

ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಾನೂ ರಾಜಕೀಯ ಪ್ರಾರಂಭಿಸುತ್ತೇನೆ ಎಂದು ಶಿರಸಿಯಲ್ಲಿ ಪ್ರಕಟಿಸಿದ ಮಾರನೇ ದಿನವೇ ಸಿದ್ಧಾಪುರದಲ್ಲಿ ಬೇಡ್ಕಣಿಯಲ್ಲಿ ನಡೆದ ರಸ್ತೆ ಕಾಮಗಾರಿ ಶಂಕುಸ್ಥಾಪನೆ ವೇಳೆ ಸಾರ್ವಜನಿಕರ ವಿರೋಧ ಎದುರಿಸಿದ್ದಾರೆ.
ಮೂರು ಬಾರಿ ಅಂಕೋಲಾ ಕ್ಷೇತ್ರ, ಮೂರು ಬಾರಿ ಶಿರಸಿ ಒಟ್ಟೂ ಆರು ಬಾರಿ ವಿಧಾನಸಭಾ ಅಧ್ಯಕ್ಷರಾಗಿ ಆಯ್ಕೆಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರು, ಸಚಿವರು, ವಿಧಾನಸಭಾ ಅಧ್ಯಕ್ಷರಾಗಿ ಹೆಸರು ಮಾಡಿದವರು. ಆದರೆ ಈ ಬಾರಿ ಅವರ ನಾಗಾಲೋಟಕ್ಕೆ ಕಮಲ ಪಡೆಯಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ.
ಸಿದ್ಧಾಪುರದ ಸ್ಥಳೀಯ ಬಿ.ಜೆ.ಪಿ. ಚುನಾಯಿತ ಪ್ರತಿನಿಧಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರ ನೇರ ವಿರೋಧ ಮತ್ತು ಸ್ವಪಕ್ಷ,ಮುಖಂಡರುಗಳ ವಿರೋಧದಿಂದ ವಿಚಲಿತರಾದ ವಿಧಾನಸಭಾ ಅಧ್ಯಕ್ಷರಿಗೆ ಬೇಡ್ಕಣಿಯಲ್ಲಿ ವ್ಯಕ್ತವಾದ ವಿರೋಧ ನಿರೀಕ್ಷಿತ ಎನ್ನಲಾಗುತ್ತಿದೆ.
ಪ್ರತಿವರ್ಷದ ಯುಗಾದಿ ಉತ್ಸವ, ಕಾರ್ಯಕ್ರಮಗಳಲ್ಲಿ ಅನಾಯಾಸವಾಗಿ ಸನಾತನ ವೈದಿಕತೆಯನ್ನು ತುರುಕಿ ರಾಜಕೀಯ ಲಾಭ ಪಡೆಯುತಿದ್ದ ಉತ್ತರ ಕನ್ನಡ ಸಂಸದ ಮತ್ತು ಶಿರಸಿ ಶಾಸಕರು ಈ ಬಾರಿ ಸಿದ್ಧಾಪುರದ ಯುಗಾದಿ ಉತ್ಸವದಲ್ಲಿ ಕೂಡಾ ವೇದಿಕೆ ಏರಲು ವಿರೋಧ ವ್ಯಕ್ತವಾಗಿದೆ.
ಬಿ.ಜೆ.ಪಿ. ಪ್ರೇರಿತ ವೈದಿಕ ಸಂಘಟನೆಗಳು, ಹಿಂದೂ ಹೆಸರಿನ ರಾಜಕೀಯ ಲಾಭಾಕಾಂಕ್ಷಿಗಳೇ ಮುಂದೆ ನಿಂತು ಪ್ರತಿವರ್ಷ ಸಿದ್ಧಾಪುರದಲ್ಲಿ ನಡೆಸುತಿದ್ದ ಯುಗಾದಿ ಉತ್ಸವದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆಯವರನ್ನು ಆಹ್ವಾನಿಸುವ ಬಗ್ಗೆ ಚರ್ಚೆಯಾಗಿ ಬಿ.ಜೆ.ಪಿ.ಯ ಹಿರಿಯ ನಾಯಕರೊಬ್ಬರು ಮತ್ತು ಕಾಗೇರಿಯವರ ಆಪ್ತ ಉದ್ಯಮಿಗಳ ನಡುವೆ ವಾಗ್ವಾದವಾಗಿ ಅಂತಿಮವಾಗಿ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಸೇರಿದಂತೆ ಯಾವುದೇ ರಾಜಕಾರಣಿಗಳು ಯುಗಾದಿ ಉತ್ಸವದ ವೇದಿಕೆಯ ವಿಶೇಶ ಆಹ್ವಾನಿತರಾಗುವುದು ಬೇಡ ಎಂದು ತೀರ್ಮಾನವಾಗಿ ಶಾಸಕರು ಸಾಮಾನ್ಯ ಆಹ್ವಾನಿತರಾಗುವಂತಾಗಿದೆ.
ಈ ಎಲ್ಲಾ ಬೆಳವಣಿಗಳ ಹಿನ್ನೆಲೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಾರಿ ಚುನಾವಣೆ ಎದುರಿಸುವುದಿಲ್ಲ, ಸ್ಫರ್ಧಿಸುವುದಾದರೂ ಅನ್ಯ ಕ್ಷೇತ್ರಕ್ಕೆ ವಲಸೆ ಹೋಗುತ್ತಾರೆ ಎನ್ನುವ ವದಂತಿಗಳಿಗೆ ಪುಷ್ಠಿ ದೊರೆತಿದೆ. ಆದರೆ ಈ ಬೆಳವಣಿಗಳ ಬಗ್ಗೆ ತುಟಿ ಬಿಚ್ಚದ ಕಾಗೇರಿ ಈ ಬಾರಿಯೂ ನಾನೇ ಶಿರಸಿ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಎಂದು ಹೇಳಿದ್ದಾರೆ. ಆದರೆ ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಕಾಗೇರಿಯವರಿಗೆ ಶಿರಸಿ ಕ್ಷೇತ್ರದಲ್ಲಿ ವಿರೋಧ, ಅಪಸ್ವರಗಳೇ ಹೆಚ್ಚಾಗಿವೆ. ಈ ನಡುವೆ ಉಪೇಂದ್ರ ಪೈ ಆರ್ಭಟ ಕಾಂಗ್ರೆಸ್ ನವರಿಗಿಂತ ಹೆಚ್ಚು ಬಿ.ಜೆ.ಪಿ.ಯವರನ್ನು ಕಂಗೆಡಿಸಿದೆ ಎನ್ನಲಾಗುತ್ತಿದೆ. ಒಟ್ಟಾರೆ ಕಾಗೇರಿ ಈ ಬಾರಿ ಚುನಾವಣೆ ಘೋಷಣೆ ಮೊದಲೇ ಸ್ವಕ್ಷೇತ್ರದಲ್ಲಿ ವ್ಯಾಪಕ ವಿರೋಧ ಎದುರಿಸುತ್ತಿರುವುದು ದಿನದಿಂದ ದಿನಕ್ಕೆ ಸ್ಫಷ್ಟವಾಗುತ್ತಿದೆ.
