

ಸಿದ್ದಾಪುರ:ತಾಲೂಕಿನ ಹಿರೇಹದ್ದದಲ್ಲಿ ಆಧಾರ ಷಡ್ಜ ಶಾಸ್ತ್ರೀಯ ಸಂಗೀತದ ಅಧ್ಯಯನ ಮತ್ತು ಅಧ್ಯಾಪನಕ್ಕಾಗಿ ಆರಂಭಿಸಿದ ಗುರುಕುಲದ ನೂತನ ಕಟ್ಟಡದ ಉದ್ಘಾಟನೆ ಮತ್ತು ಪರಂಪರಾ ಸಂಗೀತ ಕಾರ್ಯಕ್ರವನ್ನು ಖ್ಯಾತ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿ ಉದ್ಘಾಟಿಸಿದರು ನಂತರ ಪ್ರಸ್ತುತಗೊಂಡ ಸಂಗೀತ ಕಾರ್ಯಕ್ರಮ ಕಲಾಸಕ್ತರ ಮೆಚ್ಚುಗೆಗಳಿಸಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖ್ಯಾತ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿ ಮಾತನಾಡಿ ಗುರುಶಿಷ್ಯರ ಪರಂಪರೆ ಬೆಳೆಯಬೇಕು. ಅಧ್ಯಯನ ಹಾಗೂ ಅಧ್ಯಾಪನ ಒಟ್ಟೊಟ್ಟಿಗೆ ನಡೆಯಬೇಕು. ನಾನು ಹಿಂದೆ ಮಾಡಿರುವ ಅಧ್ಯಯನ ಹಾಗೂ ಅಧ್ಯಾಪನದಂತೆ ವಿನಾಯಕ ಹೆಗಡೆ ಹಿರೇಹದ್ದ ಮಾಡುತ್ತಿರುವುದು ಶ್ಲಾಘನೀಯ. ಯಾವುದೇ ಕಲೆಗೆ ಪ್ರೋತ್ಸಾಹ ನೀಡುವವರು ಬೇಕು. ಪ್ರೋತ್ಸಾಹ ಇದ್ದಾಗ ಮಾತ್ರ ಕಲೆ ಅರಳುತ್ತದೆ.ಕಲಾವಿದ ತಯಾರಾಗುವುದು ಬೇರೆ, ಹೆಸರುಗಳಿಸುವುದು ಬೇರೆ. ಕಲಾವಿದರಿಗೆ ಅವಕಾಶಗಳು ಸಿಗಬೇಕು.ಗುರುಕುಲದ ಮೂಲಕ ಕಲಿಸುವುದರಿಂದ ಕಲಿಸುವವನಿಗೂ ಅಧ್ಯಯನವಾಗುತ್ತದೆ. ಗುರುಕುಲ ಮಕ್ಕಳಲ್ಲಿ ಕಲಿಯುವ ಆಸಕ್ತಿಯನ್ನು ಮೂಡಿಸಲಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎಸ್.ಹೆಗಡೆ ಕವಲಕೊಪ್ಪ ವಹಿಸಿದ್ದರು.
ಪತ್ರಕರ್ತ ಅಶೋಕ ಹಾಸ್ಯಗಾರ, ಶಿರಸಿಯ ಪ್ರಗತಿ ಟ್ರೇಡರ್ಸ್ನ ಕೆ. ಬಿ. ಲೋಕೇಶ ಹೆಗಡೆ, ಡಾ.ಯುವರಾಜ್ ಆರ್. ಪಿ. ಹೊನ್ನಾವರ, ಹೆಗ್ಗರಣಿ ಶಿಕ್ಷಣ ಸೇವಾ ಸಮಿತಿ ಅಧ್ಯಕ್ಷ ಎನ್.ಆರ್.ಭಟ್ಟ, ಹೆಗ್ಗರಣಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಲ್.ಭಟ್ಟ ಉಂಚಳ್ಳಿ ಉಪಸ್ಥಿತರಿದರು.
ಇದೇ ಸಂದರ್ಭದಲ್ಲಿ ವಿನಾಯಕ ಹೆಗಡೆ ಹಿರೇಹದ್ದ ಹಾಗೂ ರಂಜನಾ ಹೆಗಡೆ ದಂಪತಿ ಅವರು ಪಂ.ಗಣಪತಿ ಭಟ್ ಅವರಿಗೆ ಗುರುಗೌರವ ಸಲ್ಲಿಸಿದರು.
ಎಸ್.ವಿ.ಹೆಗಡೆ ಹಿರೇಹದ್ದ ಸ್ವಾಗಿತಿಸಿದರು.ಆಧಾರ ಷಡ್ಜದ ಮುಖ್ಯಸ್ಥ ವಿನಾಯಕ ಹೆಗಡೆ ಹಿರೇಹದ್ದ ಪ್ರಾಸ್ತಾವಿಕ ಮಾತನಾಡಿದರು.ಗಿರಿಧರ ಕಬ್ನಳ್ಳಿ ನಿರ್ವಹಿಸಿದರು.
ನಂತರ ನಡೆದ ಪರಂಪರಾ ಸಂಗೀತ ಕಾರ್ಯಕ್ರಮದಲ್ಲಿ ಪಂಡಿತ್ ಗಣಪತಿ ಭಟ್ ಹಾಸಣಗಿ, ವಿನಾಯಕ ಹೆಗಡೆ ಹಿರೇಹದ್ದ ಇವರ ಗಾಯನ ಸಂಗೀತಾಸಕ್ತರಿಗೆ ರಸದೌತಣ ನೀಡಿತು.ತಬಲಾದಲ್ಲಿ ಪಂಡಿತ್ ಗೋಪಾಲಕೃಷ್ಣ ಹೆಗಡೆ, ಸಂವಾದಿನಿಯಲ್ಲಿ ಸತೀಶ ಭಟ್ಟ ಸಹಕರಿಸಿದರು. ಇದಕ್ಕೂ ಮೊದಲು ನಡೆದ ಸಂಗೀತ ಕಾರ್ಯಕ್ರಮದಲ್ಲಿ ಯುವ ಪ್ರತಿಭೆಗಳಾದ ಆರ್ಯ ಅವರ ಗಾಯನ, ಅನೀಶ್ ಹೆಗಡೆ ಅವರ ತಬಲಾ ಹಾಗೂ ಚಂದನ ಹೆಗಡೆ ಅವರ ಹಾರ್ಮೋನಿಯಂ ಸಾಥ್ ಮೆಚ್ಚುಗೆಗಳಿಸಿತು.

