

ವೇತನ ಹೆಚ್ಚಿಸುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ನೌಕರರ ಸಂಘ ನೀಡಿದ ಗಡುವು ಇಂದಿಗೆ ಅಂತ್ಯವಾಗಿ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗದಿದ್ದಾಗ ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದರು.

ಬೆಂಗಳೂರು: ವೇತನ ಹೆಚ್ಚಿಸುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ನೌಕರರ ಸಂಘ ನೀಡಿದ ಗಡುವು ಇಂದಿಗೆ ಅಂತ್ಯವಾಗಿ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗದಿದ್ದಾಗ ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದರು.
ನೌಕರರ ಮುಷ್ಕರ ಆರಂಭಕ್ಕೆ ಮುನ್ನ ಇಂದು ರಾಜ್ಯ ಸರ್ಕಾರ ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಾಂಗಳ (ESCOM) ನೌಕರರ ವೇತನ ಪರಿಷ್ಕರಣೆ ಮಾಡಿದೆ. 2022ರ ಏಪ್ರಿಲ್ನಿಂದ ಅನ್ವಯವಾಗುವಂತೆ, ಈಗಿರುವ ವೇತನದ ಮೇಲೆ ಶೇಕಡಾ 20ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಇಂಧನ ಖಾತೆ ಸಚಿವ ಸುನಿಲ್ ಕುಮಾರ್ ಕಾರ್ಕಳ ತಿಳಿಸಿದ್ದಾರೆ. ಈ ಹಿನ್ನೆಲೆ ಕೆಪಿಟಿಸಿಎಲ್ ನೌಕರರು ನಾಳೆಯ ಮುಷ್ಕರನ್ನು ವಾಪಸ್ ಪಡೆದಿದ್ದಾರೆ.

ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕರೆ ನೀಡಿದ್ದ ಕೆಪಿಟಿಸಿಎಲ್ ನೌಕರರ ಸಂಘ: ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳ ನೌಕರರು ಮತ್ತು ಅಧಿಕಾರಿಗಳ ವೇತನ ಬೇಡಿಕೆ ಪರಿಷ್ಕರಣೆ ಆಗಲೇಬೇಕು. ಕಳೆದ ವರ್ಷ ಏಪ್ರಿಲ್ ನಿಂದ ಪೂರ್ವನ್ವಯ ಆಗುವಂತೆ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಬೇಕು ಎಂದು ಬೇಡಿಕೆ ಇಟ್ಟಿದ್ದರು.
ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸದಿದ್ದಾಗ ಮುಷ್ಕರಕ್ಕೆ ಮುಂದಾಗಿದ್ದರು. KPTCL ನೌಕರರು ರಾಜ್ಯ ಸರ್ಕಾರಕ್ಕೆ ನೀಡಿದ 14 ದಿನಗಳ ಗಡುವು ಇಂದಿಗೆ ಮುಕ್ತಾಯವಾಗಿತ್ತು. ಇದರಿಂದ ನಾಳೆಯಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲು ಕೆಪಿಟಿಸಿಎಲ್ ನೌಕರರ ಸಂಘ ಕರೆ ಕೊಟ್ಟಿತ್ತು. ಈ ಹಿನ್ನೆಲೆ ಸುಮಾರು 50 ಸಾವಿರ ನೌಕರರು ನಾಳೆಯ ಮುಷ್ಕರದಲ್ಲಿ ಭಾಗಿಯಾಗಲಿದ್ದರು.
