

——————————————————————

ಇಡೀ ದೇಶದಲ್ಲೇ ಹೈನುಗಾರಿಕೆ ಉತ್ಪಾದನೆ ಹಾಗೂ ಸಹಕಾರಿ ಸಂಸ್ಕರಣೆ ಅನುಪಾತ ಗರಿಷ್ಠ ಪ್ರಮಾಣದಲ್ಲಿರುವ ರಾಜ್ಯದ ರೈತಾಪಿ ಹೈನುಗಾರಿಕೆಯನ್ನು ಸರ್ವನಾಶ ಮಾಡಲು, ಡೈರಿ ಕ್ಷೇತ್ರದ ಕಾರ್ಪೋರೇಟೀಕರಣ ಸಾಧಿಸಲು ,ಆಸ್ಟ್ರೇಲಿಯಾ, ಡೆನ್ಮಾರ್ಕ್, ನ್ಯೂಜಿಲೆಂಡ್ ಮುಂತಾದ ಯೂರೋಪಿಯನ್ ದೇಶಗಳ ಡೈರಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಅಮೂಲ್ ಹೆಸರಿನ ಮರೆಯಲ್ಲಿ ನಡೆಯುತ್ತಿರುವ ಬಹು ದೊಡ್ಡ ಹುನ್ನಾರವನ್ನು ಹಿಮ್ಮೆಟ್ಟಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯದ ರೈತಾಪಿ ಸಮುದಾಯ, ಸಹಕಾರಿ ಸಮುದಾಯ ಹಾಗೂ ನಾಡಿನ ಜನತೆಯಲ್ಲಿ ವಿನಂತಿಸಿ ದೆ.
ಲಾಭದಾಯಕ ದರವನ್ನು ನಿಗದಿಪಡಿಸುವಂತೆ ,ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವಂತೆ ನಿರಂತರವಾಗಿ ರಾಜ್ಯದ ಹಾಲು ಉತ್ಪಾದಕರು ಪ್ರತಿಭಟನೆ-ಹೋರಾಟಗಳನ್ನು ನಡೆಸಿ ಆಗ್ರಹಿಸಿದ್ದರೂ ನಿರ್ಲಕ್ಷಿಸಿದ್ದ ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೆಎಂಎಫ್ ನ 16 ಜಿಲ್ಲಾ ಹಾಲು ಒಕ್ಕೂಟಗಳ ಮಾರುಕಟ್ಟೆ ಕಸಿಯಲು ಟೊಂಕ ಕಟ್ಟಿ ನಿಂತಿರುವುದು ಹಾಗೂ ಚುನಾವಣಾ ಸಂದರ್ಭದಲ್ಲೂ ನಿರ್ಲಜ್ಜವಾಗಿ ಸಮರ್ಥಿಸುತ್ತಿರುವುದು ಅತ್ಯಂತ ನಾಚೀಕೆಗೇಡು ಮಾತ್ರವಲ್ಲ ರೈತರನ್ನು ನಾಶ ಮಾಡುವ ಸರ್ವಾಧಿಕಾರಿ ಠೇಂಕಾರ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಉತ್ತರ ಕನ್ನಡ ಜಿಲ್ಲಾ ಸಮಿತಿ ಕಟುವಾಗಿ ಟೀಕಿಸಿದೆ.
ಭಾರತದ ಡೈರಿ ಉತ್ಪನ್ನಗಳ ಮಾರುಕಟ್ಟೆಯ ಒಟ್ಟು ಗಾತ್ರ ಸುಮಾರು 12 ಲಕ್ಷ ಕೋಟಿ ರೂ. ನಷ್ಟಿದೆ. ದೇಶದ ಎರಡು ಬೃಹತ್ ಡೈರಿ ಸಹಕಾರಿ ಸಂಸ್ಥೆಗಳ ವಹಿವಾಟು ಸುಮಾರು ಅರ್ದ ಲಕ್ಷ ಕೋಟಿ ಯಷ್ಟು ಮಾತ್ರ ಇದೆ. ದೇಶೀಯ ಸಹಕಾರಿ ಹೈನುಗಾರಿಕೆ ಬೆಳವಣಿಗೆಗೆ ಇಷ್ಟು ವಿಫುಲ ವಾದ ಅವಕಾಶಗಳಿದ್ದರೂ ವಹಿವಾಟು ಗಾತ್ರದಲ್ಲಿ ಸಣ್ಣದಾಗಿರುವ ಕೆಎಂಎಫ್ ನಂತಹ ಸಹಕಾರಿ ಸಂಸ್ಥೆಗಳನ್ನು ನಾಶ ಮಾಡಿ ಕೇಂದ್ರೀಕರಣವನ್ನು ಉತ್ತೇಜಿಸುವುದು ಹಾಗೂ ಕಾರ್ಪೋರೇಟೀಕರಣ ಸಾಧಿಸುವುದು ಗ್ರಾಮೀಣ ನಿರುದ್ಯೋಗ ಮತ್ತು ಬಡತನವನ್ನು ತೀವ್ರಗೊಳಿಸುತ್ತದೆ ಹಾಗೂ ವಲಸೆ ಮತ್ತು ರೈತರ ಆತ್ಮಹತ್ಯೆಗಳನ್ನು ಹೆಚ್ಚಿಸುತ್ತದೆ. ದೊಡ್ಡದಾಗಿ ಆತ್ಮ ನಿರ್ಭರತೆ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ ಸರ್ಕಾರ , ಕೃಷಿ ಉತ್ಪನ್ನಗಳ ಖಾತರಿ ಖರೀದಿಯ ಮಾದರಿ ವ್ಯವಸ್ಥೆಯನ್ನು ನಾಶ ಮಾಡುತ್ತಿದೆ .ಈ ಬಗ್ಗೆ ರಾಜ್ಯದ ಜನರಲ್ಲಿ ವ್ಯಾಪಕ ಪ್ರಚಾರಾಂದೋಲನ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS)ದ ಕರ್ನಾಟಕ ರಾಜ್ಯ ಸಮಿತಿ ತೀರ್ಮಾನಿಸಿದೆ.
