

ಉತ್ತರ ಕನ್ನಡ ಜಿಲ್ಲೆ ಕಾಂಗ್ರೆಸ್ ನ ಭದ್ರಕೋಟೆ ಎನ್ನಲಾಗುತಿತ್ತು. ಜನತಾದಳದ ರಾಮಕೃಷ್ಣ ಹೆಗಡೆ ಜಿಲ್ಲೆಯವರಾಗಿ ಜನತಾದಳದ ನೇತೃತ್ವ ವಹಿಸಿದಾಗಲೂ ಜಿಲ್ಲೆಯಲ್ಲಿ ಕಾಂಗ್ರೆ ಸ್ ಪ್ರಾಬಲ್ಯವಿತ್ತು. ಆದರೆ ಅದನ್ನು ಕಸಿದು ಕಳೆದೊಂದು ದಶಕದೀಚೆಗೆ ಉತ್ತರ ಕನ್ನಡ ಬಿ.ಜೆ.ಪಿ. ಮಯವಾಗಿತ್ತು. ಹೀಗೆ ಲಾಗಾಯ್ತಿನ ಕಾಂಗ್ರೆಸ್ ಭದ್ರಕೋಟೆ, ಬಿ.ಜೆ.ಪಿಯ ಭದ್ರಕೋಟೆ ಎನ್ನಲಾಗುತಿದ್ದ ಉಕ್ಕಿನ ಕೋಟೆಗೆ ಜಾತ್ಯಾತೀತ ಜನತಾದಳ ಲಗ್ಗೆ ಹಾಕುವ ಪ್ರಯತ್ನ ಮಾಡಿದೆ.
ಜಿಲ್ಲೆಯ ಬಹುಸಂಖ್ಯಾತರಿಗೆ ಟಿಕೇಟ್ ತಪ್ಪಿಸಿ ಅಲ್ಪಸಂಖ್ಯಾತ ಶ್ರೀಮಂತರನ್ನು ಜನ ಪ್ರತಿನಿಧಿಗಳನ್ನಾಗಿಸುವ ಕಾಂಗ್ರೆಸ್, ಬಿ.ಜೆ.ಪಿ.ಷಡ್ಯಂತ್ರಕ್ಕೆ ಪ್ರತಿತಂತ್ರ ಹೂಡಿರುವ ಜೆ.ಡಿ.ಎಸ್. ಈ ಬಾರಿ ಮೊಟ್ಟಮೊದಲ ಬಾರಿ ಜಿಲ್ಲೆಯ ದೊಡ್ಡ ಮತದಾರರಾದ ನಾಮಧಾರಿಗಳಿಗೆ ಮೂರು ಕ್ಷೇತ್ರ ಮೀಸಲಿಟ್ಟಿದೆ. ಇವುಗಳಲ್ಲಿ ಭಟ್ಕಳ. (ಹಳಿಯಾಳ) ಕುಮಟಾಗಳಲ್ಲಿ ಜಾ.ದಳ ಗೆಲ್ಲುವ ನಿರೀಕ್ಷೆ ಮೂಡಿಸಿದೆ.
