

ಬೆಂಗಳೂರು: ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದ್ದು, 2023ರ ಏಪ್ರಿಲ್ 1ರಿಂದ ನೂತನ ಆದೇಶ ಜಾರಿಯಾಗಲಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದ್ದು, 2023ರ ಏಪ್ರಿಲ್ 1ರಿಂದ ನೂತನ ಆದೇಶ ಜಾರಿಯಾಗಲಿದೆ ಎಂದು ತಿಳಿದುಬಂದಿದೆ.
ಸರ್ಕಾರದ ಆದೇಶದಲ್ಲಿ 2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ತೀರ್ಮಾನಿಸಲಾಗಿದೆ. 1ನೇ ಏಪ್ರಿಲ್ 2023ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇಕಡಾ 17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲಾಗಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಹಣಕಾಸು ಇಲಾಖೆಯಿಂದ ಅಧಿಕೃತ ಆದೇಶ ಪ್ರಕಟಿಸಲಾಗಿದೆ. ಇದರ ಅನ್ವಯ ಸರ್ಕಾರಿ ನೌಕರರು, ಸ್ಥಳೀಯ ಸಂಸ್ಥೆ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆ, ವಿವಿ ಬೋಧಕೇತರ ಸಿಬ್ಬಂದಿ, ಬೋಧಕೇತರ ಸಿಬ್ಬಂದಿಗೆ ಮಧ್ಯಂತರ ಪರಿಹಾರ ಮಂಜೂರು ಮಾಡಲಾಗಿದೆ.
ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಸರ್ಕಾರ ಈ ಅಧಿಕೃತ ಆದೇಶ ಹೊರಡಿಸಿದೆ. ಮೂಲವೇತನವೆಂದರೆ ಸ್ಥಗಿತ ವೇತನ ಬಡ್ತಿ, ವೈಯಕ್ತಿಕ ವೇತನ ಜೊತೆಗೆ ಹೆಚ್ಚುವರಿ ವೇತನ ಬಡ್ತಿ ಸೇರಿರುತ್ತದೆ. ಸರ್ಕಾರದ ಆದೇಶದಿಂದ ಮೂಲವೇತನದ ಶೇ.17ರಷ್ಟು ಮಧ್ಯಂತರ ಪರಿಹಾರ ಮಂಜೂರು ಮಾಡಲು ತೀರ್ಮಾನಿಸಲಾಗಿದೆ.
ಅದೇಶದಲ್ಲೇನಿದೆ?
2018 ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಏಪ್ರಿಲ್ 1 , 2023 ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇ 17 ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಸರ್ಕಾರ ಹರ್ಷಿಸುತ್ತದೆ.
ಮಧ್ಯಂತರ ಪರಿಹಾರದ ಉದ್ದೇಶಕ್ಕಾಗಿ ಮೂಲ ವೇತನ ಎಂದರೆ ಸರ್ಕಾರಿ ನೌಕರನು ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ವೇತನ ಮತ್ತು ಅದರಲ್ಲಿ ಅ- ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಅವನಿಗೆ ಸ್ಥಗಿತ ವೇತನ ಬಡ್ತಿಯನ್ನು ನೀಡಲಾಗಿದ್ದರೆ, ಆ ಸ್ಥಗಿತ ವೇತನ ಬಡ್ತಿ.
ಆ- 2018 ರ ಕರ್ನಾಟಕ ನಾಗರೀಕ ಸೇವಾ ( ಪರಿಷ್ಕೃತ ವೇತನ) ನಿಯಮಗಳ ನಿಯಮ 3 (ಸಿ) ಯನ್ನು ಓದಿಕೊಂಡು 7 ನೇ ನಿಯಮದ (3) ನೇ ಉಪ ನಿಯಮದ ಮೇರೆಗೆ ಅವನಿಗೆ ನೀಡಲಾದ ವೈಯಕ್ತಿಕ ವೇತನ ಯಾವುದಾದರೂ
ಇದ್ದರೆ ಆ ವೈಯಕ್ತಿಕ ವೇತನ ಇ- ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಅವನಿಗೆ ಮಂಜೂರು ಮಾಡಲಾಗಿರುವ ಹೆಚ್ಚುವರಿ ವೇತನ ಬಡ್ತಿ ಯಾವುದಾದರೂ ಇದ್ದಲ್ಲಿ ಅವುಗಳು ಸೇರುತ್ತವೆ ಎಂದು ಉಲ್ಲೇಖ ಮಾಡಲಾಗಿದೆ.
2 ಆದೇಶ ಹೊರಡಿಸಿದ ಸರ್ಕಾರ: ಷಡಕ್ಷರಿ
ಈ ನಡುವೆ ರಾಜ್ಯ ಸರ್ಕಾರ 2 ಆದೇಶ ಹೊರಡಿಸಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ 2 ಆದೇಶವನ್ನು ಹೊರಡಿಸಿದೆ. ಸರ್ಕಾರಿ ನೌಕರರ ವೇತನ ಶೇಕಡಾ 17ರಷ್ಟು ಹೆಚ್ಚಳ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆ ಬಗ್ಗೆ ಪರಿಶೀಲನೆ ಸಂಬಂಧ ಆದೇಶ ಹೊರಡಿಸಿದೆ. ಎನ್ಪಿಎಸ್ ನಿವೃತ್ತ ನೌಕರರು ಸೇರಿದಂತೆ 15 ಲಕ್ಷ ನೌಕರರಿಗೆ ಯೋಜನೆ ಅನ್ವಯವಾಗುತ್ತದೆ ಎಂದು ಹೇಳಿದರು. (kpc)
