ಪ್ರತಿಷ್ಠಾಪನಾ ಮಹೋತ್ಸವ
ಸಿದ್ದಾಪುರ
ಶ್ರೀಕ್ಷೇತ್ರ ಕೋಡಿಗದ್ದೆಯ ಶ್ರೀ ಮಹಿಷಾಸುರಮರ್ದಿನಿ ದೇವಿಯ ನವೀಕೃತ ದಿವ್ಯ ಮಂಗಳೆಯ ವಿಗ್ರಹದ ಪ್ರತಿಷ್ಠಾಪನಾ ಮಹೋತ್ಸವ ಮೇ.೬,೭,೮,೯ರಂದು ಜರುಗಲಿದೆ ಎಂದು ಶ್ರೀ ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ, ಪ್ರತಿಷ್ಠಾಪನಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ವಿಜಯ ಹೆಗಡೆ ದೊಡ್ಮನೆ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿ ಶ್ರೀಶಂಭುಲಿಂಗೇಶ್ವರ ಮಹಿಷಾಸುರಮರ್ದಿನಿ ದೇವಾಲಯವಿರುವ ಶ್ರೀಕ್ಷೇತ್ರ ಕೋಡಿಗದ್ದೆ ಅತ್ಯಂತ ಪ್ರಾಚೀನ ಮತ್ತು ಪುಣ್ಯಕ್ಷೇತ್ರ. ಮಹಾತಪಸ್ವಿ ದೂರ್ವಾಸ ಮುನಿಗಳಿಂದ ಪ್ರತಿಷ್ಠಾಪನೆಗೊಂಡಿತೆಂಬ ಪ್ರತೀತಿ ಇರುವ ಈ ಕ್ಷೇತ್ರಕ್ಕೆ ಸ್ಥಳೀಯರು ಮಾತ್ರವಲ್ಲದೇ ಹೊರ ರಾಜ್ಯ ಭಕ್ತಾದಿಗಳು ಶೃದ್ದಾಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಪರಮಪೂಜ್ಯ ಶ್ರೀಧರಸ್ವಾಮಿಗಳು ಇಲ್ಲಿ ೪ ತಿಂಗಳು ತಪಸ್ಸು ಆಚರಿಸಿದ್ದಲ್ಲದೇ ಚಾರ್ತುಮಾಸ್ಯವನ್ನು ನಡೆಸಿದ್ದರು.
ಶಿಥಿಲವಾಗಿದ್ದ ಶ್ರೀ ಶಂಬುಲಿಂಗೇಶ್ವರ ಮತ್ತು ಶ್ರೀ ಮಹಿಷಾಸುರ ಮರ್ದಿನಿ ದೇವಾಲಯವನ್ನು ಎರಡು ದಶಕಗಳ ಹಿಂದೆ ನೂತನವಾಗಿ ನಿರ್ಮಿಸಲಾಗಿದ್ದು ಮಹಿಷಾಸುರ ಮರ್ದಿನಿ ದೇವಿಯ ವಿಗ್ರಹ ಸ್ವಲ್ಪ ಭಿನ್ನವಾಗಿರುವದು ಅಷ್ಟಮಂಗಲ ಪ್ರಶ್ನೆಯಿಂದ ತಿಳಿದುಬಂದು, ಆದಷ್ಟು ಶೀಘ್ರವಾಗಿ ನೂತನ ವಿಗ್ರಹ ಪ್ರತಿಷ್ಠಾಪಿಸಲು ಸೂಚನೆಯಾಗಿತ್ತು. ಹಿಂದಿನ ದೇವಾಲಯ ಆಡಳಿತ ಕಮಿಟಿ ಆ ಕುರಿತು ಕಾರ್ಯಪ್ರವೃತ್ತವಾಗಿದ್ದು ಈಗ ವಿಗ್ರಹ ಪರಿಪೂರ್ಣವಾಗಿ ಜಲಾದಿವಾಸದಲ್ಲಿದೆ. ನೂತನ ವಿಗ್ರಹದ ಪ್ರತಿಷ್ಠಾಪನೆ ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವೇ|ಕಟ್ಟೆ ಶಂಕರ ಭಟ್ಟ ಅವರ ನೇತೃತ್ವದಲ್ಲಿ ಸ್ಥಳೀಯ ವೈದಿಕರ ನೆರವಿನೊಂದಿಗೆ ೪ ದಿನಗಳ ಕಾಲ ನಡೆಯಲಿದ್ದು ಚಂಡಿಕಾಯಾಗದೊಂದಿಗೆ ಸಂಪನ್ನಗೊಳ್ಳಲಿದೆ ಎಂದರು.
