

ನೆಚ್ಚಿನ ನಾಯಕನ ಗೆಲುವಿಗೆ ಬೆಟ್ಟುಕಟ್ಟಿ ಅಭಿಮಾನ ಮೆರೆದವರನ್ನು ನೋಡಿದ್ದೇವೆ. ತಮ್ಮ ನಾಯಕ ಗೆದ್ದರೆ ಹರಕೆ, ಸೇವೆ ನೀಡುವವರನ್ನು ಕಂಡಿದ್ದೇವೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಉರುಳುಸೇವೆ ಸಲ್ಲಿಸಿ ಈಡುಗಾಯಿ ಒಡೆಯುವ ಮೂಲಕ ಅಭಿಮಾನ ಮರೆದ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಈ ಬಾರಿ ಭೀಮಣ್ಣ ನಾಯ್ಕ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಹಲವು ಬಾರಿ ಸೋತಿದ್ದ ಭೀಮಣ್ಣ ನಾಯ್ಕ ಈ ಬಾರಿ ಗೆದ್ದರೆ ದೇವರಿಗೆ ಹರಕೆ ಒಪ್ಪಿಸುವುದಾಗಿ ಬೇಡಿಕೊಂಡವರು ಅನೇಕ ಜನ. ಸಿದ್ಧಾಪುರದ ಗೋಳಗೋಡಿನ ಜನತೆ ಈ ಬಾರಿ ತಮ್ಮ ನಾಯಕ ಬೀಮಣ್ಣ ನಾಯ್ಕ ವಿಜಯಶಾಲಿಯಾದರೆ ತಮ್ಮ ಗ್ರಾಮದ ಈಶ್ವರ ದೇವರಿಗೆ ಉರುಳು ಸೇವೆ ಸಲ್ಲಿಸುವುದಾಗಿ ಬೇಡಿಕೊಂಡಿದ್ದರು. ಕಳೆದ ವಾರದ ಚುನಾವಣೆಯಲ್ಲಿ ಜಯಗಳಿಸಿದ ಭೀಮಣ್ಣ ನಾಯ್ಕರ ಪರವಾಗಿ ಹರಕೆ ಹೊತ್ತಿದ್ದ ಕೆಲವರು ಶುಭ ಸೋಮುವಾರವಾದ ಇಂದು ಈಡುಗಾಯಿ ಒಡೆದು, ಉರುಳುಸೇವೆ ಸಲ್ಲಿಸುವ ಮೂಲಕ ತಮ್ಮ ಸೇವೆ ಅರ್ಪಿಸಿದರು.
ಬೀಮಣ್ಣ ನಾಯ್ಕರ ಪರವಾಗಿ ಗೋಳಗೋಡಿನಲ್ಲಿ ಹರಕೆ ಪೂರೈಸಿದರೆ ಸಂಪಖಂಡದ ಯುವಕರು ಚಂದ್ರಗುತ್ತಿ ರೇಣಿಕಾದೇವಿಗೆ ಪೂಜೆ ಸಲ್ಲಿಸಿ ಭೀಮಣ್ಣ ನಾಯ್ಕ ಸಚಿವರಾಗುವಂತೆ ಬೇಡಿಕೊಂಡರು.
ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆ ತಮ್ಮ ನೆಚ್ಚಿನ ನಾಯಕರ ಗೆಲುವಿಗೆ ಪ್ರತಿಯಾಗಿ ಅನೇಕ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ.ಸಿದ್ಧಾಪುರದ ಜನ ದೇವರಿಗೆ ಪೂಜೆ ಸಲ್ಲಿಸಿ, ಹರಕೆ ಪೂರೈಸಿ ಪ್ರಾರ್ಥಿಸುತ್ತಿರುವುದು ಈ ಬಾರಿ ವಿಶೇಶ ಎನಿಸಿಕೊಂಡಿದೆ.

