
ಉತ್ತರಕನ್ನಡ ಜಿಲ್ಲೆಯ ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್ ಅವರ ಆರೋಪಗಳು ಸಾಬೀತಾಗಿದ್ದೇ ಆದರೆ, ರಾಜಕೀಯ ತೊರೆಯುತ್ತೇನೆಂದು ಮಾಜಿ ಶಾಸಕ ಸತೀಶ್ ಸೈಲ್ ಅವರು ಹೇಳಿದ್ದಾರೆ.

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್ ಅವರ ಆರೋಪಗಳು ಸಾಬೀತಾಗಿದ್ದೇ ಆದರೆ, ರಾಜಕೀಯ ತೊರೆಯುತ್ತೇನೆಂದು ಮಾಜಿ ಶಾಸಕ ಸತೀಶ್ ಸೈಲ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹೂಡಿಕೆ ಮಾಡಿರುವ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ರೂಪಾಲಿ ನಾಯ್ಕ್ ಅವರು ಆರೋಪಿಸಿದ್ದಾರೆ. ಆದರೆ, ಕಂಪನಿಗು ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದರು, ಈ ಕುರಿತು ಕೆಲ ದಾಖಲೆಗಳನ್ನು ಪ್ರದರ್ಶಿಸಿದರು.
ಇದು ನನ್ನ ಕಂಪನಿಯಲ್ಲ. ಇದನ್ನು ಸಾಬೀತುಪಡಿಸಲು ಪ್ಯಾನ್ ಸಂಖ್ಯೆಗಳೂ ಕೂಡ ನನ್ನ ಬಳಿ ಇವೆ. ಇದು ಆನ್‌ಲೈನ್‌ನಲ್ಲಿಯೂ ಲಭ್ಯವಿದೆ ಎಂದು ತಿಳಿಸಿದ್ದಾರೆ.
ರೂಪಾಲಿ ನಾಯ್ಕ್ ಅವರು, ನಾನು ಹೂಡಿಕೆ ಮಾಡಿರುವ ಕಂಪನಿಗೆ 6.5 ಕೋಟಿ ರೂ.ಗಳ ಗುತ್ತಿಗೆ ನೀಡಲಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಈ ಆರೋಪವನ್ನು ಸಾಬೀತುಪಡಿಸಲಿ. ಆರೋಪ ಸಾಬೀತಾಗಿದ್ದೇ ಆದರೆ, ರಾಜಕೀಯ ತ್ಯಜಿಸುತ್ತೇನೆ ಎಂದು ಸವಾಲು ಹಾಕಿದರು.
ಕಂಪನಿಗೆ ಒಂದು ರೂಪಾಯಿಯಾದರೂ ಬಂಡವಾಳ ಹೂಡಿರುವುದು ಕಂಡು ಬಂದರೆ ನಾನು ರಾಜಕೀಯ ತ್ಯಜಿಸುತ್ತೇನೆ, ವಿಫಲವಾದರೆ ಶಾಸಕಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕು ಎಂದರು.
ಇದೇ ವೇಳೆ ಮದ್ಯವ್ಯಸನಿಯಾಗಿರುವ ಹಿನ್ನೆಲೆಯಲ್ಲಿ ಲಿವರ್ ಹಾಳಾಗಿದೆ ಎಂಬ ಹೇಳಿಕೆಗಳನ್ನೂ ಸತೀಶ್ ಅವರು ಖಂಡಿಸಿದರು. (kpc)