ಕಾಂಗ್ರೆಸ್ ನಿಂದ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಎಸ್. ಎಲ್. ಘೊಟ್ನೇಕರ್ ಹಳಿಯಾಳದಲ್ಲಿ ಬಹುಸಂಖ್ಯಾತ ಮರಾಠರ ಪ್ರತಿನಿಧಿಯಾಗಿ ಜೆ.ಡಿ.ಎಸ್. ನಿಂದ ಕಣಕ್ಕಿ ಳಿದಿದ್ದಾರೆ. ಹಳಿಯಾಳದಿಂದ ಘೊಟ್ನೇಕರ್, ಕಾರವಾರದಿಂದ ಅಸ್ನೋಟಿಕರ್ ಸ್ಪರ್ಧಿಸಿದರೆ ಜಿಲ್ಲೆಯಲ್ಲಿ ಬಹುಸಂಖ್ಯಾತರಿಗೆ ಪ್ರಾತಿನಿಧ್ಯ ನೀಡಿರುವ ಜಾದಳ ಮತೀಯ ಅಲ್ಫಸಂಖ್ಯಾತರು ಮತ್ತು ಜಿಲ್ಲೆಯ ಬಹುಸಂಖ್ಯಾತರ ಒಲುವು ಗಳಿಸಿದಂತಾಗುತ್ತದೆ. ಹೀಗಾದರೆ ಬಹುಸಂಖ್ಯಾತರ ವಿರೋಧಿ ರಾಜಕಾರಣ ಮಾಡುವ ಮತಾಂಧ ಬಿ.ಜೆ.ಪಿ. ಮತ್ತು ಮುದಿ ಕಾಂಗ್ರೆಸ್ ಗಳ ನಡುವೆ ಜಾದಳ ಬಹುಜನರ ಆಯ್ಕೆಯಾಗುವ ಸಾಧ್ಯತೆ ಇದೆ.
ಈ ಸ್ಥಿತಿ, ಹೊಸ ಪರಿಸ್ಥಿತಿಯಲ್ಲಿ ಶಿರಸಿ ಕ್ಷೇತ್ರದಲ್ಲಿ ಹುರಿಯಾಳುಗಳಾಗಿರುವ ಬಹುತೇಕರು ಭೀಮಣ್ಣ ಈ ಸಾರಿ ಕಾಂಗ್ರೆಸ್ ಅಭ್ಯರ್ಥಿಯಾದಿದ್ದರೆ ಸಾಕು ಎನ್ನುತಿದ್ದಾರಂತೆ!
ಕಳೆದ ಮೂರು ದಶಕಗಳಲ್ಲಿ ಭೀಮಣ್ಣ ಗಳಿಸಿರುವ ಮೌಲ್ಯವಿದು. ಶಿರಸಿ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಎನ್ನಲಾಗುವ ಹಾಲಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಂಗ್ರೆಸ್ ನಿಂದ ಯಾರೇ ಅಭ್ಯರ್ಥಿಯಾದರೂ ತೊಂದರೆ ಇಲ್ಲ, ಭೀಮಣ್ಣರಿಗೆ ಟಿಕೇಟ್ ಸಿಗದಿದ್ದರೆ ತಮಗೇ ಅನುಕೂಲ ಎಂದು ಕ್ಷೇತ್ರ ಬದಲಾವಣೆಯ ಬಗ್ಗೆ ಚಿಂತಿಸುತ್ತಿರುವ (ಕಾಗೇರಿ) ಆತ್ಮೀಯರೊಂದಿಗೆ ಹೇಳಿಕೊಳ್ಳುತಿದ್ದಾರೆ. ಎನ್ನಲಾಗುತ್ತಿದೆ. ಭೀಮಣ್ಣ ನಾಯ್ಕ ಕಾಗೇರಿಯವರ ಎದುರು ಮೂರು ಬಾರಿ ಗೆದ್ದಿದ್ದಾರೆ ಎನ್ನುವುದು ಈಗ ಇತಿಹಾಸ.
ಶಿರಸಿ-ಸಿದ್ಧಾಪುರ ಜೆ.ಡಿ.ಎಸ್. ಅಭ್ಯರ್ಥಿಕೂಡಾ ಕಾಂಗ್ರೆಸ್ ಯಾರಿಗೇ ಟಿಕೇಟ್ ಕೊಟ್ಟರೂ ನಮಗೇನೂ ತಲೆಬಿಸಿ ಇಲ್ಲ ಆದರೆ ಭೀಮಣ್ಣನವರಿಗೆ ಕಾಂಗ್ರೆಸ್ ಟಿಕೇಟ್ ತಪ್ಪಿದರೆ ತಮಗೆ ಲಾಭ ಎನ್ನುತಿದ್ದಾರಂತೆ!