ಸಮಿತಿಯ ಅಧ್ಯಕ್ಷ ಶ್ರೀಧರ ಭಟ್ಟ ಗಡಿಹಿತ್ಲು ಈ ಅಪೂರ್ವ ಕಾರ್ಯಕ್ರಮಕ್ಕೆ ಭಕ್ತಾದಿಗಳು ತನು,ಮನ,ಧನದ ಸರ್ವ ವಿಧ ಸೇವೆ ಸಲ್ಲಿಸುವದರ ಜೊತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಸಮಿತಿಯ ಪದಾಧಿಕಾರಿಗಳಾದ ಶಾಂತಕುಮಾರ ಭಟ್ಟ ದೊಡ್ಮನೆ, ಅಣ್ಣಪ್ಪ ನಾಯ್ಕ ಕೋಡಿಗದ್ದೆ, ಶ್ರೀಧರ ಗುರ್ಕೋಡು, ಆರ್.ಎಸ್.ಭಟ್ಟ ಕಲ್ಲಾಳ ಉಪಸ್ಥಿತರಿದ್ದರು.
ಸಿದ್ದಾಪುರ
ಶಂಕರಾಚಾರ್ಯರ ಅದ್ವೆತ ತತ್ವ ಸಿದ್ದಾಂತವನ್ನು ಎಲ್ಲರೂ ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಶ್ರೀಮನ್ನೆಲೆಮಾವಿನ ಮಠದ ಶ್ರೀ ಶ್ರೀಮಾಧವಾನಂದ ಭಾರತೀ ಸ್ವಾಮಿಗಳು ಹೇಳಿದರು.
ತಾಲೂಕಿನ ಶ್ರೀಮನ್ನೆಲೆಮಾವಿನ ಮಠದಲ್ಲಿ ಶಂಕರ ಪಂಚಮಿಯಂದು ವೇದ ವಿದ್ಯಾ ಸಂಸ್ಕಾರ ಮತ್ತು ಸಂಶೋಧನ ಕೇಂದ್ರ ಶ್ರೀಮನ್ನೆಲೆಮಾವಿನ ಮಠ ಇವರಿಂದ ದಿ.ಹೋಬಳಿ ನಾರಾಯಣ ತಿಮ್ಮಣ್ಣ ಭಟ್ಟ ಹರಿಗಾರ ರ ಸ್ಮರಣಾರ್ಥ ‘ಆಚಾರ್ಯ ಶಂಕರಶ್ರೀ’ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸರಾದ ಡಾ.ಶ್ರೀರಾಮ ಭಟ್ಟ ದಂಪತಿ ಸಣ್ಣಗದ್ದೆ ಧಾರವಾಡ ಅವರಿಗೆ ಶ್ರೀಗಳು ಪ್ರದಾನ ಮಾಡಿ ಆಶೀರ್ವಚನ ನೀಡಿದರು.
ಮಠದ ಅಧ್ಯಕ್ಷ ಜಿ.ಎಂ.ಹೆಗಡೆ ಹೆಗ್ನೂರು ಹಾಗೂ ಆಡಳಿತ ಮಂಡಳಿ ಸದಸ್ಯರುಗಳಿದ್ದರು.
ಡಾ.ಜಿ.ಎನ್.ಭಟ್ಟ ಹರಿಗಾರ ಪ್ರಾಸ್ತಾವಿಕ ಮಾತನಾಡಿದರು. ವೆಂಕಟ್ರಮಣ ಭಟ್ಟ ಹೆಗ್ಗಾರಬೈಲ್ ಸ್ವಾಗತಿಸದರು. ವಿ.ನಾರಾಯಣ ಜೋಶಿ ಹೊಸಗದ್ದೆ ಪ್ರಶಸ್ತಿಪತ್ರ ವಾಚನ ಮಾಡಿದರು. ವಿನಾಯಕ ಭಟ್ಟ ನೆಲೆಮಾವ ಕಾರ್ಯಕ್ರಮ ನಿರ್ವಹಿಸಿದರು. ಮಠದ ಕಾರ್ಯದರ್ಶಿ ಟಿ.ವಿ.ಹೆಗಡೆ ಸಹಕರಿಸಿದರು. (ಕಪ್ರಡಾ)