

ಸಿದ್ದಾಪುರ
ತಾಲೂಕಿನ ಕಿಲವಳ್ಳಿಯ ಗ್ರಾಮ ದೇವಿ ದೇವಾಲಯದ ಪ್ರಾಂಗಣದಲ್ಲಿ ಶತಚಂಡಿ ಮಹಾಯಾಗ ಮತ್ತು ಬಸವೇಶ್ವರ ದೇವಾಲಯದ ಶಿಖರ ಪ್ರತಿಷ್ಠಾಪನೆ ಆದಿ ಚುಂಚನಗಿರಿ ಮಹಾಸಂಸ್ಥಾನಮಠದ ೭೨ನೇ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು.

ನಂತರ ನಡೆದ ಧರ್ಮಸಭೆ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿ ಮಾನವ ಜೀವನದ ಮುಖ್ಯ ಉದ್ದೇಶ ಮುಕ್ತಿ ಪಡೆಯುವುದಾಗಿದೆ. ಮುಕ್ತಿ ಪಡೆಯುವುದಕ್ಕೆ ಕರ್ಮ ಮಾರ್ಗ, ಭಕ್ತಿ ಮಾರ್ಗ ಹಾಗೂ ಯೋಗ ಮಾರ್ಗದಿಂದ ಮಾತ್ರ ಸಾಧ್ಯ
ಕರ್ಮ, ಭಕ್ತಿ ಹಾಗೂ ಯೋಗ ಮಾರ್ಗದ ಕುರಿತು ವಿವರವಾಗಿ ತಿಳಿಸಿದ ಶ್ರೀಗಳು ಮಠದ ಸೇವೆ ಮಾಡಬೇಕು. ಉಪಾಸನೆ ಮಾಡಬೇಕು. ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮಲ್ಲಿರುವ ದೋಷಗಳನ್ನು ಹಾಗೂ ರಾಕ್ಷಸಿಗುಣಗಳನ್ನು ಹೋಗಲಾಡಿಸುವುದಕ್ಕೆ ನಮ್ಮೊಳಗಿನ ದೈವತ್ವವನ್ನು ಅರಿತುಕೊಳ್ಳಲು ಸಹಾಯ ಮಾಡುವ ಶಿಕ್ಷಣವನ್ನು ನಾವು ಅಳವಡಿಸಿಕೊಳ್ಳಬೇಕು. ಅಂತಹ ವ್ಯಕ್ತಿ ಮಾತ್ರ ಸಮಾಜವನ್ನು ಅರ್ಥಮಾಡಿಕೊಂಡು ಸೇವೆ ಮಾಡಲು ಸಮರ್ಥನಾಗುತ್ತಾನೆ.
ತಾಯಂದಿರು ಎಚ್ಚರವಹಿಸಿ ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರವನ್ನು ಕಲಿಸಬೇಕು. ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ದೊರಕಿದಾಗ ಮಾತ್ರ ಮಕ್ಕಳು ಸತ್ಪçಜೆಗಳಾಗಲು ಸಾಧ್ಯ ಎಂದು ಹೇಳಿದರು.
ಆದಿ ಚುಂಚನಗಿರಿ ಮಹಾಸಂಸ್ಥಾನಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಮಿರ್ಜಾನ ಶಾಖಾಮಠದ ಶ್ರೀ ನಿಶ್ಚಲಾನಂದ ಶ್ರೀಗಳು ಸಾನಿಧ್ಯವಹಿಸಿದ್ದರು.
ಶತಚಂಡಿ ಯಾಗ ಸಮಿತಿ ಅಧ್ಯಕ್ಷ ಎನ್.ಎಲ್.ಗೌಡ ಕಿಲವಳ್ಳಿ ಅಧ್ಯಕ್ಷತೆವಹಿಸಿದ್ದರು.
ವಿ.ದತ್ತಮೂರ್ತಿ ಭಟ್ಟ ಶಿವಮೊಗ್ಗ, ಸತ್ಯನಾರಾಯಣ ಪಟಗಾರ, ನಿವೃತ್ತ ಇಂಜಿನಿಯರ್ ಆರ್.ಎನ್.ಪಟಗಾರ,ಸೀತಾರಾಮ ಗೌಡ ಕುಳಿಕಟ್ಟು ಉಪಸ್ಥಿತರಿದ್ದರು.
ಬೆಳಗ್ಗೆ ವೇ.ವೆಂಕಟ್ರಮಣ ಕೃಷ್ಣ ಭಟ್ಟ ಹಾಗೂ ವೇ.ಮಂಜುನಾಥ ಗ.ಭಟ್ಟ ಇವರ ಮಾರ್ಗದರ್ಶನದಲ್ಲಿ ದೇವಿ ಸಪ್ತಸತಿ ಪಾರಾಯಣ, ಶತಚಂಡಿ ಯಾಗ, ಪೂರ್ಣಾಹುತಿ ಜರುಗಿತು.
ಸ್ವಾಗತ: ಸಿದ್ದಾಪುರ ತಾಲೂಕಿಗೆ ಆಗಮಿಸಿದ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ. ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರನ್ನು ಪೂರ್ಣಕುಂಬದೊಂದಿಗೆ ಸ್ವಾಗತಿಸಿ ಬೈಕ್ ರ‍್ಯಾಲಿ, ವಾಧ್ಯ, ಡೊಳ್ಳು ಕುಣಿತದೊಂದಿಗೆ ಮೆರವಣಿಗೆಯ ಮೂಲಕ ಕಿಲವಳ್ಳಿ ಊರಿಗೆ ಸ್ವಾಗತಿಸಲಾಯಿತು. ನಂತರ ಗುರು ಪಾದುಕಾ ಪೂಜೆ, ಬಸವೇಶ್ವರ ದೇವಾಲಯದ ಶಿಖರ ಪ್ರತಿಷ್ಠಾಪನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.
ನಾಲ್ಕು ಸಾವಿರಕ್ಕೂ ಹೆಚ್ಚು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳ ದರ್ಶನ ಪಡೆದು ಪ್ರಸಾದ ಭೋಜನ ಸ್ವೀಕರಿಸಿದರು.
ತೇಜಸ್ವಿನಿ ಹಾಗೂ ಪ್ರಣತಿ ಪ್ರಾರ್ಥನೆ ಹಾಡಿದರು. ವಿ.ಆರ್.ಗೌಡ ಸ್ವಾಗತಿಸಿದರು. ಮೋಹನ ಗೌಡ ಪ್ರಾಸ್ತಾವಿಕ ಮಾತನಾಡಿದರು.ಆರ್.ಬಿ.ಗೌಡ ವಂದಿಸಿದರು. ವಿಷ್ಣು ಪಟಗಾರ ಕಾರ್ಯಕ್ರಮ ನಿರ್ವಹಿಸಿದರು.