ಜಾನುವಾರು ಸಂರಕ್ಷಣೆ ಹೆಸರಿನಲ್ಲಿ ತಂದಿರುವ ಗೋ ಹತ್ಯೆ ನಿಷೇಧ ಕಾಯ್ದೆ 2020 ಹಾಗೂ ಬಹು ರಾಜ್ಯಗಳ ಸಹಕಾರಿ ಸಂಘಗಳ ತಿದ್ದುಪಡಿ ಕಾಯ್ದೆ 2022 , ಹೈನುಗಾರಿಕೆ ಮೇಲಿನ ಜಿಎಸ್ ಟಿ ಕ್ರಮಗಳು, ರೈತಾಪಿ ಹೈನುಗಾರಿಕೆ ಯನ್ನು ನಿರುತ್ಸಾಹಗೊಳಿಸುವ , ಕಾರ್ಪೋರೇಟೀಕರಣವನ್ನು ಉತ್ತೇಜಿಸುವ ಅಂಶಗಳನ್ನು ಒಳಗೊಂಡಿದೆ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಈಗಾಗಲೇ ರೈತರನ್ನು ಅಡ್ಡಗಟ್ಟಿ ಹಲ್ಲೆ ನಡೆಸುವ ,ಜೈಲಿಗೆ ತಳ್ಳುವ ಹಲವು ಪ್ರಕರಣಗಳು ವರದಿಯಾಗಿವೆ. ಮುಕ್ತವಾಗಿದ್ದ ಜಾನುವಾರು ಸಾಗಾಣಿಕೆ, ಸಾಂಪ್ರದಾಯಿಕ ದನಗಳ ಜಾತ್ರೆಗಳು ಹಲವು ನಿರ್ಬಂಧಗಳನ್ನು ಅನುಭವಿಸುತ್ತಿದ್ದು ಜಾನುವಾರುಗಳ ಸಂಖ್ಯೆ ಹಾಗೂ ಹಾಲು ಉತ್ಪಾದನೆ ತೀವ್ರವಾಗಿ ಕುಸಿಯುತ್ತಿದೆ. ಅದೇ ಸಂದರ್ಭದಲ್ಲಿ ಜಾನುವಾರು ಮಾಂಸದ ರಪ್ತು ಉದ್ಯಮ ಬಹು ವೇಗವಾಗಿ ಬೆಳೆಯುತ್ತಿದೆ. ಕೃಷಿ ಹಾಗೂ ರೈತ ವಿರೋಧಿಯಾದ ಕೃಷಿ ಕಾಯ್ದೆಗಳನ್ನು ಹಾಗೂ ಸಹಕಾರಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸಬೇಕು , ಹೈನುಗಾರಿಕೆ ಮೇಲೆ ಹಾಕಿರುವ ಜಿಎಸ್ ಟಿ ರದ್ದುಪಡಿಸಬೇಕು ಮತ್ತು ರೈತರಿಂದ ಖರೀದಿಸುವ ಲೀಟರ್ ಹಾಲಿಗೆ ಕನಿಷ್ಠ 50 ರೂ ನಿಗದಿಪಡಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ, ಕೇಂದ್ರ ಸರ್ಕಾರಗಳನ್ನು ಆಗ್ರಹಿಸುತ್ತದೆಯೆಂದು ಜಿಲ್ಲಾ ಅಧ್ಯಕ್ಷ ಶಾಂತಾರಾಮ ನಾಯಕ ತಿಳಿಸಿದ್ದಾರೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
