

ಪುಕ್ಕಟೆ ಅಕ್ಕಿ ನೀಡುತ್ತೇವೆ, ಉಚಿತ ವಿದ್ಯುತ್ ಕೊಡುತ್ತೇವೆ, ಮಾಸಾಶನ ನೀಡುತ್ತೇವೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಹಸಿರು-ಉಸಿರು ರಾಜಕೀಯ ಮಾಡುವ ದಿನ ಬರುವುದು ಯಾವಾಗ?
ಹತ್ತಾರು ಲಂಚದ ರೂಪದ ಆಮಿಷವನ್ನು ಎಲ್ಲ ರಾಜಕೀಯ ಪಕ್ಷಗಳು ಮಾಡುತ್ತಿವೆ. ಆದರೆ ಯಾವೊಂದು ಪಕ್ಷ ಅಥವಾ ಅಭ್ಯರ್ಥಿಯಿಂದ ಹವಾಮಾನ ವೈಪರೀತ್ಯ ಹಾಗೂ ಪರಿಸರ ಸಂರಕ್ಷಣೆ ಕುರಿತ ಒಂದೇ ಒಂದು ಮಾತು ಕೆಳಿ ಬರುತ್ತಿಲ್ಲ.
ಕಳೆದ ಎರಡು ವಾರದಿಂದ ಊರಿನ ಕಡೆ ಹೆಚ್ಚಿನ ದಿನವಿದ್ದೇನೆ. ನಮ್ಮ ಮನೆಯು ಪಶ್ಚಿಮ ಘಟ್ಟದ ಅತ್ಯಂತ ಪ್ರಸಿದ್ಧ ಕತ್ತಲೆ ಕಾನಿನ ಭಾಗದಲ್ಲಿ ಬರುತ್ತದೆ. ಆದರೆ ನಾನು ಇವತ್ತಿನವರೆಗೆ ಈ ರೀತಿಯ ಬಿಸಿಲಿನ ಧಗೆಯನ್ನು ಕಂಡಿಯೇ ಇರಲಿಲ್ಲ. ನಮ್ಮ ಊರಿನ ಹಿರಿಯರು ಹೇಳುವಂತೆ ಇದೇ ಮೊದಲ ಬಾರಿಗೆ ತಾಪವು ತಾರಕಕ್ಕೇರಿದೆ. ಹವಾಮಾನ ವೈಪರೀತ್ಯದ ಭೀಕರ ಪರಿಣಾಮಗಳು ಕಾಣಿಸುತ್ತಿವೆ. ಹಚ್ಚ ಹಸಿರಿನ ಕಾಡಿನ ಪ್ರದೇಶದಲ್ಲೂ ತಾಪಮಾನವು ೪೦ ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಉತ್ತರ ಕರ್ನಾಟಕದ ಯಾವುದೋ ಊರಿನಲ್ಲಿ ಓಡಾಡಿದಂತೆ ಅನುಭವ ಆಗುತ್ತಿದೆ. ಒಂದರ್ಧ ಗಂಟೆ ಕೂಡ ಮನೆಯಿಂದ ಹೊರಗಿರಲು ಆಗುತ್ತಿಲ್ಲ. ಮಲೆನಾಡಿನ ಸಾಕಷ್ಟು ಕೂಡ ಏಪ್ರಿಲ್ ಎರಡನೇ ವಾರದಲ್ಲೇ ನೀರಿನ ಕೊರತೆ ಶುರುವಾಗಿದೆ. ಈ ಹಿಂದೆ ಮೇ ಅಂತ್ಯದಲ್ಲೂ ಇಂತಹ ಕೆಟ್ಟ ಸ್ಥಿತಿ ಇರಲಿಲ್ಲ.
ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ದಲಿತ, ಕುರುಬ ಎಂದು ಜಾತಿ ರಾಜಕೀಯ ಮಾಡುತ್ತ ಕುಳಿತರೆ, ಬಿಸಿಲಿನ ಧಗೆಗೆ ಯಾವ ಜಾತಿಯೂ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಅತ್ಯಂತ ತುರ್ತಾಗಿ ನೈಜ ಮಳೆ ಕಾಡನ್ನು ಬೆಳೆಸಲು ಸಹಕರಿಸುವ ಮಾತುಗಳು ಅಭ್ಯರ್ಥಿ ಹಾಗೂ ಪಕ್ಷದ ಪ್ರಣಾಳಿಕೆಯಲ್ಲಿ ಬರುವಂತೆ ಮಾಡಬೇಕಿದೆ.