ಆಟಕಿದ್ದರೂ ಲೆಕ್ಕಕ್ಕೇ ಇಲ್ಲದ ಆಪ್ ಅಭ್ಯರ್ಥಿ ಕೂಡಾ ಭೀಮಣ್ಣ ನಾಯ್ಕರಿಗೆ ಟಿಕೇಟ್ ಸಿಗದಿದ್ದರೆ ತಮಗೇ ಲಾಭ ಎಂದುಕೊಂಡು ಚುನಾವಣಾ ತಯಾರಿ ನಡೆಸುತಿದ್ದಾರಂತೆ! ಹೀಗೆ ಎದುರಾಳಿಗಳ ಎದೆ ನಡುಗಿಸಿರುವ ಭೀಮಣ್ಣ ಬಗ್ಗೆ ಕ್ಷೇತ್ರದಲ್ಲಿ ಅವರ ವಿರೋಧಿಗಳು, ಪ್ರತಿಸ್ಫರ್ಧಿಗಳು ತಮ್ಮದೇ ರೀತಿಯಲ್ಲಿ ಅವರ ವಿರುದ್ಧ ಅಪಪ್ರಚಾರ ನಡೆಸಿದ್ದಾರಂತೆ!
ಇನ್ನೂ ಟಿಕೇಟ್ ಪಕ್ಕಾ ಆಗದ ಭೀಮಣ್ಣ ಎಂದಿನ ನಿರ್ಲಿಪ್ತತೆಯಲ್ಲೇ ಟಿಕೇಟ್ ನಿರೀಕ್ಷೆಯಲ್ಲಿದ್ದಾರೆ. ಆದರೆ ಇನ್ನೂ ಅಭ್ಯರ್ಥಿಯೇ ಆಗದೆ, ಚುನಾವಣೆಯ ಅಖಾಡಕ್ಕೇ ಇಳಿಯದೆ ವಿರೋಧಿಗಳು,ಪ್ರತಿಸ್ಫರ್ಧಿಗಳು, ಅಪಪ್ರಚಾರದ ಮಾಧ್ಯಮಗಳಲ್ಲೆಲ್ಲಾ ನೇರ ಗುರಿಯಾಗಿರುವುದು ಅವರ ಭೀಮಬಲದ ಪ್ರತಿಬಿಂಬ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಭೀಮಣ್ಣ ತಮ್ಮ ರಾಜಕೀಯ ಜೀವನದಲ್ಲಿ ಗೆದ್ದಿದ್ದು ಒಂದು ಬಾರಿ ಜಿ.ಪಂ. ಚುನಾವಣೆ ಮಾತ್ರ, ಮೂವತ್ತು ವರ್ಷಗಳಲ್ಲಿ ಐದಾರು ಚುನಾವಣೆ ಸೋತು ಅನುಕಂಪ,ಸರಳತೆ, ಪಕ್ಷ, ಜಾತಿಯ ಬೆಂಬಲಗಳಿಂದ ಈಗಲೂ ಚಾಲ್ತಿಯಲ್ಲಿದ್ದು, ವಿರೋಧಿಗಳಿಗೆ ಸಿಂಹಸ್ವಪ್ನವಾಗಿರುವ ಭೀಮಣ್ಣ ನಾಯ್ಕ ತಮ್ಮ ಚುನಾವಣಾ ಪ್ರಚಾರ, ಶೈಲಿ ಬದಲಿಸಿಕೊಂಡರೆ ಈ ಬಾರಿಯಾದರೂ ವಿಧಾನಸೌಧ ಪ್ರವೇಶಿಸಬಹುದು ಎನ್ನುವ ಅಭಿಪ್ರಾಯ ಕ್ಷೇತ್ರದಾದ್ಯಂತ ಸಾಮಾನ್ಯವಾಗಿದೆ.
