

ಸಿದ್ಧಾಪುರ,ಮಾ೨೦, ಇಲ್ಲಿಯ ಅವರಗುಪ್ಪಾ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪೂರ್ಣಿಮಾ ನಾಯ್ಕ ಕಳೆದುಕೊಂಡಿದ್ದ ಮೊಬೈಲ್ ಮತ್ತು ಬಂಗಾರವಿದ್ದ ಚೀಲವೊಂದನ್ನು ಶೀಘ್ರ ಪತ್ತೆ ಹಚ್ಚಿದ ಪೊಲೀಸರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇಂದು ಬೆಳಿಗ್ಗೆ ೧೦ ಗಂಟೆಯ ಸುಮಾರಿಗೆ ಕಾನಗೋಡಿನಿಂದ ಅವರಗುಪ್ಪಾಕ್ಕೆ ತೆರಳುವ ಮಾರ್ಗದಲ್ಲಿ ಬಳ್ಳಟ್ಟೆ ಬಳಿ ಪೂರ್ಣಿಮಾ ನಾಯ್ಕ ತಮ್ಮ ಕೈ ಚೀಲ ಕಳೆದುಕೊಂಡಿದ್ದರು. ಚೀಲ ಕಳೆದ ಕೆಲವು ಸಮಯದಲ್ಲಿ ಸಿದ್ಧಾಪುರ ಪೊಲೀಸರಿಗೆ ದೂರು ನೀಡಿದ ಪೂರ್ಣಿಮಾ ತಾನು ಕಳೆದುಕೊಂಡ ಚೀಲದಲ್ಲಿ ತನ್ನ ಮೊಬೈಲ್ ಮತ್ತು ೭ ತೊಲೆಯ ಸುಮಾರು ನಾಲ್ಕು ಲಕ್ಷ ಬೆಲೆಬಾಳುವ ಚಿನ್ನದ ಸರ ಕಳೆದುಕೊಂಡ ಬಗ್ಗೆ ದೂರು ನೀಡಿದರು. ಶೀಘ್ರ ಕಾರ್ಯಪ್ರವೃತ್ತರಾದ ಸಿದ್ಧಾಪುರ ಪೊಲೀಸ್ ಸಿಬ್ಬಂದಿಗಳು ಸೊರಬಾ ಬಳಿ ಇದ್ದ ಈ ಚೀಲದೊಂದಿಗೆ ಮೊಬೈಲ್ ಮತ್ತು ಚಿನ್ನದ ಸರವನ್ನು ಪತ್ತೆ ಮಾಡಿ ಅಂಗನವಾಡಿ ಕಾರ್ಯಕರ್ತೆಗೆ ನೀಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪನಿರೀಕ್ಷಕರಾದ ಮಹಾಂತೇಶ್ ಕಂಬಾರ್, ಮಲ್ಲಿಕಾರ್ಜುನ ಕೊರಾಣಿ ಸಿಬ್ಬಂದಿಗಳಾದ ರಮೇಶ್, ಉದಯಮೇಸ್ತಾ, ಸಂಗೀತಾ ಕಾನಡೆ ಪಾಲ್ಗೊಂಡಿದ್ದರು. ಸಿಪಿಐ ಕುಮಾರ ಕೆ. ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆ ಬಗ್ಗೆ ಸ್ಥಳೀಯರು ಪ್ರಶಂಸಿಸಿದ್ದಾರೆ.

