ಕಾರದ ಮೂಲಕ ಯಾವ ಪ್ರಯತ್ನಗಳೂ ನಡೆದಿಲ್ಲ. ಉತ್ತರ ಕನ್ನಡ ಸಂಸದರೂ. ಕೇಂದ್ರಸಚಿವೆಯೂ ಆಗಿದ್ದ ಮಾರ್ಗರೇಟ್ ಆಳ್ವ ಅವರ ಅಧಿಕಾರದ ಅವಧಿ, ಕೈ ನಡೆಯುವ ಸಮಯದಲ್ಲಿ ಅರಣ್ಯ ಅತಿಕ್ರಮಣದಾರರ ಪರವಾಗಿ ಎಲ್ಲೂ ಮಾತನಾಡಿರುವ ದಾಖಲೆಯೂ ಇಲ್ಲ.
ಹಾಲಿ ಸಂಸದ, ಮಾಜಿ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ನಾಮಕಾವಾಸ್ಥೆ ಉತ್ತರ ಕನ್ನಡವನ್ನು ಪ್ರತಿನಿಧಿಸಿದರೂ ಜಿಲ್ಲೆಯ ಬಹುಸಂಖ್ಯಾತರು, ಬಹುಸಂಖ್ಯಾತ ಅರಣ್ಯ ಅತಿಕ್ರಮಣದಾರರಿಗೆ ಅವರ ಕೊಡುಗೆ ಶೂನ್ಯ.
ನಿರಂತರ ಆರು ಬಾರಿ ಶಾಸಕರೂ, ಸಚಿವರೂ, ವಿಧಾನಸಭಾ ಅಧ್ಯಕ್ಷರೂ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ, ಹಿರಿಯ ನಾಯಕ ಆರ್.ವಿ. ದೇಶಪಾಂಡೆ, ಶ್ರೀನಿವಾಸ್ ಪೂಜಾರಿ ಸೇರದಂತೆ ಬಹುತೇಕ ಜನಪ್ರತಿನಿಧಿಗಳಿಗೆ ಅರಣ್ಯ ಅತಿಕ್ರಮಣದಾರರ ಸಮಸ್ಯೆಯಾಗಿ ಕಾಣಲೇ ಇಲ್ಲ.
ಕಳೆದ ಮೂರು ದಶಕಗಳಿಂದ ಅರಣ್ಯ ಅತಿಕ್ರಮಣದಾರರ ಪರವಾಗಿ ಹೋರಾಡುತ್ತಿರುವ ರವೀಂದ್ರ ನಾಯ್ಕರ ಪ್ರಯತ್ನ ಕೂಡಾ ರಾಜಕೀಯ ಪ್ರೇರಿತ ಎನ್ನುವ ಆರೋಪಗಳಿವೆ. ಆದರೆ ಯಾರಿಗೂ ಬೇಡವಾದ ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಪರವಾಗಿ ನಿರಂತರ ಹೋರಾಟ ಕಾಯ್ದುಕೊಂಡಿರುವ ರವೀಂದ್ರರನ್ನು
ಬಿಟ್ಟರೆ ಉಳಿದವರ ಡೊಂಬರಾಟದ ನಡುವೆ ಅರಣ್ಯ ಅತಿಕ್ರಮಣದಾರರ ಸ್ಥಿತಿ ಪ್ರತಿಬಾರಿ ಚುನಾವಣೆಯಲ್ಲಿ ಮೋಸಹೋಗುವ ಮತದಾರರ ಪರಿಸ್ಥಿತಿಯಂತಾಗಿದೆ. ಬೆಟ್ಟಭೂಮಿ ಪಟ್ಟಾ, ಹಕ್ಕಿನ ಬಗ್ಗೆ ಸದನದ ಒಳಗೂ ಹೋರಗೂ ಹೋರಾಡುವ ಪಟ್ಟಭದ್ರರು ಅರಣ್ಯ ಅತಿಕ್ರಮಣದಾರರನ್ನು ಉಪೇಕ್ಷಿಸುತ್ತಿರುವುದು ಮೇಲ್ಜಾತಿ ರಾಜಕಾರಣದ ಪ್ರಮುಖ ತಂತ್ರ ಎನ್ನುವ ವಿಶ್ಲೇಶಣೆ ಸತ್ಯವಲ್ಲ ಎನ್ನುವಂತಿಲ್ಲ.
