

ಸಿದ್ಧಾಪುರ,೨೨- ಹೊನ್ನಾವರ ತಾಲೂಕಿನ ಕೆರೆಕೋಣ ನಲ್ಲಿ ಪ್ರೀತಿಪದಗಳ ಸಹಯಾನಿ ಡಾ.ವಿಠ್ಠಲ್ ಭಂಡಾರಿ ನೆನಪು-೨ ಕಾರ್ಯಕ್ರಮ ಸರಳವಾಗಿ ಸಂಪನ್ನವಾಯಿತು.
ಈ ಕಾರ್ಯಕ್ರಮ ಉದ್ಘಾಟಿಸಿದ ಸಿ.ಐ.ಟಿ.ಯು. ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಸಮ ಸಮಾಜದ ವಾಸ್ತವದ ಸಾಮಾಜಿಕ ಪರಿಸರ ನಿರ್ಮಾಣಕ್ಕೆ ಸದಾ ಶ್ರಮಿಸುತಿದ್ದ ಡಾ. ವಿಠ್ಠಲ್ ಭಂಡಾರಿ ನೆನಪು, ಸ್ಮರಣೆಗಳು ಅವರ ಚಿಂತನೆಗಳ ಸಾಕಾರದಿಂದ ಮಾತ್ರ ನಿರಂತರವಾಗಿರಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಮಾತನಾಡಿ ಪ್ರತಿರೋಧ, ಪರ್ಯಾಯಗಳ ಹುಡುಕಾಟದ ಭಂಡಾರಿ ಕುಟುಂಬ ಉತ್ತರ ಕನ್ನಡ ಜಿಲ್ಲೆಯ ಜನರ ಸುಪ್ತಪ್ರಜ್ಞೆ ಬಡಿದೇಳಿಸುವಲ್ಲಿ ಕೆಲವು ದಶಕಗಳಿಂದ ಶ್ರಮಿಸುತ್ತಿದೆ. ಇದರ ನಿರಂತರತೆಗೆ ಅನೇಕ ಸಂಗಾತಿಗಳ ಸಹಕಾರವಿದೆ ಎಂದರು. ಉಪನ್ಯಾಸಕಿ ಕಾವ್ಯಶ್ರೀ ನಾಯ್ಕ ಮನ್ಮನೆ, ಕನ್ನೇಶ್ ಕೋಲಶಿರ್ಸಿ, ರಂಗಕರ್ಮಿ ಅನಂತ ನಾಯ್ಕ ಅಂಬಾರಕೊಡ್ಲು ವಿಠ್ಠಲ್ ಭಂಡಾರಿಯವರ ಬದುಕು, ಬದ್ಧತೆಗಳ ಬಗ್ಗೆ ಸ್ಮರಿಸಿ ಮಾತನಾಡಿದರು.
ಈ ಸಭಾ ಕಾರ್ಯಕ್ರಮದ ನಂತರ ಜಿ.ಕೆ. ಮಾಸ್ತರ್ ಪ್ರಣಯ ಪ್ರಸಂಗ ನಾಟಕ ಪ್ರದರ್ಶನ ಮತ್ತು ಸಭಾ ಕಾರ್ಯಕ್ರಮ ಮೊದಲು ನಡೆದ ವಿನಾಯಕರ ಸುಶ್ರಾವ್ಯ ಗಾಯನ ಕಾರ್ಯಕ್ರಮದ ಮೆರುಗು ಹೆಚ್ಚಿಸಿದ್ದವು.