ಸಾಮಾಜಿಕ ಅರಣ್ಯ ಅಥವಾ ಅಕೇಶಿಯಾದಂಥ ಮರಗಳನ್ನು ನೆಟ್ಟು ಉಪಗ್ರಹದ ಸಮೀಕ್ಷೆಯಲ್ಲಿ ಹಸಿರು ತೋರಿಸುವ ಹುಚ್ಚು ಬಿಡಬೇಕಿದೆ. ಬದಲಾಗಿ ಮನೆಗೆ ಮತ ಕೇಳಲು ಬರುವ ಪಕ್ಷದ ಪ್ರತಿನಿಧಿಗಳ ಬಳಿ ನೈಜ ಮಳೆ ಕಾಡಿನ ಅಭಿವೃದ್ಧಿಗೆ ಒತ್ತಾಯ ಹೇರಬೇಕಿದೆ. ಇಲ್ಲವಾದಲ್ಲಿ ಭವಿಷ್ಯ ಇನ್ನಷ್ಟು ನರಕವಾಗಲಿದೆ. ಹವಾಮಾನ ವೈಪರೀತ್ಯ ಇದೇ ರೀತಿ ಮುಂದುವರಿದರೆ ಕೃಷಿ ವ್ಯವಸ್ಥೆ ಸಂಪೂರ್ಣ ಹಾಳಾಗಲಿದೆ. ಪಕ್ಷಗಳ ಪುಕ್ಕಟೆ ರಾಜಕೀಯಕ್ಕಿಂತ ಪರಿಸರ ರಾಜಕೀಯ ಅತ್ಯಗತ್ಯವಾಗಿದೆ.
ಕಳೆದ ಬಾರಿ ನನ್ನ ಕೇರಳದ ಸ್ನೇಹಿತರೊಬ್ಬರು ಹೇಳುತ್ತಿದ್ದರು. ಅಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ವರ್ಷದಲ್ಲಿ ಎಷ್ಟು ಮರಗಳನ್ನು ನೆಡುತ್ತೇವೆ ಎನ್ನುವುದನ್ನು ವೈಯಕ್ತಿಕ ಪ್ರಣಾಳಿಕೆಯಲ್ಲಿ ಹೇಳುತ್ತಾರಂತೆ. ಇದು ಎಷ್ಟರ ಮಟ್ಟಿಗೆ ನಿಜ ಎನ್ನುವುದು ಗೊತ್ತಿಲ್ಲ. ಆದರೆ ನಾವು ರಾಜ್ಯದ ಪ್ರತಿ ಕ್ಷೇತ್ರದಲ್ಲಿ ಇಂತಹ ಮಾತುಗಳನ್ನು ಹೇಳುವ ಅಭ್ಯರ್ಥಿಗೆ ಮಣೆ ಹಾಕಬೇಕಿದೆ ಅಥವಾ ಪ್ರತಿಯೊಬ್ಬ ಅಭ್ಯರ್ಥಿ ಇಂತಹ ವಚನ ನೀಡಬೇಕು. ಹಾಗೆಯೇ ಕಡ್ಡಾಯವಾಗಿ ನೈಸರ್ಗಿಕ ಹಾಗೂ ಸ್ಥಳೀಯ ಮರಗಳನ್ನು ನೆಡುವಂತಹ ಒತ್ತಡ ಹೇರಲೇಬೇಕು.
ಈ ಜಾತಿ ಹಾಗೂ ಹಣದ ವಹಿವಾಟಿನ ರಾಜಕೀಯದ ಹೊಲಸು ಚರ್ಚೆಗಳ ಮಧ್ಯೆ ಪರಿಸರ ರಾಜಕೀಯ ಮಾತುಗಳನ್ನು ಎತ್ತುವ ಪ್ರಯತ್ನ ಮಾಡೋಣ. ಈ ನೆಪದಲ್ಲಾದರೂ ನಮಗೆ ಉಸಿರಾಡಲು ಆಮ್ಲಜನಕ ನೀಡುವ ಹಾಗೂ ಬಿಸಿಲಿನ ಧಗೆ ಇಳಿಸಿ ತಂಪೆರೆಯುವ ಮರಗಳನ್ನು ನೆಡುವ ರಾಜಕೀಯ ಬೆಂಬಲಿಸೋಣ. ಹಸಿರು-ಉಸಿರು ರಾಜಕೀಯ ಎಲ್ಲರ ಮಂತ್ರವಾಗಿಸುವ ಪಣ ತೋಡೋಣ.
-ರಾಜೀವ ಹೆಗಡೆ
